ವೇದನೆ ಇಲ್ಲದೆ ಸಾಧನೆ ಅಸಾಧ್ಯ: ಕಣ್ಣನ್‌

KannadaprabhaNewsNetwork | Published : Jun 17, 2024 1:30 AM

ಸಾರಾಂಶ

ಚಿಕ್ಕಮಗಳೂರು, ಸಾಧಕ ವೇದನೆ ಇಲ್ಲದೇ ಯಾವುದೇ ಸಾಧನೆ ಮಾಡಲಾರ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಹೇಳಿದರು.

ಗಾಯಕಿ ಶಿವಮೊಗ್ಗದ ಸುರೇಖಾ ಹೆಗಡೆ ಅವರಿಗೆ ಪೂರ್ವಿ ನಾದೋಪಾಸನಾ ಪ್ರಶಸ್ತಿ ಪ್ರದಾನ । ‘ಪೂರ್ವಿ ಗಾನಯಾನ 100’

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಾಧಕ ವೇದನೆ ಇಲ್ಲದೇ ಯಾವುದೇ ಸಾಧನೆ ಮಾಡಲಾರ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಹೇಳಿದರು.

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಸುಗಮ ಗೀತ ಆಚಾರ್ಯತ್ರಯರಾದ ಪಿ.ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಹಾಗೂ ಸಿ.ಅಶ್ವತ್ಥ್ ಸ್ಮರಣೆ ಹಾಗೂ ಪೂರ್ವಿ ನಾದೋಪಾಸನಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು‘ಪೂರ್ವಿ ಗಾನಯಾನ 100’ರ ಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ, ಸಂಗೀತ ಕಲೆಯಾಗಿ ಅರಳಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ನಮ್ಮ ಬದುಕಿನ ಮುಡಿ ಯೇರಬೇಕು. ಸಂಗೀತ ಕಿವಿಗೆ ಸುಧೆಯಾಗಬೇಕು. ಆ ಗಾನಾಮೃತದಿಂದ ಮನಕೆ ಸಂತರ್ಪಣೆ ಯಾಗಬೇಕು. ಬರೆದಂತಹ ಸಾಹಿತಿಗೆ ಸಂಭ್ರಮಕ್ಕೆ ಸಂಭ್ರಮ ಸಂಘಟಿಸಿದಂತೆ ಹಾಡುಗಾರನ ಮತ್ತು ಲೇಖಕನ ನಡುವೆ ಕೇಳುಗನ ಕಿವಿಗೆ ಕಲ್ಲು ಸಕ್ಕರೆಗೆ ಜೇನುತುಪ್ಪ ಬೆರೆಸಿದಂತೆ ನಮ್ಮ ಬದುಕು ಸಿಹಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರಲ್ಲದೆ. ಎಂ.ಎಸ್.ಸುಧೀರ್‌ ಕೂಡ ಸಾಕಷ್ಟು ಪರಿಶ್ರಮ ವಹಿಸಿ ಸಂಗೀತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಸಾರಥ್ಯದಲ್ಲಿ ‘ಪೂರ್ವಿ ಗಾನಯಾನ 100’ರ ಪಥದಲ್ಲಿ ಸಾಗಿರುವುದು ಅದ್ವಿತೀಯ ಸಾಧನೆ ಎಂದು ಹೇಳಿದರು.ಸಾಹಿತಿ ರಮೇಶ್ ಬೊಂಗಾಳೆ ಸಂಪಾದಕತ್ವದ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ ಕುರಿತ ‘ನೆನಪು ನಿನಾದ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಪೂರ್ವಿ ಗಾನಯಾನ ಸುಮಾರು ಹತ್ತು ವರ್ಷಗಳ ಒಂದು ಸುಧೀರ್ಘ ಪಯಣ. ಈ ಸಾಧನೆ ಹಾದಿಯಲ್ಲಿ ಎಂ.ಎಸ್.ಸುಧೀರ್‌ ಅವರ ಶ್ರಮ ಸಾಕಷ್ಟಿದೆ. ಚಿಕ್ಕಮಗಳೂರಿನಲ್ಲಿರುವ ಸಂಗೀತ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿ ದ್ದಾರೆ. ಇದು ಪೀಳಿಗೆಗೆ ಕೊಡುಗೆಯೂ ಆಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್‌ ದೊಡ್ಡಯ್ಯ ಮಾತನಾಡಿ, ಮಾತನಾಡು ವುದೇ ಸಾಧನೆಯಾಗಬಾರದು. ಸಾಧನೆಗಳು ನಮ್ಮ ಪರವಾಗಿ ಮಾತನಾಡಬೇಕು. ಹಾಗೆಯೇ ಪೂರ್ವಿ ತಂಡ ಸಾಧನೆ ಮಾಡುವ ಮೂಲಕ ಹೊಸ ಪ್ರತಿಭೆಗಳನ್ನು ಆವಿಷ್ಕಾರ ಮಾಡಿ ವೇದಿಕೆ ನೀಡುವ ಮೂಲಕ ಗಾನಯಾನವನ್ನು 100 ಕ್ಕೆ ತಲುಪಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಗಾಯಕಿ ಶಿವಮೊಗ್ಗದ ಸುರೇಖಾ ಹೆಗಡೆ ಅವರನ್ನು ಪೂರ್ವಿ ನಾದೋಪಾಸನಾ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಯಿತು. ಕೀಬೋರ್ಡ್ ವಾದಕ, ಸಂಗೀತ ನಿರ್ದೇಶಕ ಬೆಂಗಳೂರಿನ ಎನ್.ಆರ್. ಕೃಷ್ಣಉಡುಪ ಹಾಗೂ ಗಾಯಕಿ ಸೌಮ್ಯ ಕೃಷ್ಣ ಹಾಗೂ ರಮೇಶ್ ಬೊಂಗಾಳೆ ಅವರನ್ನು ಅಭಿನಂದಿಸಲಾಯಿತು. ಸುಗಮ ಸಂಗೀತ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್. ವೆಂಕಟೇಶ್, ಸೆಂಟ್ ಮೇರಿಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಜೆರಾಲ್ಡ್ ಲೋಬೋ, ಲಯನ್ಸ್ ಸಂಸ್ಥೆ ಅಧ್ಯಕ್ಷ ಜಿ.ರಮೇಶ್ ವೇದಿಕೆಯಲ್ಲಿದ್ದರು.

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ ಅಧ್ಯಕ್ಷ ಎಂ.ಎಸ್.ಸುಧೀರ್ ಸ್ವಾಗತಿಸಿದರು. ಗಾಯಕ ರಾಯನಾಯಕ್ ವಂದಿಸಿದರು. ಸುಮಾ ಪ್ರಸಾದ್ ಹಾಗೂ ರೂಪ ನಾಯ್ಕ್‌ ಕಾರ್ಯಕ್ರಮ ನಿರೂಪಿಸಿದರು. 16 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ ಏರ್ಪಡಿಸಿದ್ದ ಪೂರ್ವಿ ಗಾನಯಾನ- 100 ಕಾರ್ಯಕ್ರಮದಲ್ಲಿ ಗಾಯಕಿ ಶಿವಮೊಗ್ಗದ ಸುರೇಖಾ ಹೆಗಡೆ ಅವರಿಗೆ ಪೂರ್ವಿ ನಾದೋಪಾಸನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರೇಮಗಳೂರು ಕಣ್ಣನ್‌, ಡಾ. ಡಿ.ಎಲ್‌. ವಿಜಯಕುಮಾರ್‌, ಎಂ.ಎಸ್‌. ಸುಧೀರ್‌, ಜಿ. ರಮೇಶ್‌, ಎಸ್‌.ಎಸ್‌. ವೆಂಕಟೇಶ್‌ ಇದ್ದರು.

Share this article