ಕನ್ನಡಪ್ರಭ ವಾರ್ತೆ ಬೆಳಗಾವಿ2014ರ ಚುನಾವಣೆ ದೇಶದ ಹಿತದೃಷ್ಟಿಯಿಂದ ದೊಡ್ಡ ಚುನಾವಣೆ ಆಗಿತ್ತು. ಈ ಬಾರಿಯ ಚುನಾವಣೆಗೆ ಬಿಜೆಪಿ ಜನರ ಅಭಿಪ್ರಾಯ ಸಂಗ್ರಹಿಸಿ, ನಮ್ಮ ಸಂಕಲ್ಪ ಪತ್ರ ಬಿಡುಗಡೆ ಮಾಡಿದೆ. ಮೋದಿ ಗ್ಯಾರಂಟಿ ಹೆಸರಿನ ಮೇಲೆ ನಾವು ಮಾಡಿರುವ ಸಂಕಲ್ಪ ಹಾಗೂ ವಾಗ್ದಾನವನ್ನು ಈಡೇರಿಸುತ್ತೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭರವಸೆ ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ಬೇರೆ ಬೇರೆ ರಾಜಕೀಯ ಪಕ್ಷಗಳು ಜಾತಿ ಆಧಾರದ ಮೇಲೆ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಈ ವ್ಯವಸ್ಥೆಯ ನಾಲ್ಕು ವರ್ಗಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ದೇಶ ಒಂದು ಚುನಾವಣೆ, ಗರಿಬ್ ಕಲ್ಯಾಣ ಯೋಜನೆಯಡಿ ಮುಂದಿನ ಐದು ವರ್ಷ ಪ್ರತಿ ವ್ಯಕ್ತಿಗೆ ಐದು ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ. ಇಂದು ನಾವು ಆರ್ಥಿಕತೆಯಲ್ಲಿ ಸುಧಾರಣೆ ಆಗಿದ್ದು, ವಿಶ್ವಕ್ಕೇ ಐದನೆಯ ಸ್ಥಾನದಲ್ಲಿದ್ದೇವೆ. ಅದನ್ನು ಮೂರನೇ ಸ್ಥಾನಕ್ಕೆ ತರುತ್ತೇವೆ. ಆಯುಸ್ಮಾನ್ ಭಾರತ್ ಯೋಜನೆಯನ್ನು ತೃತಿಯ ಲಿಂಗಿಗಳು ಹಾಗೂ 70 ವಯಸ್ಸು ಮೀರಿದವರಿಗೂ ವಿಸ್ತರಣೆ ಮಾಡುತ್ತೇವೆ. ಬರುವ ಐದು ವರ್ಷದಲ್ಲಿ ಮೂರು ಕೋಟಿ ಮನೆಗಳ ನಿರ್ಮಾಣದ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ನಾನು ಮೋದಿಯ ಪರಿವಾರ ಎಂಬ ಕ್ಯಾಂಪೇನ್ ನಡೆಯುತ್ತಿದೆ. ಬೇರೆ ಬೇರೆ ಕ್ಷೇತ್ರದ ಜನರು ನಾನು ಮೋದಿ ಪರಿವಾರ, ಮೋದಿಗಾಗಿ ಈ ಭಾನುವಾರ ಹೀಗೆ ಮೂರು ಭಾನುವಾರ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.ಕುಟುಂಬ ರಾಜಕಾರಣ ವಿರೋಧಿಸಿದ ಮೋದಿ ಅವರಿಗೆ ಲಾಲೂ ಪ್ರಸಾದ್ ಯಾದವ ಟೀಕೆ ಮಾಡಿದ್ದರು. ಅದಕ್ಕೆ ಜನರು ನಾನು ಮೋದಿ ಪರಿವಾರ ಎಂದು ಅಭಿಯಾನದ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಮಹದಾಯಿ ಯೋಜನೆಯನ್ನು ಕೇಂದ್ರ ಸರ್ಕಾರ ಕ್ಲಿಯರ್ ಮಾಡಿದೆ. ಆದರೆ ಪರಿಸರ ಇಲಾಖೆ ನಿಯಮಗಳಿಂದ ತಡೆಯಾಗಿದೆ. ಇದನ್ನು ಸರಿಪಡಿಸಿ ಯೋಜನೆ ಕಾರ್ಯಾರಂಭ ಮಾಡುವುದೇ ಬಿಜೆಪಿ ಗುರಿ ಎಂದು ಹೇಳಿದರು.
ರಾಷ್ಟ್ರೀಯ ವಿಚಾರದ ಆಧಾರದ ಮೇಲೆ ಲಿಂಗಾಯತ ಹಾಗೂ ಮರಾಠಾ ಮತಗಳು ಗಟ್ಟಿಯಾಗಿವೆ. ಮತಗಳ ವಿಭಜನೆ ಆಗುವುದಿಲ್ಲ. ವಿಭಜಿಸುವ ಕಾರ್ಯಕ್ಕೆ ಕೈ ಹಾಕುವವರು ಪರಿಣಾಮ ಎದುರಿಸುತ್ತಾರೆ ಎಂದು ಹೇಳಿದರು.ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಬಿಜೆಪಿ ಮುಖಂಡರಾದ ಎಂ.ಬಿ.ಜೀರಲಿ, ರಾಜೇಂದ್ರ ಹರಕುಣಿ, ರಮೇಶ ದೇಶಪಾಂಡೆ, ಉಜ್ವಲಾ ಬಡವನಾಚೆ, ಹನುಮಂತ ಕೊಂಗಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.-----ಸುದೀರ್ಘ ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ದಿ.ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಸಾವಿನಲ್ಲಿಯೂ ರಾಜಕೀಯ ಮಾಡುವಂಥ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ. ಕೊರೊನಾ ಸಂಕಷ್ಟದಲ್ಲಿ ಇತರರಿಗೆ ಹರಡದಂತೆ ಮುಂಜಾಗೃತ ಕ್ರಮವಾಗಿ ಕೊರೊನಾ ಪೀಡಿತರ ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸದೇ ರೂಲ್ಸ್ ಪ್ರಕಾರ ಆರೋಗ್ಯ ಸಿಬ್ಬಂದಿ ಹೂಳುವ ಪ್ರಕ್ರಿಯೆ ಪಾಲಿಸಲಾಗುತ್ತಿತ್ತು. ಅಂಗಡಿ ಅವರು ನಿಧನರಾದಾಗ ನಾವೆಲ್ಲರೂ ದೆಹಲಿಯಲ್ಲಿಯೇ ಇದ್ದೆವು. ನಾಗರಿಕರಿಗೊಂದು ಕಾನೂನು, ನಾಯಕರಿಗೊಂದು ಕಾನೂನು ಅನುಸರಿಸುವುದು ಸರಿಯಲ್ಲ. ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗುತ್ತೆ. ಡಿಸಿಎಂ ಡಿ.ಕೆ.ಶಿವಕುಮಾರ್ ಇಂತಹ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಬೇಕು. ಇಂತಹ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.
- ಈರಣ್ಣ ಕಡಾಡಿ, ರಾಜ್ಯಸಭೆ ಸದಸ್ಯ