ಕನ್ನಡಪ್ರಭ ವಾರ್ತೆ ಬಾಗಲಕೋಟೆ ಗುರು ಪೂರ್ಣಿಮೆಯು ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಸಾರುವ ಪವಿತ್ರ ಹಬ್ಬವಾಗಿದ್ದು, ಜ್ಞಾನ ನೀಡಿದ ಗುರುಗಳಿಗೆ ಕೃತಜ್ಞತೆ ಅರ್ಪಿಸುವ ದಿನವಾಗಿದೆ. ಸತ್ಯದ ಅನ್ವೇಷಣೆಯ ಮೂಲಕ ಜ್ಞಾನವನ್ನು ಸಂಪಾದಿಸಿ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರೇ ನಿಜವಾದ ಶಿಷ್ಯರು ಎಂದು ಬಿ.ವಿ.ವಿ. ಸಂಘದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎಂ.ಪಿ.ಚಂದ್ರಿಕಾ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗುರು ಪೂರ್ಣಿಮೆಯು ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಸಾರುವ ಪವಿತ್ರ ಹಬ್ಬವಾಗಿದ್ದು, ಜ್ಞಾನ ನೀಡಿದ ಗುರುಗಳಿಗೆ ಕೃತಜ್ಞತೆ ಅರ್ಪಿಸುವ ದಿನವಾಗಿದೆ. ಸತ್ಯದ ಅನ್ವೇಷಣೆಯ ಮೂಲಕ ಜ್ಞಾನವನ್ನು ಸಂಪಾದಿಸಿ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರೇ ನಿಜವಾದ ಶಿಷ್ಯರು ಎಂದು ಬಿ.ವಿ.ವಿ. ಸಂಘದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎಂ.ಪಿ.ಚಂದ್ರಿಕಾ ಹೇಳಿದರು.ನಗರದ ಬಿ.ವಿ.ವಿ. ಸಂಘದ ನೂತನ ಸಭಾಭವನದಲ್ಲಿ ನಡೆದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುವುದಷ್ಟೇ ಅಲ್ಲದೆ, ಆತ್ಮವಿಶ್ವಾಸ, ನಾಯಕತ್ವ ಗುಣ, ಶಿಸ್ತು, ಸಹಕಾರ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುವ ವಿದ್ಯಾರ್ಥಿಗಳು ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಮಾತನಾಡಿ, ಶಿಕ್ಷಣವು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ವ್ಯಕ್ತಿತ್ವ ರೂಪಿಸುವ ಸಮಗ್ರ ಪ್ರಕ್ರಿಯೆಯಾಗಿದೆ. ವಿದ್ಯಾರ್ಥಿಗಳು ಕ್ರೀಡೆ, ಕಲೆ ಹಾಗೂ ಸಾಂಸ್ಕೃತಿಕ ವೇದಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಿಕೊಂಡು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಮಹಾವಿದ್ಯಾಲಯವು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸುತ್ತಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಾಧ್ಯಕ್ಷ ಡಾ.ಬಸವರಾಜ.ವಿ. ಖೋತ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಂತ ಪರಿಣಾಮಕಾರಿ ವೇದಿಕೆಗಳಾಗಿವೆ ಎಂದರು.ಮಹಾವಿದ್ಯಾಲಯದ ಸಿಬ್ಬಂದಿ ಕಾರ್ಯದರ್ಶಿ ಡಾ.ನಂಜುಂಡಸ್ವಾಮಿ ಸ್ವಾಗತಿಸಿದರು. ಪಾಂಡುರಂಗ ರಾಠೋಡ ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಸ್.ಎಸ್.ಕೋಟ್ಯಾಳ ವಂದಿಸಿದರು. ಡಾ.ಐ.ಕೆ.ಮಠದ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ ಜಿ.ಎಂ.ನಾವದಗಿ, ಎಂ.ಕಾಂ ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ಸೌಮ್ಯ ಕುಂಬಾರ ಹಾಗೂ ಬಿ.ಬಿ.ಎ ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ಮಾಯರಾಜ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.