ಮೂಲಭೂತ ಸವಲತ್ತು ಒದಗಿಸದ ಅಧಿಕಾರಿಗಳ ವಿರುದ್ಧ ಕ್ರಮ: ನಯನ ಮೋಟಮ್ಮ

KannadaprabhaNewsNetwork | Published : Oct 21, 2023 12:31 AM

ಸಾರಾಂಶ

ಮೂಲಭೂತ ಸವಲತ್ತು ಒದಗಿಸದ ಅಧಿಕಾರಿಗಳ ವಿರುದ್ಧ ಕ್ರಮ: ನಯನ ಮೋಟಮ್ಮ
ಹರಿಹರದಳ್ಳಿ ಗ್ರಾಪಂನಲ್ಲಿ ಕುಂದು ಕೊರತೆ ಸಭೆ । ಸ್ಮಶಾನ ಹಾಗೂ ಆಶ್ರಯ ನಿವೇಶನಗಳ ಬೇಡಿಕೆ, ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳು ಒತ್ತು ನೀಡಬೇಕು. ನಿರ್ಲಕ್ಷ್ಯವಹಿಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಎಚ್ಚರಿಸಿದರು. ತಾಲೂಕಿನ ಹರಿಹರದಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮಸ್ಥರಿಗೆ ನೆರವಾಗುವ ದೃಷ್ಟಿಯಿಂದ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯನಿರ್ವಹಿಸಿ ಗ್ರಾಮಸ್ಥರ ವಿಶ್ವಾಸ ಗಳಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಕುಂದು ಕೊರತೆ ಸಭೆ ಪಕ್ಷಾತೀತವಾಗಿದ್ದು ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರ ಕಂಡು ಕೊಡಲಾಗುವುದು. ಗ್ರಾಮದ ನಿವಾಸಿಗಳು ಯಾವುದೇ ಸಮಸ್ಯೆಗಳಿದ್ದರೆ ಮುಕ್ತವಾಗಿ ತಿಳಿಸಬಹುದಾಗಿದೆ. ಆದಷ್ಟು ಸಮಸ್ಯೆ ಸ್ಥಳದಲ್ಲೇ ಪರಿಹರಿಸಲಾಗುವುದು. ಇನ್ನೂ ಕೆಲವು ಸಮಸ್ಯೆಗಳಿಗೆ ಸಮಯಾವಕಾಶ ಪಡೆದು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಮಗಳಲ್ಲಿ ರಸ್ತೆ, ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲಭೂತ ಸವಲತ್ತು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಪಂ ಆಡಳಿತ ಮಂಡಳಿ ಕಾರ್ಯನಿರ್ವಹಿಸಬೇಕು. ದೇಶದ ಬೆನ್ನೆಲುಬಾದ ರೈತರಿಗೆ ಎಂದಿಗೂ ತೊಂದರೆ ಯಾಗದಂತೆ ಸೇವೆ ನೀಡುವುದೇ ಸರ್ಕಾರದ ಗುರಿ ಎಂದು ಹೇಳಿದರು. ಕ್ಷೇತ್ರದಲ್ಲಿ ಈಗಾಗಲೇ 49 ಗ್ರಾಪಂ ಗಳ ವ್ಯಾಪ್ತಿಯಲ್ಲಿ 28 ಜನಸಂಪರ್ಕ ಸಭೆ ನಡೆಸಿ ಇದೀಗ ಹರಿಹರದಹಳ್ಳಿ ಗ್ರಾಪಂಗೆ ಹಾಜರಾಗಿದ್ದು ಬಹುತೇಕ ಭೇಟಿ ನೀಡಿದ ಪಂಚಾಯಿತಿಗಳಲ್ಲಿ ಸ್ಮಶಾನ ಹಾಗೂ ಆಶ್ರಯ ನಿವೇಶನ ಸಮಸ್ಯೆಗಳಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಚರ್ಚಿಸಿ ಗ್ರಾಮಸ್ಥರ ಮೂಲ ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದರು. ಆರದವಳ್ಳಿ ಗ್ರಾಮಸ್ಥ ಯೋಗೀಶ್ ಮಾತನಾಡಿ, ಗ್ರಾಮದಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ಮಂಜೂರಾಗಿದೆ. ಆದರೆ, ಇದುವರೆಗೂ ಹಕ್ಕುಪತ್ರ ವಿತರಿಸಿಲ್ಲ. ಈ ಸಂಬಂಧವಾಗಿ ಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿದರೆ ಸ್ಪಂದಿಸುತ್ತಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆಗಳಿದ್ದಲ್ಲಿ ಬಗೆಹರಿಸಿ ಹಕ್ಕುಪತ್ರ ವಿತರಿಸಲಾಗುವುದು ಎಂದರು. ಗ್ರಾಮಸ್ಥ ಮೋಹನ್ ಮಾತನಾಡಿ, ಪಂಚಾಯಿತಿ ಆಡಳಿತಾರೂಢ ಪಕ್ಷ ದಲಿತರು ಹಾಗೂ ಸಾಮಾನ್ಯರನ್ನು ಕಡೆಗಣಿಸಲಾಗುತ್ತಿದೆ. ಕೇವಲ ಅನುಕೂಲಕ್ಕೆ ತಕ್ಕಂತೆ ಅವರವರ ವ್ಯಾಪ್ತಿಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಅಂಬೇಡ್ಕರ್ ಸಂವಿಧಾನದಂತೆ ಪ್ರತಿಯೊಬ್ಬರಿಗೂ ಸಮರ್ಪಕ ಸವಲತ್ತು ಒದಗಿಸಬೇಕು. ಇದನ್ನು ಹೊರತುಪಡಿಸಿ ಬೇಕಾದವರಿಗೆ ಮಾತ್ರ ಸವಲತ್ತು ಹಂಚಿಕೆ ಗೊಂಡಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು. ಹೊಸಕೋಟೆ ಗ್ರಾಮಸ್ಥ ಶಿವರಾಜ್ ಮಾತನಾಡಿ, ಕ್ರಸ್‌ ಗೇಟ್‌ ನಿಂದ ಹೊಸಕೋಟೆಯ ಬಸವಣ್ಣ ದೇವಾಲಯದವರೆಗೂ ರಸ್ತೆ ಡಾಂಬರೀಕರಣ ಗೊಂಡು ಹಲವಾರು ವರ್ಷಗಳೇ ಕಳೆದಿದ್ದು, ಈಗ ಹಾಳಾಗಿದೆ. ಪ್ರತಿನಿತ್ಯ ಗ್ರಾಮಸ್ಥರಿಗೆ ಸಂಚರಿಸಲು ತೀವ್ರ ಕಿರಿಕಿರಿಯಾಗುತ್ತಿದೆ. ಇದಕ್ಕೆ ಸ್ಪಂದಿಸಿದ ಶಾಸಕರು ರಸ್ತೆ ಡಾಂಬರೀಕರಣಕ್ಕಾಗಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ನಡೆಸಲಾಗುವುದು ಎಂದರು. ಕ್ಷೇತ್ರದಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಗ್ರಾಮಕ್ಕೂ ಕುಡಿಯುವ ನೀರಿನ ತೊಟ್ಟಿಯನ್ನು ಶಾಸಕರ ಅನುದಾನದಲ್ಲಿ ನಿರ್ಮಿಸಿ ಪೂರ್ಣಗೊಳಿಸಲಾಗುವುದು. ರಾಮನಹಳ್ಳಿ ಸರ್ಕಾರಿ ಶಾಲೆ ಶೌಚಾಲಯ ಕೊರತೆಯಿರುವ ಹಿನ್ನೆಲೆಯಲ್ಲಿ ಗಮನಕ್ಕೆ ತಂದಾಗ ಕೂಡಲೇ ಶೌಚಾಲಯ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಹಾಪ್ಕಾಮ್ಸ್ ಗೌರವಾಧ್ಯಕ್ಷ ಎ.ಎನ್.ಮಹೇಶ್, ಹರಿಹರದಹಳ್ಳಿ ಗ್ರಾಪಂ ಅಧ್ಯಕ್ಷೆ ಶಾರದಾ ಮಾಸ್ತೇಗೌಡ, ಉಪಾಧ್ಯಕ್ಷ ಜೆ.ಎನ್.ಮಹೇಶ್, ಸದಸ್ಯರಾದ ಎಚ್.ಎಂ.ಮಂಜೇಗೌಡ, ಯಶ್ವಂತ್ ರಾಜ್ ಅರಸ್, ಜಯಂತಿ, ಸ್ವಪ್ನ, ಮುಳ್ಳೇಗೌಡ, ತಾಲೂಕು ಪಂಚಾಯಿತಿ ಸಹಾಯಕ ಅಧಿಕಾರಿ ಜಯಸಿಂಹ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್, ಪಿಡಿಓ ಲಕ್ಷ್ಮಣ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಪೋಟೋ ಫೈಲ್ ನೇಮ್ 20 ಕೆಸಿಕೆಎಂ 3 ಚಿಕ್ಕಮಗಳೂರು ತಾಲೂಕಿನ ಹರಿಹರದಳ್ಳಿ ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕುಂದು ಕೊರತೆ ಸಭೆಯನ್ನು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರು ಉದ್ಘಾಟಿಸಿದರು.

Share this article