ಪುತ್ತೂರು: ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಏ.೯ರಿಂದ ೧೨ರ ತನಕ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಅಯೋಧ್ಯೆಯಿಂದ ಶ್ರೀರಾಮ ಜ್ಯೋತಿ, ಮೂಲ ಮೃತ್ತಿಕೆ, ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಿಂದ ಗಂಗಾಜಲ ಪಡೆದು, ಅಂಜನಾದ್ರಿಯಿಂದ ಹನುಮ ಜ್ಯೋತಿ, ಮೃತ್ತಿಕೆ ಹಾಗೂ ಪಂಪಾಸರೋವರದ ಪವಿತ್ರ ಜಲ ಸಂಗ್ರಹಿಸಿಕೊಂಡು ಹೊರಟ ಶ್ರೀರಾಮಹನುಮ ರಾಮರಥವು ಪುತ್ತೂರು ಪುರ ಪ್ರವೇಶ ಮಾಡಿದ ಸಂದರ್ಭ ಭವ್ಯ ಸ್ವಾಗತ ನೀಡಲಾಯಿತು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸವಣೂರು ಸೀತಾರಾಮ ರೈ ಅವರು ಹನುಮಗಿರಿ ಬ್ರಹ್ಮಕಲಶೋತ್ಸವದಲ್ಲಿ ಯಾವ ಭೇದಭಾವವಿಲ್ಲ. ಎಲ್ಲ ಪಕ್ಷದವರು ಜೊತೆಯಾಗಿ ಈ ರಥಯಾತ್ರೆ ಮತ್ತು ನಾಡಿದ್ದು ನಡೆಯುವ ಬ್ರಹ್ಮಕಲಶೋತ್ಸವ ನೆರವೇರಿಸಲಿದ್ದಾರೆ. ಇದರ ಜೊತೆಗೆ ದೇಶದ ಪ್ರಮುಖ ಸ್ವಾಮೀಜಿಯವರು ಕ್ಷೇತ್ರಕ್ಕೆ ಆಗಮಿಸುವುದು ವಿಶೇಷವಾದರೆ ದೈವ ನರ್ತಕ ಡಾ.ರವೀಶ್ ಪಡುಮಲೆ ಅವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದು ಮತ್ತೊಂದು ವಿಶೇಷವಾಗಿದೆ. ಈ ಮೂರು ನಾಲ್ಕು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡರೆ ಹನುಮಗಿರಿಯ ಕಾರ್ಯಕ್ರಮ ಏನು, ಯಾವ ರೀತಿ ಮುಂದೆ ಹೋಗಬಹುದು ಎಂದು ತಿಳಿದುಕೊಳ್ಳಬಹುದು. ಹಾಗಾಗಿ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ನಾವೆಲ್ಲ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮತ್ತು ಕೋಟಿ ಶ್ರೀರಾಮ ತಾರಕ ಜಪ ಯಜ್ಞದ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಮಾತನಾಡಿ ಅಯೋಧ್ಯೆ ಮತ್ತು ಅಂಜನಾದ್ರಿಯಿಂದ ಹೊರಟ ರಥ ಇವತ್ತು ಪುತ್ತೂರಿನ ಮಣ್ಣಿಗೆ ಕಾಲಿಟ್ಟಿದೆ. ಈ ರಥಯಾತ್ರೆಯನ್ನು ಎಲ್ಲರೂ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಕೇವಲ ಎರಡು ದಿನದಲ್ಲಿ ಜೋಡಿಸಿಕೊಂಡ ಕಾರ್ಯಕ್ರಮದಲ್ಲಿ ಇಷ್ಟೊಂದು ಭಕ್ತರು ಸೇರುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿರುವುದು ಸಂತೋಷ ಆಗಿದೆ. ಮುಂದೆ ಏ.೮ಕ್ಕೆ ಭವ್ಯ ಹೊರೆಕಾಣಿಕೆ ಮೆರವಣಿಗೆಯೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡಲಿದೆ. ಏ.೯ರಿಂದ ೧೨ರ ತನಕ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಹಾಗೂ ಕೋಟಿ ಶ್ರೀರಾಮ ತಾರಕ ಜಪ ಯಜ್ಞದಲ್ಲೂ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಬ್ರಹ್ಮಕಲಶೋತ್ಸವದಲ್ಲಿ ಗಂಗೆ ಮತ್ತು ಸರಯೂ ನದಿಯ ತೀರ್ಥವನ್ನು ತಂದು ಬ್ರಹ್ಮಕಲಶ ಮಾಡುವ ಉದ್ದೇಶವಿಟ್ಟ ಕಾರ್ಯ ಅತ್ಯಂತ ಪುಣ್ಯ ಕಾರ್ಯ ಎಂದರು.ಬೊಳುವಾರಿನಿಂದ ಚಾಲನೆಗೊಂಡ ಮೆರವಣಿಗೆಯು ಮುಖ್ಯರಸ್ತೆಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದ ಬಳಿ ಸಮಾವೇಶಗೊಂಡಿತ್ತು. ಅಲ್ಲಿ ಅರ್ಚಕರು ರಥಕ್ಕೆ ಆರತಿ ಬೆಳಗಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ ಬೆಡೇಕರ್ ಮತ್ತು ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರಿಗೆ ರಥದಿಂದ ಜ್ಯೋತಿ ಹಸ್ತಾಂತರಿಸಲಾಯಿತು. ಇದೇ ವೇಳೆ ಬ್ರಹ್ಮನಗರ ಮಾರಿಯಮ್ಮ ದೇವಸ್ಥಾನ ಮತ್ತು ಶ್ರೀ ಮಹಾಲಕ್ಷ್ಮೀ ದೇವಿ ಬೆಟ್ಟಕ್ಕೆ ಜ್ಯೋತಿಯನ್ನು ಕೊಂಡೊಯ್ಯಲಾಯಿತು.