ಕನ್ನಡಪ್ರಭ ವಾರ್ತೆ ಮುಧೋಳ
ಜೀವನದಲ್ಲಿ ಏನಾದರು ಸಾಧನೆ ಮಾಡಬೇಕಾದರೆ ಒಳ್ಳೆಯ ಗುರಿ, ಉದ್ದೇಶ, ಪ್ರಾಮಾಣಿಕ ಪ್ರಯತ್ನ ಬೇಕು. ಹೀಗಿದ್ದಾಗ ಮಾತ್ರ ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಡಾ.ಟಿ.ವಿ.ಅರಳಿಕಟ್ಟಿಯವರ ಸಾಧನೆ ಇತರರಿಗೂ ಮಾದರಿಯಾಗಿದೆ ಎಂದು ಚಿತ್ರನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜಯ ರಾಘವೇಂದ್ರ ಹೇಳಿದರು.ಸ್ಥಳೀಯ ಅರಳಿಕಟ್ಟಿ ಫೌಂಡೇಶನ್‌ನ ಮುಧೋಳ ರಾಯಲ್ ಸ್ಕೂಲ್ ಆವರಣದಲ್ಲಿ ಸೋಮವಾರ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ನೂತನ ರಾಯಲ್ ವಾಟರ್ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕಡಿಮೆ ಪ್ರವೇಶ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಡಾ.ಟಿ.ವಿ.ಅರಳಿಕಟ್ಟಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಅದರಂತೆ ಸಹಕಾರಿ, ಸಾಮಾಜಿಕ, ಕೃಷಿ, ಕ್ರೀಡೆ ಸೇರಿದಂತೆ ಇತರೆ ಕ್ಷೇತ್ರದಲ್ಲಿಯೂ ಅವರು ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಪ್ರತಿಯೊಬ್ಬ ವ್ಯಕ್ತಿ ತಾನು ಗಳಿಸಿದ್ದರಲ್ಲಿ ಸ್ವಲ್ಪವಾದರೂ ಸಮಾಜಕ್ಕೆ ಖರ್ಚು ಮಾಡಬೇಕು. ಆಗ ಸಮಾಜ ತಮ್ಮನ್ನು ಗುರುತಿಸಿ ಗೌರವಿಸುತ್ತದೆ. ಸಮಾಜ ಕೊಡುವ ಗೌರವ ಎಲ್ಲರಿಗಿಂತಲೂ ದೊಡ್ಡದು ಎಂದರು.ಮಹಾನಗರಗಳ ಸ್ಕೂಲ್‌ನಲ್ಲಿರುವ ಗುಣಮಟ್ಟದ ಶಿಕ್ಷಣ, ಸೌಲಭ್ಯ ಮತ್ತು ಸೌಕರ್ಯಗಳು ಈ ಮುಧೋಳ ರಾಯಲ್ ಸ್ಕೂಲ್‌ನಲ್ಲಿವೆ. ಹೀಗಾಗಿ ಈ ಭಾಗದ ಪಾಲಕರು ಮಹಾನಗರಗಳಲ್ಲಿರುವ ಸ್ಕೂಲ್‌ನಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯುವ ಬದಲು ಇಲ್ಲಿ ಪಡೆದುಕೊಳ್ಳುವುದು ಉತ್ತಮ ಎಂದರು.
ನಿವೃತ್ತ ಡಿಡಿಪಿಐ ಎಂ.ಜಿ.ದಾಸರ, ಬೀಳಗಿಯ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ವಿ.ಪಾಟೀಲ, ಕೊಣ್ಣೂರು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೊಣ್ಣೂರ ಸಾಂದರ್ಭಿಕವಾಗಿ ಮಾತನಾಡಿದರು.ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ವಿ.ಅರಳಿಕಟ್ಟಿ ಸ್ವಾಗತಿಸಿ, ಮಾತನಾಡಿ, ನಾನು ಯಾವುದೇ ಲಾಭದ ಉದ್ದೇಶ ಇಟ್ಟುಕೊಂಡು ಶಿಕ್ಷಣ ಸಂಸ್ಥೆಯನ್ನು ತೆರೆದಿಲ್ಲ. ಗ್ರಾಮೀಣ ಭಾಗದ ಬಡ, ಪ್ರತಿಭಾವಂತ, ರೈತರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಬೇಕೆಂಬ ಸದುದ್ದೇಶದಿಂದ ಈ ಶೈಕ್ಷಣಿಕ ಸಂಸ್ಥೆ ತೆರೆದಿದ್ದೇನೆ. ವಿದ್ಯಾರ್ಥಿಗಳ ಪಾಲಕರು ನನಗೆ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಿದ್ದಾರೆ. ಅದಕ್ಕಾಗಿ ಅವರಿಗೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.ಈ ವೇಳೆ ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ಟಿ. ಅರಳಿಕಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ, ಕಾರ್ಯದರ್ಶಿ ವಿನಾಯಕ ಟಿ.ಅರಳಿಕಟ್ಟಿ, ವರ್ಷಾ ಘಾರಗೆ, ಗಿರೀಶಗೌಡ ಪಾಟೀಲ, ಅನಂತ ಘೋರ್ಪಡೆ, ನಟರಾಜ, ಕಂಬದ ರಂಗಯ್ಯ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಆಡಳಿತಾಧಿಕಾರಿ ಇಂದ್ರಿರಾ ಸಾತನೂರು, ಪ್ರಾಚಾರ್ಯ ಚಂದ್ರಶೇಖರ ನಾಗವಾಂದ, ಉಪ ಪ್ರಾಚಾರ್ಯ ಮಾರುತಿ ಪವಾರ ಇದ್ದರು.