ನಾಟಿ ವೈದ್ಯೆ ಸಾಧನೆ: ಕಬ್ಬಿನಾಲೆ ಹಿರಿ ಜೀವದ ಕಾರ್ಯ ರಾಜ್ಯಕ್ಕೇ ಮಾದರಿ

KannadaprabhaNewsNetwork |  
Published : Mar 10, 2026, 03:45 AM IST
 ನಕ್ಸಲ್ | Kannada Prabha

ಸಾರಾಂಶ

ಪಶ್ಚಿಮ ಘಟ್ಟಗಳ ತಪ್ಪಲಿನ ಕಬ್ಬಿನಾಲೆ ಅಭಿವೃದ್ಧಿ ಕಾಣದೆ ಇರುವ ಗ್ರಾಮ, ನಕ್ಸಲ್ ಕರಿನೆರಳಲ್ಲಿ ಬೆಳೆದ ಗ್ರಾಮ, ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ ನಡೆದ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದ ಗ್ರಾಮ , ಅದರಲ್ಲು ಈಗ ಹಿರಿ ಜೀವದ ಸಾಧನೆ ರಾಜ್ಯಕ್ಕೆ ಮಾದರಿಯಾಗಿದೆ. ಕಬ್ಬಿನಾಲೆ ಗ್ರಾಮದ ಮೆದಿಪು ಎಂಬಲ್ಲಿ ವಾಸಿಸುವ 89 ವರ್ಷದ ಹಿರಿ ಜೀವ ಗುಲಾಬಿ ಗೌಡ್ತಿ ಅವರು ರಾಜ್ಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. 2025ನೇ ಸಾಲಿನ ಕರ್ನಾಟಕ ಜನಪದ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾಗಿರುವ ಅವರು ಮಲೆಕುಡಿಯ ಸಮುದಾಯದ ಏಕೈಕ ಮಹಿಳೆಯಾಗಿ ಈ ಸಾಧನೆಗೈದಿರುವುದು ವಿಶೇಷ.

ರಾಂ ಅಜೆಕಾರು ಕನ್ನಡಪ್ರಭ ವಾರ್ತೆ ಕಾರ್ಕಳ

ಪಶ್ಚಿಮ ಘಟ್ಟಗಳ ತಪ್ಪಲಿನ ಕಬ್ಬಿನಾಲೆ ಅಭಿವೃದ್ಧಿ ಕಾಣದೆ ಇರುವ ಗ್ರಾಮ, ನಕ್ಸಲ್ ಕರಿನೆರಳಲ್ಲಿ ಬೆಳೆದ ಗ್ರಾಮ, ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ ನಡೆದ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದ ಗ್ರಾಮ , ಅದರಲ್ಲು ಈಗ ಹಿರಿ ಜೀವದ ಸಾಧನೆ ರಾಜ್ಯಕ್ಕೆ ಮಾದರಿಯಾಗಿದೆ. ಕಬ್ಬಿನಾಲೆ ಗ್ರಾಮದ ಮೆದಿಪು ಎಂಬಲ್ಲಿ ವಾಸಿಸುವ 89 ವರ್ಷದ ಹಿರಿ ಜೀವ ಗುಲಾಬಿ ಗೌಡ್ತಿ ಅವರು ರಾಜ್ಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. 2025ನೇ ಸಾಲಿನ ಕರ್ನಾಟಕ ಜನಪದ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾಗಿರುವ ಅವರು ಮಲೆಕುಡಿಯ ಸಮುದಾಯದ ಏಕೈಕ ಮಹಿಳೆಯಾಗಿ ಈ ಸಾಧನೆಗೈದಿರುವುದು ವಿಶೇಷ.

ಅಭಿವೃದ್ಧಿಯ ಸ್ಪರ್ಶವೇ ಸಿಗದ ಹಳ್ಳಿಯಿಂದ ರಾಜ್ಯ ಪ್ರಶಸ್ತಿಯ ವೇದಿಕೆಗೆ ಏರಿರುವುದು ಅವರ ಜೀವನ ಸಾಧನೆಗೆ ದೊರೆತ ಮಾನ್ಯತೆ ಎಂದೇ ಪರಿಗಣಿಸಲಾಗಿದೆ. ಆರ್ಥಿಕ ಸಂಕಷ್ಟದ ಕಾರಣ ಶಾಲೆಯ ಶಿಕ್ಷಣದಿಂದ ವಂಚಿತರಾದರೂ, ಜೀವನ ಪಾಠವೇ ಅವರಿಗೆ ವಿಶ್ವವಿದ್ಯಾಲಯವಾಯಿತು. ಪರಂಪರೆಯಿಂದ ಬಂದ ಗಿಡಮೂಲಿಕೆಗಳ ಜ್ಞಾನವನ್ನು ಅರಿತುಕೊಂಡ ಅವರು ಕಳೆದ ಐದು ದಶಕಗಳಿಂದ ನಾಟಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅರಣ್ಯ ಪ್ರದೇಶಗಳಲ್ಲಿ ದೊರೆಯುವ ಚಕ್ಕೆ, ಎಲೆ, ಬೇರುಗಳನ್ನು ಸಂಗ್ರಹಿಸಿ ಸಾಂಪ್ರದಾಯಿಕ ಮದ್ದು ತಯಾರಿಸಿ ಗ್ರಾಮಸ್ಥರಿಗೆ ನೀಡುವುದು ಅವರ ದಿನಚರಿ. ಕತ್ತಿ ತಗುಲಿ ಗಾಯವಾದರೆ, ಮುಳ್ಳು ಚುಚ್ಚಿದರೆ, ಗಂಟು ನೋವು, ಉಗುರಿ ಸುತ್ತು, ಚಳಿ-ಜ್ವರ, ತಲೆಕೂದಲು ಉದುರುವಿಕೆ, ಮಹಿಳೆಯರ ಬಿಳಿ ಮುಟ್ಟುವಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಅವರು ನೀಡುವ ನಾಟಿ ಮದ್ದುಗಳು ಜನರಲ್ಲಿ ವಿಶ್ವಾಸ ಮೂಡಿಸಿವೆ. ಮಕ್ಕಳಿಗೆ ಸೂಲಗಿತ್ತಿ ಕೆಲಸವನ್ನು 200 ಕ್ಕೂ ಹೆಚ್ಚು ಬಾರಿ ನೆರವೇರಿಸಿರುವ ಅನುಭವವೂ ಇವರಿಗಿದೆ.

ಮೂಲ ಸೌಕರ್ಯಗಳ ಕೊರತೆ, ನಕ್ಸಲ್ ಸಮಸ್ಯೆಗಳ ನಡುವೆಯೂ ಕಬ್ಬಿನಾಲೆ ಪ್ರದೇಶದಲ್ಲಿ ಜನರಿಗೆ ಆರೋಗ್ಯದ ಆಶ್ರಯವಾಗಿದ್ದವರು ಗುಲಾಬಿ ಗೌಡ್ತಿ. ವೈಯಕ್ತಿಕ ಸಂಕಷ್ಟಗಳನ್ನೆಲ್ಲ ಮೀರಿ ಸಮುದಾಯ ಸೇವೆಗೆ ತೊಡಗಿಸಿಕೊಂಡಿರುವ ಅವರ ಜೀವನ ನಿಜಕ್ಕೂ ಪ್ರೇರಣಾದಾಯಕ.ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಹೊಂದಿರುವ ಅವರು ಪ್ರಸ್ತುತ ಮಗ ಶೇಖರ್ ಅವರೊಂದಿಗೆ ಮೆದಿಪುದಲ್ಲಿ ವಾಸಿಸುತ್ತಿದ್ದಾರೆ. ಹಳ್ಳಿಯ ಕುಗ್ರಾಮದಿಂದ ಹೊರಹೊಮ್ಮಿದ ಈ ಹಿರಿ ಜೀವಿಗೆ ದೊರೆತ ರಾಜ್ಯ ಗೌರವ ಮಲೆಕುಡಿಯ ಸಮುದಾಯದ ಪರಂಪರೆಯ ಜ್ಞಾನಕ್ಕೆ ಲಭಿಸಿದ ಗರಿಯಾಗಿದೆ.

“ಗುಲಾಬಿ ಗೌಡ್ತಿ ಅವರಿಗೆ ರಾಜ್ಯ ಮಟ್ಟದ ಕರ್ನಾಟಕ ಜನಪದ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿರುವುದು ಮಲೆಕುಡಿಯ ಸಮುದಾಯಕ್ಕೆ ಅತ್ಯಂತ ಹೆಮ್ಮೆಯ ವಿಷಯ. ಹಳ್ಳಿಯ ಕುಗ್ರಾಮದಲ್ಲಿ ವಾಸಿಸುತ್ತಾ, ಯಾವುದೇ ಪ್ರಚಾರದ ಆಸೆಯಿಲ್ಲದೆ ದಶಕಗಳ ಕಾಲ ಜನಸೇವೆ ಮಾಡಿದ ಹಿರಿ ಜೀವಿಗೆ ದೊರೆತ ಈ ಗೌರವ ನಮ್ಮ ಸಮುದಾಯದ ಪರಂಪರೆಯ ಜ್ಞಾನಕ್ಕೆ ಸಿಕ್ಕ ಮಾನ್ಯತೆ.

*ಮಲೆಕುಡಿಯ ಸಮುದಾಯವು ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ಪಾರಂಪರಿಕ ಜ್ಞಾನ ಸಂಪತ್ತಿನ ನಡುವೆ ಬದುಕುವ ಸಮುದಾಯ. ಗಿಡಮೂಲಿಕೆಗಳ ಅರಿವು, ನಾಟಿ ವೈದ್ಯ ಪರಂಪರೆ, ಸೂಲಗಿತ್ತಿ ಸೇವೆ ಇವೆಲ್ಲವೂ ನಮ್ಮ ಸಂಸ್ಕೃತಿಯ ಭಾಗ. ಆ ಪರಂಪರೆಯನ್ನು ಕಾಪಾಡಿಕೊಂಡು ಬಂದ ಏಕೈಕ ಮಹಿಳೆಯಾಗಿ ಗುಲಾಬಿ ಗೌಡ್ತಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ಇತಿಹಾಸಾತ್ಮಕ ಸಾಧನೆ.-ಗಂಗಾಧರ ಗೌಡ, ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ*ನನಗೆ ರಾಜ್ಯ ಮಟ್ಟದ ಈ ಗೌರವ ಸಿಗುತ್ತದೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ನಮ್ಮ ಹಳ್ಳಿಯ ಜನರು ನನ್ನ ಮೇಲೆ ಇಟ್ಟ ವಿಶ್ವಾಸವೇ ನನ್ನ ದೊಡ್ಡ ಸಂಪತ್ತು. ನಾನು ಓದಿಲ್ಲ, ಆದರೆ ನಮ್ಮ ಅಪ್ಪ-ಅಮ್ಮಂದಿರಿಂದ, ಹಿರಿಯರಿಂದ ಕಲಿತ ಗಿಡಮೂಲಿಕೆಗಳ ಜ್ಞಾನವೇ ನನ್ನ ಜೀವನದ ಆಧಾರ.-ಗುಲಾಬಿ ಗೌಡ್ತಿ ಕಬ್ಬಿನಾಲೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಲ್ಫ್‌ ಕನ್ನಡಿಗರ ರಕ್ಷಣೆಗೆ ಸಂಸದ ಕೋಟ ಮನವಿ
ಮಹಿಳೆಯರು ಸ್ವಾವಲಂಬಿಗಳಾದಾಗ ದೇಶದ ಅಭಿವೃದ್ಧಿ : ಎಂ. ಎ. ಗಫೂರ್