ಸ್ನೇಹ ಸಂಬಂಧದಿಂದ ಜೀವನೋತ್ಸಾಹ ಹೆಚ್ಚು: ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿನೋದ್ ಚಂದ್ರ

KannadaprabhaNewsNetwork | Published : Jun 17, 2024 1:30 AM

ಸಾರಾಂಶ

ಮನುಷ್ಯನ ಜೀವನದಲ್ಲಿ ಸ್ನೇಹಕ್ಕೆ ಮಹತ್ವದ ಸ್ಥಾನವಿದ್ದು, ಸ್ನೇಹ ಸಂಬಂಧಗಳನ್ನು ಉಳಿಸಿಕೊಂಡಾಗ, ಅದು ಜೀವನೋತ್ಸಾಹವನ್ನು ಹೆಚ್ಚು ಮಾಡುತ್ತದೆ ಎಂದು ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿನೋದ್ ಚಂದ್ರ ತಿಳಿಸಿದರು. ಹೊಳೆನರಸೀಪುರದಲ್ಲಿ ‘ಲೋಕಲ್ ಕ್ರಿಕೆಟ್ ಮತ್ತು ಹುಡುಗಾಟಗಳು’ ಎಂಬ ಕೃತಿಯ ಲೋಕಾರ್ಪಣೆಯ ಸಮಾರಂಭದಲ್ಲಿ ಮಾತನಾಡಿದರು.

‘ಲೋಕಲ್ ಕ್ರಿಕೆಟ್ ಮತ್ತು ಹುಡುಗಾಟಗಳು’ ಕೃತಿ ಬಿಡುಗಡೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಮನುಷ್ಯನ ಜೀವನದಲ್ಲಿ ಸ್ನೇಹಕ್ಕೆ ಮಹತ್ವದ ಸ್ಥಾನವಿದ್ದು, ಸ್ನೇಹ ಸಂಬಂಧಗಳನ್ನು ಉಳಿಸಿಕೊಂಡಾಗ, ಅದು ಜೀವನೋತ್ಸಾಹವನ್ನು ಹೆಚ್ಚು ಮಾಡುತ್ತದೆ ಎಂದು ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿನೋದ್ ಚಂದ್ರ ತಿಳಿಸಿದರು.

ಪಟ್ಟಣದ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಪ್ರೈಮ್ ಕ್ರಿಕೆಟ್ ಕ್ಲಬ್ ಮತ್ತು ಶ್ರೀ ಲಕ್ಷ್ಮೀನರಸಿಂಹ ಕ್ರಿಕೆಟರ್ಸ್ ಜಂಟಿಯಾಗಿ ಸಾಹಿತಿ ಕುಮಾರ್ ಹೊನ್ನೇನಹಳ್ಳಿ ರಚಿಸಿದ ‘ಲೋಕಲ್ ಕ್ರಿಕೆಟ್ ಮತ್ತು ಹುಡುಗಾಟಗಳು’ ಎಂಬ ಕೃತಿಯ ಲೋಕಾರ್ಪಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕುಮಾರ್ ಹೊನ್ನೇನಹಳ್ಳಿ ಅವರು ‘ಲೋಕಲ್ ಕ್ರಿಕೆಟ್ ಮತ್ತು ಹುಡುಗಾಟಗಳು’ ಕೃತಿಯಲ್ಲಿ ಅವರ ಬಾಲ್ಯ, ಯೌವನ ಮತ್ತು ಹದಿಹರೆಯದ ದಿನಗಳಲ್ಲಿ ಕ್ರಿಕೆಟ್ ಆಡಿದ ನೆನಪುಗಳು ಮತ್ತು ಆಡಲು ಅವರಿಗೆ ಸ್ಫೂರ್ತಿಯಾದ ಗೆಳೆಯರು ಮತ್ತು ಹಿರಿಯರ ನಡುವಿನ ಒಡನಾಟವನ್ನು ಹಾಗೂ ಜೀವನದಲ್ಲಿ ಕಷ್ಟಪಟ್ಟು ಬೆಳೆದು ಬಂದ ದಾರಿಯನ್ನು ಮರೆಯದೇ ಒಬ್ಬ ಸಾಧಕರಾಗಿ ನವಿರಾಗಿ ತಮ್ಮ ಭಾವನೆಗಳನ್ನು ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ. ತಮ್ಮ ಜೀವನದಲ್ಲಿ ಒಡನಾಡಿಯಾಗಿ ಗೆಳೆಯರ ಜೊತೆಯಲ್ಲಿ ಆಡಿ ಬೆಳೆದ ವಾತಾವರಣವನ್ನು ತಮ್ಮ ಕೃತಿಯ ಮೂಲಕ ಪ್ರತಿಬಿಂಬಿಸಿ, ಕೃತಿಯ ಓದುಗರಿಗೆ ತಮ್ಮ ಬಾಲ್ಯದ ದಿನಗಳನ್ನು ಮರುಕಳಿಸುವ ಸಾಹಸವನ್ನು ಮಾಡಿದ್ದಾರೆ. ಇಂತಹ ಸದಾಭಿರುಚಿಯ ಕೃತಿಗಳು ಲೇಖಕರ ಲೇಖನಿಯಿಂದ ಮತ್ತಷ್ಟು ಮೂಡಿಬರಲಿ’ ಎಂದು ಶುಭ ಹಾರೈಸಿದರು.

ಮೈಸೂರು ಎಸಿಪಿ ಸುಧಾಕರ್ ಎ.ಬಿ. ಮಾತನಾಡಿ, ತಾವು ಸಹ ೨೫ ವರ್ಷಗಳ ಹಿಂದೆ ಒಬ್ಬ ಕ್ರಿಕೆಟ್ ಪಟುವಾಗಿ ತಮ್ಮನ್ನು ತೊಡಗಿಸಿಕೊಂಡ ದಿನಗಳನ್ನು ನೆನಪು ಮಾಡಿಕೊಂಡರು. ‘ಅಧ್ಯಯನದ ಜೊತೆಗೆ ಕ್ರೀಡೆಗಳು ಇದ್ದಲ್ಲಿ, ನಮ್ಮ ಜೀವನದಲ್ಲಿ ಸಮತೋಲನವಿರುತ್ತದೆ, ಎಲ್ಲರ ಜೀವನದಲ್ಲೂ ಕಷ್ಟ ಸುಖ ಬಂದಾಗ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು’ ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಹೆಚ್ಚಾಗುತ್ತಿದ್ದು ಮೊಬೈಲ್ ಆ್ಯಪ್ ಮೂಲಕ ಜನತೆಗೆ ಹಣವನ್ನು ಡಬಲ್ ಮಾಡುವ ಆಮಿಷ ತೋರಿಸಿ ವಂಚಿಸುವವರು ಹೆಚ್ಚಾಗಿದ್ದು ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಹಳ್ಳಿಮೈಸೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಎಸ್.ಪ್ರಭುಶಂಕರ್, ಸಾಹಿತಿ ಹಾಗೂ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎಜಿಎಂ ವಿನಯ್ ಎಸ್.ಆರ್. ಕೃತಿಯ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರಿನ ಡಯೆಟ್‌ನ ಉಪನ್ಯಾಸಕ ನಟೇಶ್ ಹೆಚ್.ಬಿ. ವಹಿಸಿದ್ದರು. ಪುಸ್ತಕವನ್ನು ಪ್ರೈಂ ಕ್ರಿಕೆಟ್ ಕ್ಲಬ್‌ನ ಮಾಜಿ ನಾಯಕ ಮತ್ತು ಎಸ್.ಜೆ.ಕನ್‌ಸ್ಟ್ರಕ್ಷನ್ಸ್ ಮಾಲೀಕ ಅಶೋಕ್‌ ಗೌಡ ಜೆ. ಮತ್ತು ಎಸ್‌ಎಲ್‌ಎನ್ ಕ್ರಿಕೆಟರ್ಸ್ ಮಾಜಿ ಕ್ಯಾಪ್ಟನ್ ಹಾಗೂ ಮಾಜಿ ಪುರಸಭಾ ಸದಸ್ಯ ಎಚ್.ಕೆ.ಗಂಗಾಧರ (ಪಾಪ) ಲೋಕಾರ್ಪಣೆಗೊಳಿಸಿದರು.

ಪಿ.ಸಿ.ಸಿ., ಎಸ್.ಎಲ್.ಎನ್.ಸಿ. ಹಾಗೂ ಯು.ಸಿ.ಸಿ. ಕ್ರಿಕೆಟ್ ತಂಡದ ಹಿರಿಯ ಕ್ರಿಕೆಟ್ ಆಟಗಾರರಾದ ಹರೀಶ್ ಎಚ್.ಕೆ., ದಿವಾಕರ್ ಎಚ್.ಕೆ., ಬಸವಣ್ಣ, ಪುಟ್ಟರಾಜು, ಸೋಮಣ್ಣ, ಅನಂತ, ಮಂಜೇಗೌಡ, ಗುಂಡಣ್ಣ, ಜಿಯಾ, ಶಮ್ಮಿ, ಮತ್ತು ಗ್ರೇಸಿ ಅವರನ್ನು ಸನ್ಮಾನಿಸಲಾಯಿತು.

ದೀಪಾ ಬಾಲಾಜಿ ಪ್ರಾರ್ಥಸಿದರು, ಕುಮಾರ್ ಹೊನ್ನೇನಹಳ್ಳಿ ವಂದಿಸಿದರು ಹಾಗೂ ಎಸ್.ವಿಶ್ವನಾಥ್ ನಿರೂಪಿಸಿದರು. ಸಮಾರಂಭದಲ್ಲಿ ಪಿ.ಸಿ.ಸಿ, ಎಲ್.ಎಲ್.ಎನ್.ಸಿ ಮತ್ತು ಯು.ಸಿ.ಸಿ. ಕ್ರಿಕೆಟ್ ತಂಡದ ಸದಸ್ಯರು, ಕ್ರಿಕೆಟ್ ಅಭಿಮಾನಿಗಳು, ಇತರರು ಇದ್ದರು.

Share this article