ಬದ್ಧತೆಯಿಂದ ಕಾರ್ಯ ನಿರ್ವಹಿಸಿದರೆ ಸಾಧನೆ ಸಾಧ್ಯ: ಎಸ್.ವಿ.ಪರಮೇಶ್ವರಪ್ಪ

KannadaprabhaNewsNetwork |  
Published : May 13, 2025, 11:50 PM IST
ಗ | Kannada Prabha

ಸಾರಾಂಶ

ವಿದ್ಯಾರ್ಥಿಗಳು ತಮ್ಮೊಳಗಿರುವ ವಿಶೇಷ ಪ್ರತಿಭೆಗಳನ್ನು ಗುರ್ತಿಸಿ, ಬೆಳೆಸಿಕೊಂಡು ಬದುಕನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಬೇಕು ಎಂದು ವಿಶ್ರಾಂತ ಉಪನ್ಯಾಸಕ ಎಸ್.ವಿ.ಪರಮೇಶ್ವರಪ್ಪ ಕರೆ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ । ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ ಅಜ್ಜಂಪುರ

ವಿದ್ಯಾರ್ಥಿಗಳು ತಮ್ಮೊಳಗಿರುವ ವಿಶೇಷ ಪ್ರತಿಭೆಗಳನ್ನು ಗುರ್ತಿಸಿ, ಬೆಳೆಸಿಕೊಂಡು ಬದುಕನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಬೇಕು ಎಂದು ವಿಶ್ರಾಂತ ಉಪನ್ಯಾಸಕ ಎಸ್.ವಿ.ಪರಮೇಶ್ವರಪ್ಪ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ತೃತೀಯ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಗರದ ಸೌಲಭ್ಯಗಳು ಹಳ್ಳಿಯಲ್ಲೂ ದೊರೆಯುತ್ತಿವೆ. ತಂತ್ರಜ್ಞಾನ ಎಲ್ಲರ ಕೈಗೆಟಕುತ್ತಿದೆ. ವಿದ್ಯಾರ್ಥಿಗಳು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಬದ್ಧತೆಯಿಂದ ಕಾರ್ಯಪ್ರವೃತ್ತರಾದರೆ ಸಾಧನೆ ಅಸಾಧ್ಯವಲ್ಲ ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ರಚನಾ ಜಿ.ಎಸ್. ಮಾತನಾಡಿ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕಿದ್ದರೆ ಅದು ಯುವಕರಿಂದ ಮಾತ್ರ ಸಾಧ್ಯ. ಯುವಜನತೆ ತನ್ನ ಪಾಲಿನ ಹೊಣೆಗಾರಿಕೆಗಳನ್ನು ಚೊಕ್ಕವಾಗಿ ನಿಭಾಯಿಸುವುದರ ಮೂಲಕ ದೇಶದ ಸತ್ಪ್ರಜೆಗಳಾಗಬೇಕು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗುರುಮೂರ್ತಿ, ಇತ್ತೀಚೆಗೆ, ಯುವಕರು ಕೆಲಸಗಳನ್ನು ಮೇಲು-ಕೀಳೆಂದು ವಿಂಗಡಿಸುವ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ. ಈ ಜಗತ್ತಿನಲ್ಲಿ ಎಲ್ಲಾ ಕೆಲಸಗಳಿಗೂ ತನ್ನದೇ ಆದ ಪ್ರಾಮುಖ್ಯತೆ, ಘನತೆ ಇರುತ್ತದೆ. ಅವುಗಳನ್ನು ಗುರ್ತಿಸಿ, ಬದುಕಲ್ಲಿ ಅಳವಡಿಸಿಕೊಳ್ಳುವ ಮೂಲಕ ಶ್ರಮಕ್ಕೆ ಗೌರವ ತರಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ರಾಜಣ್ಣ ಕೆ. ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದ ನಮ್ಮ ಕಾಲೇಜು ವಿವಿಧ ಸಮಿತಿಗಳ ಸಹಯೋಗ ಹಾಗೂ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ಹಲವು ಗುಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇವು ವಿದ್ಯಾರ್ಥಿಗಳಲ್ಲಿ ಗುರುತರ ಬದಲಾವಣೆಗಳನ್ನು ತರಲು ಯಶಸ್ವಿಯಾಗಿವೆ ಎಂದರು.

ಸಮಾರಂಭದ ಪ್ರಯುಕ್ತ ಆಯೋಜಿಸಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೇಂಜರ್ಸ್ ಮತ್ತು ರೋವರ್ಸ್ ಘಟಕದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಗೂ ಪಾರಿತೋಷಕಗಳನ್ನು ವಿತರಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಲ್ಲಿಕಾರ್ಜುನ್ ಇದ್ದರು.

PREV

Latest Stories

ಧರ್ಮಸ್ಥಳ ಗ್ರಾಮ ಕೇಸ್‌: ಇಬ್ಬರು ಐಪಿಎಸ್‌ಗಳು ಎಸ್‌ಐಟಿಯಿಂದ ಔಟ್‌?
ಡಿಕೆಶಿಗೆ ಅಪಮಾನ ಮಾಡುವುದಕ್ಕೆ ಸಿಎಂ ಸಿದ್ದು ಸಮಾವೇಶ: ಅಶೋಕ
ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ