ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಸಕಾರಾತ್ಮಕ ಚಿಂತನೆ ಜೊತೆಗೆ ಸತತ ಪರಿಶ್ರಮ ಅಗತ್ಯ ಎಂದು ಮಾಜಿ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪ್ರೊ.ಎಮ್.ಕೆ.ನಾಯಕ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಡಾ.ಅಶೋಕಕುಮಾರ ಜಾಧವ ಅವರ ವಯೋ ನಿವೃತ್ತಿ ಹಿನ್ನೆಲೆಯಲ್ಲಿ ಶನಿವಾರ ತಮ್ಮ ನೆಚ್ಚಿನ ಶಿಷ್ಯನಿಗೆ ಸನ್ಮಾನಿಸಿ ಅಭಿನಂದಿಸಿ ಮಾತನಾಡಿದ ಅವರು, ಸರಕಾರಿ ವೃತ್ತಿ ಜೀವನದಲ್ಲಿ ನಿವೃತ್ತಿ ಸಹಜ. ಸೇವೆಯ ಅವಧಿಯಲ್ಲಿ ಮಾದರಿಯಾದ ಕೆಲಸಗಳನ್ನು ಮಾಡಿದರೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನೆನೆಸುತ್ತಾರೆ. ಅಂತಹವರ ಸಾಲಿನಲ್ಲಿ ಡಾ.ಅಶೋಕಕುಮಾರ ಜಾಧವ ನಿಲ್ಲುತ್ತಾರೆ. ವಿಜಯಪುರದಲ್ಲಿ ಪ್ರಥಮ ಬಾರಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಆರಂಭದಲ್ಲಿ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶ ಬಹಳ ಕಡಿಮೆಯಿತ್ತು. ಏಕೆಂದರೆ ಕಾಲೇಜಿನ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿಯೇ ಇರಲಿಲ್ಲ. 2005ರಲ್ಲಿ ಕಾಲೇಜು ಪ್ರಾರಂಭವಾಗಿದ್ದು, ಅಲ್ಲಿಯವರೆಗೆ ಕಾಲೇಜಿನಲ್ಲಿ ಯಾವುದೇ ಇತರೆ ಚಟುವಟಿಕೆಗಳು ನಡೆಯುತ್ತಿರಲಿಲ್ಲ .ಡಾ.ಜಾಧವ ಅವರು ಕಾರವಾರದಿಂದ ವಿಜಯಪುರಕ್ಕೆ ವರ್ಗಾವಣೆಯಾಗಿ ಬಂದರೋ, ಆಗಿನಿಂದ ಎಲ್ಲ ರೀತಿಯ ಪಠ್ಯೇತರ ಚಟುವಟಿಕೆಗಳು ನಿರಂತರವಾಗಿ ನಡೆಯತೊಡಗಿದವು. ಆಗ ಕಾಲೇಜಿನ ಹೆಸರು ಬೆಳಕಿಗೆ ಬಂದು, ವಿದ್ಯಾರ್ಥಿಗಳ ಪ್ರವೇಶದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಏರಿಕೆಯಾಯಿತು. ಅವರ ನಿರಂತರ ಕ್ರೀಡಾ ಸಂಘಟನೆ, ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ, ವೃತ್ತಿಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು, ಸಮಸ್ಯೆ ಪರಿಹರಿಸುವ ರೀತಿ, ತಾಳ್ಮೆ ಮಾದರಿ. ಅವರು ನಿವೃತ್ತರಾದರೂ ತಮ್ಮ ಪ್ರವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜಿಲ್ಲೆಯಲ್ಲಿರುವ ಕ್ರೀಡಾಪಟುಗಳಿಗೆ ದ್ರೋಣಾಚಾರ್ಯರ ಹಾಗೆ ಮಾರ್ಗದರ್ಶನ ನೀಡುತ್ತಿರಲಿ. ಅವರ ಸಾಧನೆಗಳ ಬಗ್ಗೆ ಹೆಮ್ಮೆಯಿದೆ. ಅವರ ವೃತ್ತಿ ಕಾರ್ಯ ಚಟುವಟಿಕೆಗಳನ್ನು ಮೊದಲಿನಿಂದಲೂ ನೋಡಿದ ನಾನು ಅದೇ ಅಭಿಮಾನದಿಂದ ಅವರಿಗೆ ಗೌರವಿಸಲು ದಾವಣಗೆರೆಯಿಂದ ಬಂದಿದ್ದು, ಅವರ ನಿವೃತ್ತ ಜೀವನ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ್ ಡಾ.ಎ.ಆಯ್. ಹಂಜಗಿ ಅವರು ಮಾತನಾಡಿ, ಜಾಧವ ಅವರು ಈ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ಮಾಡಿದ ಸಾಧನೆಗಳು ಸ್ಮರಣೀಯ. ಈಗಲೂ ಅವರು ತಾವು ಸೇವೆ ಸಲ್ಲಿಸಿದ ಕಾಲೇಜಿನ ಬಗ್ಗೆ ಅಭಿಮಾನದಿಂದ ಇರುವುದು ಅವರ ಪ್ರೀತಿಗೆ ಕಾರಣ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾಜಿ ಪ್ರಾಂಶುಪಾಲರು, ಮಾಜಿ ಜಂಟಿ ನಿರ್ದೇಶಕರು, ಬೆಂಗಳೂರಿನ ಮಹಾರಾಣಿ ಕಾಲೇಜಿನ ಮಾಜಿ ಪ್ರಾಂಶುಪಾಲರು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತಿಗೊಂಡಿರುವ ಪ್ರೊ.ಎಂ.ಕೆ.ನಾಯಕ ಅವರಿಂದ ಜಾಧವ ಕುಟುಂಬದವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಡಾ. ಸುನೀಲ ತೊಂಟಾಪುರ, ಪ್ರೋ. ಬಸವರಾಜ ಶಾಡದಳ್ಳಿ, ಪ್ರೋ. ಆನಂದ ಕುಲಕರ್ಣಿ, ಪ್ರೊ.ಅಲಿಯಾ ಮುಲ್ಲಾ, ಡಾ. ಅಜ್ರಾ ಪರವೀನ, ಡಾ. ಶ್ರೀಮಂತ ಚವ್ಹಾಣ, ಡಾ. ಮಮತಾ ಬನ್ನೂರ, ಡಾ. ರೇಣುಕಾ, ಮರನೂರ, ಡಾ. ವಿಶ್ವನಾಥ ಕಲ್ಮೇಶ, ಡಾ. ಹತ್ತಿ, ಪ್ರಭು ಬಜಂತ್ರಿ, ಶೋಭಾ ಪವಾರ, ಮತ್ತು ಕಾಲೇಜಿನ ಇನ್ನಿತರ ಭೋದಕ ಭೋದಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.ಡಾ. ಸುನೀಲ ತೊಂಟಾಪುರ ಸ್ವಾಗತಿಸಿದರು. ಪ್ರೊ.ಬಸವರಾಜ ಶಾಡದಳ್ಳಿ ವಂದಿಸಿದರು.
---ಫೋಟೋ ೨೨ಡಿಎಚಪಿ೨