ಹೊಸಪೇಟೆ: ಮಧ್ಯಕಾಲೀನ ಕರ್ನಾಟಕದ ಇತಿಹಾಸದಲ್ಲಿ ಮಹಿಳೆಯರ ಸಾಮಾಜಿಕ ಸ್ಥಿತಿಗತಿ ಒಂದು ರೋಚಕವಾದ ಮತ್ತು ಸಾರ್ವಕಾಲಿಕ ಪ್ರೇರಣೆ ನೀಡುವ ಅಧ್ಯಾಯವಾಗಿದೆ ಎಂದು ಸಂಶೋಧನಾ ವಿದ್ಯಾರ್ಥಿನಿ ಮಂಜುಳಾ ಓ. ಹೇಳಿದರು.
ಮಧ್ಯಕಾಲೀನ ಸಂದರ್ಭದಲ್ಲಿ ಮಹಿಳೆಯರು ರಾಣಿ, ಯುವರಾಣಿ, ಮಹಾಮಂಡಲೇಶ್ವರಿ ಹಾಗೂ ಆಡಳಿತಗಾರ್ತಿಯರಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳ ಜತೆಗೆ ಸಾಮಾನ್ಯ ಮಹಿಳೆಯರು ಕೃಷಿ, ಪಶುಪಾಲನೆ ಹಾಗೂ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ರಾಜಕೀಯ ರಂಗದಲ್ಲಿ ಅರಮನೆಯ ಆಡಳಿತದಿಂದ ಹಿಡಿದು ರಣರಂಗದ ನಾಯಕತ್ವದ ವರೆಗೆ (ರಾಣಿ ಅಬ್ಬಕ್ಕ, ಶಾಂತಲಾದೇವಿ), ಆಧ್ಯಾತ್ಮಿಕ ರಂಗದಲ್ಲಿ ಸಮಾಜದ ಲಿಂಗ ತಾರತಮ್ಯವನ್ನೇ ಬುಡಮೇಲು ಮಾಡಿದ ವಚನ ಕ್ರಾಂತಿಯವರೆಗೆ (ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ) ಮತ್ತು ಆರ್ಥಿಕವಾಗಿ ಸ್ವತಂತ್ರ ವ್ಯಾಪಾರಿಗಳಾಗಿ ಹಾಗೂ ಅರಮನೆಯ ಜವಾಬ್ದಾರಿಯುತ ಉದ್ಯೋಗಿಗಳಾಗಿ ಮಹಿಳೆಯರು ತಮ್ಮ ಅಪ್ರತಿಮ ಅಸ್ಮಿತೆಯನ್ನು ಜಗತ್ತಿಗೆ ಸಾರಿದರು. ಸಾಮಾನ್ಯ ಮಹಿಳೆಯರೂ ಊರಿನ ರಕ್ಷಣೆಗಾಗಿ ಆತ್ಮಾಭಿಮಾನದಿಂದ ಹೋರಾಡಿ ವೀರಗಲ್ಲುಗಳಲ್ಲಿ ಅಮರರಾದ ಇತಿಹಾಸ ನಮ್ಮ ಕರ್ನಾಟಕದ್ದಾಗಿದೆ ಎಂದರು.ಮಹಿಳೆಯರ ಮೇಲೆ ಪರಿಣಾಮ ಬೀರಿದ್ದ ಸತಿಸಹಗಮನ, ದೇವದಾಸಿ ಪದ್ಧತಿ, ಬಾಲ್ಯವಿವಾಹ ಹಾಗೂ ಇತರ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಪುರಂದರದಾಸರು ಹಾಗೂ ಕನಕದಾಸರು ಸಾಮಾಜಿಕ ಜಾಗೃತಿ ಮೂಡಿಸಿದ್ದರು ಎಂದರು.
ವಿಭಾಗದ ಅಧ್ಯಾಪಕರು, ಸಿಬ್ಬಂದಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.