ನರೇಂದ್ರ ಮೋದಿಯವರ ಯುಗ ಅಂತ್ಯ ಕಂಡಿದೆ: ಬಸವರಾಜ ರಾಯರೆಡ್ಡಿ

KannadaprabhaNewsNetwork | Published : Jun 17, 2024 1:30 AM

ಸಾರಾಂಶ

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಯುಗ ಅಂತ್ಯವಾಗಿದೆ. ಹತ್ತು ವರ್ಷ ಆಡಳಿತ ನಡೆಸಿದರೂ ಬಹುಮತಕ್ಕೆ ಬೇಕಾದ ಸಂಖ್ಯೆಯನ್ನು ತಲುಪಲಾಗದೆ ತಮ್ಮ ವರ್ಚಸ್ಸುನ್ನು ಕಳೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಯುಗ ಅಂತ್ಯವಾಗಿದೆ. ಹತ್ತು ವರ್ಷ ಆಡಳಿತ ನಡೆಸಿದರೂ ಬಹುಮತಕ್ಕೆ ಬೇಕಾದ ಸಂಖ್ಯೆಯನ್ನು ತಲುಪಲಾಗದೆ ತಮ್ಮ ವರ್ಚಸ್ಸುನ್ನು ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ಭಾನುವಾರ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ನೂತನ ಸಂಸದರಾಗಿ ಆಯ್ಕೆಯಾದ ರಾಜಶೇಖರ ಹಿಟ್ನಾಳರ ಗೆಲುವಿಗೆ ಶ್ರಮಿಸಿದ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿಯವರು ತಮ್ಮ ಅತೀಯಾದ ಸುಳ್ಳಿನಿಂದ ಜನಪ್ರಿಯತೆ ಕಳೆದುಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಯೋಜನೆಗಳ ಮೂಲಕ ಜನರ ಹಿತ ಕಾಪಾಡಿದೆ. ಈ ಯಾವ ಯೋಜನೆಗಳನ್ನು ರದ್ದು ಪಡಿಸುವುದಿಲ್ಲ. ರಾಜ್ಯದ ಅಭಿವೃದ್ಧಿಗೆ ಅನುದಾನದ ಕೊರತೆ ಸರ್ಕಾರಕ್ಕಿಲ್ಲ. ಇನ್ನೂ ಸಿದ್ದರಾಮಯ್ಯನವರ ನಾಲ್ಕು ವರ್ಷಗಳ ಅಧಿಕಾರವಧಿಯಲ್ಲಿ ಈ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಲಿದ್ದಾರೆ. ಬಿಜೆಪಿಯವರು ಹೇಳುವ ಸುಳ್ಳು ಮಾತುಗಳಿಗೆ ಜನತೆ ಕಿವಿಗೊಡಬೇಡಿ ಎಂದು ಹೇಳಿದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ರಾಜ್ಯದಲ್ಲಿ ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ ತಾಲೂಕು ಯಾವುದಾದರೂ ಇದ್ದರೆ ಅದು ಶಾಸಕ ಬಸವರಾಜ ರಾಯರೆಡ್ಡಿವರ ಯಲಬುರ್ಗಾ ವಿಧಾನಸಭಾ ಕ್ಷೇತ್ರವಾಗಿದೆ ಎಂದು ಗುಣಗಾನ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ನೂತನ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪೂರ ಮಾತನಾಡಿದರು. ಬಳಿಕ ನೂತನ ಸಂಸದರಿಗೆ ನಾನಾ ಸಂಘಟನೆಗಳಿಂದ ಸನ್ಮಾನ ನಡೆಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ವೀರನಗೌಡ ಬಳೂಟಗಿ, ಹನುಮಂತಗೌಡ ಪಾಟೀಲ, ಬಿ.ಎಂ. ಶಿರೂರ, ಎ.ಜಿ. ಭಾವಿಮನಿ, ಕೆರಿಬಸಪ್ಪ ನಿಡಗುಂದಿ, ಕೃಷ್ಣಾ ಇಟ್ಟಂಗಿ, ಮಹೇಶ ಹಳ್ಳಿ, ಮಹಾಂತೇಶ ಗಾಣಿಗೇರ, ಸಂಗಣ್ಣ ಟೆಂಗಿನಕಾಯಿ, ದೇವಪ್ಪ ಅರಕೇರಿ, ಕೆ.ಎಂ. ಸೈಯದ್, ಗಿರಿಜಾ ಸಂಗಟಿ, ಜಯಶ್ರೀ ಕಂದಕೂರ, ಡಾ. ನಂದಿತಾ ಎಸ್. ದಾನರೆಡ್ಡಿ ಮತ್ತಿತರರು ಇದ್ದರು.

Share this article