ಪರಿಸರಕ್ಕೆ ವಿರೋಧವಾಗಿ ವರ್ತಿಸಿದಲ್ಲಿ ಪ್ರಾಣಿ ಸಂಕುಲದ ಅವನತಿ: ಶ್ರೀ ಸದಾಶಿವ ಸ್ವಾಮೀಜಿ

KannadaprabhaNewsNetwork |  
Published : Apr 05, 2026, 02:45 AM IST
 ಆರತಿ ಕಾರ್ಯಕ್ರಮ ಸಂದರ್ಭ | Kannada Prabha

ಸಾರಾಂಶ

ಪ್ರಕೃತಿ ಪರಿಸರಕ್ಕೆ ವಿರೋಧವಾಗಿ ವರ್ತಿಸಿದಲ್ಲಿ ಪ್ರಾಣಿ ಸಂಕುಲದ ಅವನತಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರ ಪ್ರಕೃತಿ ಪರಿಸರಕ್ಕೆ ವಿರೋಧವಾಗಿ ವರ್ತಿಸಿದಲ್ಲಿ ಪ್ರಾಣಿ ಸಂಕುಲದ ಅವನತಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ ನಮಾಮಿ ಕಾವೇರಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ನಡೆದ 184ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ನಾಗಾಲೋಟದ ಅಭಿವೃದ್ಧಿ ನಡುವೆ ಪ್ರಕೃತಿ ಉಳಿಸಿ ನಾಡನ್ನು ಬೆಳೆಸುವ ಕೆಲಸ ಆಗಬೇಕು. ಅಭಿವೃದ್ಧಿ ಜೊತೆಗೆ ಪ್ರಕೃತಿ ಸಂರಕ್ಷಣೆ ಮಾಡುವ ಕಾರ್ಯ ನಿರಂತರವಾಗಿರಬೇಕು. ಪ್ರತಿಯೊಬ್ಬರೂ ಜಲಮೂಲಗಳ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಸೋಮನಾಥನಂದ ಗಿರಿ ಸ್ವಾಮೀಜಿ ಮಾತನಾಡಿ, ಪ್ರಸಕ್ತ ಕಾವೇರಿ ತನ್ನ ಒಡಲಲ್ಲಿ ಕಲುಷಿತವನ್ನು ಹೊತ್ತು ಹರಿಯುವ ದುಸ್ಥಿತಿಗೆ ಬರುವಂತಾಗಿದೆ. ಪ್ರತಿಯೊಬ್ಬರಲ್ಲಿ ನದಿ ಸಂರಕ್ಷಣೆಯ ಪರಿಜ್ಞಾನ ಇರಬೇಕು ಎಂದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಸುತ್ತೂರು ಕ್ಷೇತ್ರಗಳ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಿರಂತರವಾಗಿ ಹಲವು ವರ್ಷಗಳಿಂದ ಪ್ರತಿ ತಿಂಗಳು ಹುಣ್ಣಿಮೆಯ ದಿನದಂದು ಜೀವ ನದಿಗೆ ಆರತಿ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ನದಿ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಆರತಿ ಬಳಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರು ಮಾತನಾಡಿ, ಕ್ಷೇತ್ರದ ಜ್ಞಾನ ವಿಕಾಸ ಕಾರ್ಯಕ್ರಮಗಳ ಮೂಲಕ ಸಮಾಜದ ಸಾವಿರಾರು ಅಸಹಾಯಕ ಮಹಿಳೆಯರ ಬದುಕು ಹಸನಾಗಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರ ಹುಟ್ಟುಹಬ್ಬ ಅಂಗವಾಗಿ ರಾಜ್ಯದಾದ್ಯಂತ ಸುಮಾರು 26 ಸಾವಿರ ಅಸಹಾಯಕ ಮಹಿಳೆಯರಿಗೆ ಸಹಾಯ ಹಸ್ತ ನೀಡಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭ ಅವರ ಹುಟ್ಟು ಹಬ್ಬದ ಅಂಗವಾಗಿ ಕುಶಾಲನಗರದಲ್ಲಿ ಯೋಜನೆಯ ಕಾರ್ಯಕರ್ತರು ಮತ್ತು ಯೋಜನಾ ಕಚೇರಿಯ ಸಿಬ್ಬಂದಿ, ಶೌರ್ಯ ತಂಡದ ಸದಸ್ಯರು ಸೇರಿ ಕಾವೇರಿ ನದಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಅಧ್ಯಕ್ಷರಾದ ಕೆ ಎಸ್ ಮೂರ್ತಿ ಅವರು ಯಾವುದೇ ಸಂದರ್ಭ ಜಲಮೂಲಗಳನ್ನು ಕಲುಷಿತಗೊಳಿಸಿದಂತೆ ಸಲಹೆ ನೀಡಿದರು. ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಆರತಿ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾಹಿತಿ ನೀಡಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಿದರು.ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಎನ್ ಚಂದ್ರಮೋಹನ್, ಉದ್ಯಮಿ ಎಸ್ ಕೆ ಸತೀಶ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಮಂಡೆಪಂಡ ಬೋಸ್ ಮೊಣ್ಣಪ್ಪ, ಧರಣಿ, ಸೌಮ್ಯ ಭಟ್, ಕರುಂಬಯ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕರಾದ ನಾಗರಾಜ್, ಒಕ್ಕೂಟದ ಅಧ್ಯಕ್ಷರಾದ ಪಾರ್ವತಿ, ಸೇವಾ ಪ್ರತಿನಿಧಿ ಜಯಲಕ್ಷ್ಮಿ, ಡಾಟಿ, ಶೌರ್ಯ ತಂಡದ ಗಿರೀಶ್, ಲಲಿತಾ ಶಿವಕುಮಾರ್ ಮತ್ತು ಯೋಜನೆ ಕಚೇರಿ ಸಿಬ್ಬಂದಿ ಮತ್ತು ಯೋಜನೆಯ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ನದ ರಾಮಯ್ಯ ಅಲ್ಲ, ನೀನು ಚೀಲದ ರಾಮಯ್ಯ: ಆರ್‌.ಅಶೋಕ
ಉಪ ಚುನಾವಣೆಯಿಂದ ರಾಜ್ಯಕ್ಕೆ ಹೊಸ ದಿಕ್ಸೂಚಿ: ಸುನೀಲ್‌ ಕುಮಾರ್‌