ಕಲಾಂಜಲಿ ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯೆ
ಓದಿಲ್ಲದ ಎಷ್ಟೋ ಜನ ರಾಷ್ಟ್ರಕ್ಕೆ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಧನೆಗೆ ಮಗ್ನತೆ ಹಾಗೂ ಬದ್ಧತೆ ಬೇಕು ಎಂದು ಹಿರಿಯ ನಟಿ, ವಿಧಾನಪರಿಷತ್ ಸದಸ್ಯೆ ಉಮಾಶ್ರೀ ಹೇಳಿದರು.
ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್, ಮಂಗಳೂರು ವಿಧಾತ್ರಿ ಅಕಾಡೆಮಿ ಸಹಭಾಗಿತ್ವದಡಿ ಸರಸ್ವತಿ ಪಿಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜೀವನದಲ್ಲಿ ವಿದ್ಯೆ ಅತೀ ಮುಖ್ಯ. ಕಲಿಕೆಯ ಜತೆಗೆ ಮಕ್ಕಳಲ್ಲಿ ನೈತಿಕ ಸಂಸ್ಕಾರ ತುಂಬುವ ವಿದ್ಯೆಯ ಅವಶ್ಯಕತೆ ಹೆಚ್ಚುತ್ತಿದೆ. ಕೌಟುಂಬಿಕ ಸಂಸ್ಕಾರಗಳ ಜತೆಯಲ್ಲಿಯೇ ಶಿಕ್ಷಣ ಮುಂದುವರೆಯಬೇಕು.
ರಂಗಕರ್ಮಿ ಕಾಸರಗೋಡು ಚಿನ್ನಾ ಮಾತನಾಡಿ, ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಸಾಧನೆ ಕಷ್ಟವಲ್ಲ, ಶಾಲಾ-ಕಾಲೇಜು ವಿದ್ಯೆಯಲ್ಲಿ ಮಾತ್ರ ಸಂಪನ್ನರಾದರೆ ಸಾಲದು, ಸಾಂಸ್ಕೃತಿಕವಾಗಿಯೂ ಗಟ್ಟಿಯಾಗಬೇಕು. ಇಂಥ ಕಲಾಂಜಲಿ ಕಾರ್ಯಕ್ರಮಗಳ ಮೂಲಕ ಕುಮಟಾ ಪ್ರತಿಭೆಗಳು ರಾಜ್ಯ-ರಾಷ್ಟ್ರಮಟ್ಟದಲ್ಲಿ ಬೆಳಗಲಿ ಎಂದರು.
ಪ್ರಾಸ್ತಾವಿಕ ಮಾತನಾಡಿದ ವಿಧಾತ್ರಿ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ವಿಧಾತ್ರಿ ಅಕಾಡೆಮಿಯು ಕೊಂಕಣ ಎಜುಕೇಶನ್ ಟ್ರಸ್ಟಿನೊಂದಿಗೆ ಸಂಯೋಜಿತವಾಗಿ ೨೦೨೦ರಿಂದ ಸರಸ್ವತಿ ಪಿಯು ಕಾಲೇಜು ನಡೆಸುತ್ತಾ ಮಕ್ಕಳ ದಿನಾಚರಣೆಯನ್ನು ಕಲಾಂಜಲಿ ಕಾರ್ಯಕ್ರಮವಾಗಿ ಆಚರಿಸುತ್ತಿದೆ. ಕಾಲೇಜು ಆರಂಭಗೊಂಡು ೫ ವರ್ಷ ಸಂದ ವಿಶೇಷತೆಗಾಗಿ ಈ ವರ್ಷದಿಂದ ವಿಧಾತ್ರಿ ಸಮ್ಮಾನ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜುಕೇಶನ್ ಟ್ರಸ್ಟಿನ ಉಪಾಧ್ಯಕ್ಷ ರಮೇಶ ಪ್ರಭು, ಟ್ರಸ್ಟಿ ಡಿ.ಡಿ. ಕಾಮತ, ರಾಮಕೃಷ್ಣ ಗೋಳಿ, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಉಪಪ್ರಾಚಾರ್ಯೆ ಸುಜಾತಾ ಹೆಗಡೆ, ಪ್ರಸನ್ನ ಹೆಗಡೆ, ಸತೀಶ ಭಟ್, ಚಿದಾನಂದ ಭಂಡಾರಿ, ಅಕ್ಷಯ ಇತರರು ಇದ್ದರು. ವಿದ್ಯಾರ್ಥಿನಿ ಆರಾಧನಾ ಅವರಿಂದ ಭರತನಾಟ್ಯ ಪ್ರದರ್ಶನದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕಿರಣ ಭಟ್ ಹುತ್ಗಾರ ಸ್ವಾಗತಿಸಿದರು. ಸರಸ್ವತಿ ಪ್ರಾಥಮಿಕದ ಮುಖ್ಯ ಶಿಕ್ಷಕ ಗಣೇಶ ಜೋಶಿ ನಿರೂಪಿಸಿದರು. ಬಳಿಕ ಕಲಾಂಜಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿತು.