ಮದ್ದೂರು ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ
ಶೋಷಣೆಗೆ ಒಳಗಾಗುವ ಎಸ್ಸಿ, ಎಸ್ಟಿ ಜನಾಂಗದವರ ಸಮಸ್ಯೆ ತಾಲೂಕು ಹಂತದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್. ಮೂರ್ತಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಶೋಷಣೆಗೆ ಒಳಗಾಗುವ ಎಸ್ಸಿ, ಎಸ್ಟಿ ಜನಾಂಗದವರು ಯಾರೇ ಆಗಿರಲಿ ಆಯೋಗಕ್ಕೆ ಬಂದು ನಿರ್ಭೀತಿಯಿಂದ ಪ್ರಕರಣ ದಾಖಲಿಸಬಹುದು ಎಂದು ಹೇಳಿದರು.ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟು ಅಯೋಗ ಸದಾ ನಿಮ್ಮೊಂದಿಗೆ ಇರುತ್ತದೆ. ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಾಲೂಕಿನಿಂದ ಈಗಾಗಲೇ 48 ಅರ್ಜಿ ಆಯೋಗಕ್ಕೆ ಸಲ್ಲಿಕೆಯಾಗಿದ್ದು, ಅದರಲ್ಲಿ ನ್ಯಾಯಾಲಯದ ಮುಖಾಂತರ 12 ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಲಿತ ಜನಾಂಗಕ್ಕೆ ಪರ್ಯಾಯವಾಗಿ ಸ್ಮಶಾನ ಭೂಮಿ ನೀಡುವಂತೆ ಮನವಿ ಬಂದಿದ್ದು, ಅಂತಹ ಸೂಕ್ಷ್ಮ ಗ್ರಾಮಗಳಲ್ಲಿ ಪರ್ಯಾಯವಾಗಿ ಸ್ಮಶಾನ ಭೂಮಿ ಮಂಜೂರು ಮಾಡಲು ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ರಾಮಲಿಂಗಯ್ಯ, ನಗರಸಭೆ ಪೌರಾಯುಕ್ತೆ ರಾಧಿಕಾ, ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ಸಿಪಿಐ ನವೀನ್, ನಾರಾಯಣಿ, ಮುಖಂಡರಾದ ಚಿದಂಬರ ಮೂರ್ತಿ, ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಎಚ್.ರಾಜೇಂದ್ರ, ಕೆಡಿಪಿ ಸದಸ್ಯ ಅರುವನಹಳ್ಳಿ ಸಿದ್ದರಾಜು, ಶಿವಲಿಂಗಯ್ಯ, ಮಹದೇವಯ್ಯ, ಮೂರ್ತಿ, ಕೆ.ಶ್ರೀನಿವಾಸ್, ಸ್ವಾಮಿ, ಆಲೂರು ಕುಮಾರ್, ಭಾನು ಪ್ರಕಾಶ್ ಮತ್ತಿತರರು ಇದ್ದರು.
5ಕೆಎಂಎನ್ ಡಿ21