ಕನ್ನಡಪ್ರಭ ವಾರ್ತೆ ಬೆಳಗಾವಿ ನಗರ ಸೇರಿದಂತೆ ಜಿಲ್ಲಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಭದ್ರತೆಗೆ ಸಿದ್ಧತೆ ಮಾಡಿಕೊಂಡಿದೆ. ಹೋಮ್ ಸ್ಟೇ, ಹೋಟೆಲ್, ಪ್ರವಾಸಿ ತಾಣಗಳು ಹಾಗೂ ಮೋಜು-ಮಸ್ತಿ ಸ್ಥಳಗಳ ಸುತ್ತಮುತ್ತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಭದ್ರತೆ ಬಿಗಿಗೊಳಿಸಲು ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರ ಸೇರಿದಂತೆ ಜಿಲ್ಲಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಭದ್ರತೆಗೆ ಸಿದ್ಧತೆ ಮಾಡಿಕೊಂಡಿದೆ. ಹೋಮ್ ಸ್ಟೇ, ಹೋಟೆಲ್, ಪ್ರವಾಸಿ ತಾಣಗಳು ಹಾಗೂ ಮೋಜು-ಮಸ್ತಿ ಸ್ಥಳಗಳ ಸುತ್ತಮುತ್ತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಭದ್ರತೆ ಬಿಗಿಗೊಳಿಸಲು ನಿರ್ಧರಿಸಿದ್ದಾರೆ.

ಮೈ ಕೊರೆಯುವ ಚಳಿಯ ಮಧ್ಯೆಯೇ ಹೊಸ ವರ್ಷ ಸಂಭ್ರಮಿಸಲು ಜನರು ಸಿದ್ಧತೆ ನಡೆಸಿದ್ದಾರೆ. ಬೆಳಗಾವಿಯ ಹಲವೆಡೆ ಅದ್ಧೂರಿ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಜತೆಗೆ ನಗರ ಹಾಗೂ ಹೊರ ವಲಯದಲ್ಲಿನ ಖಾಸಗಿ ಹೋಟೆಲ್‌ಗಳಲ್ಲಿ ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ.

ಡ್ರಿಂಕ್ ಆ್ಯಂಡ್ ಡ್ರೈವ್‌ಗೆ ತಡೆ:

ಹೊಸ ವರ್ಷದ ಸಂಭ್ರಮ ಹಿನ್ನೆಲೆ ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತೆ ಬಲಪಡಿಸಲು ಪೊಲೀಸರು ವಿಶೇಷ ಕಾರ್ಯಾಚರಣೆ (ಸ್ಪೆಷಲ್ ಡ್ರೆವ್) ಆರಂಭಿಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಂದ ಸಂಭವಿಸುವ ಅಪಘಾತ ತಡೆಯುವ ಉದ್ದೇಶದಿಂದ, ಈಗಾಗಲೇ ಜಿಲ್ಲೆಯಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ಹೊಸ ವರ್ಷದ ಆಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣ ತಡೆಯಲು ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಸಂಚಾರ ತಪಾಸಣೆ ಹೆಚ್ಚಳ:

ರಸ್ತೆ ಅಪಘಾತ ಪ್ರಕರಣಗಳನ್ನು ತಡೆಯಲು ಚೆಕ್ ಪೋಸ್ಟ್ ಗಳ, ರಾತ್ರಿ ಪೆಟ್ರೋಲಿಂಗ್ ಹಾಗೂ ತಪಾಸಣೆ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಸಾರ್ವಜನಿಕರು ಹೊಸ ವರ್ಷವನ್ನು ಜವಾಬ್ದಾರಿಯುತವಾಗಿ ಆಚರಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಅದಕ್ಕಾಗಿ ಪ್ರಮುಖ ರಸ್ತೆ ವೃತ್ತಗಳಲ್ಲಿ ತಪಾಸಣೆ ಹೆಚ್ಚಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ನಿಯೋಜನೆ:

ನಗರದಲ್ಲಿ ಭದ್ರತೆ ಕರ್ತವ್ಯಕ್ಕೆ 4 ಡಿಎಸ್‌ಪಿ, 24 ಪಿಐ, 34 ಪಿಎಸ್‌ಐ, 89 ಎಎಸ್‌ಐ, ಸಿಎಚ್‌ಸಿ 660, 300 ಹೋಮ್‌ಗಾರ್ಡ್ ಸಿಬ್ಬಂದಿ ಹಾಗೂ 7 ಸಿಎಆರ್, 3 ಕೆಎಸ್‌ಆರ್‌ಪಿ ತುಕಡಿ ನೇಮಿಸಲಾಗಿದೆ. ನಗರದಲ್ಲಿ ಡಿ. 31ರಂದು ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದರೆ ₹10 ಸಾವಿರ ದಂಡ ವಿಧಿಸಲಾಗುವುದು. ಜತೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸ್ ಸಿಬ್ಬಂದಿ ಬಾಡಿಓರ್ನ್ ಕ್ಯಾಮೆರಾ ಹಾಗೂ ಡ್ರೋನ್ ಮೂಲಕ ನಿಗಾ ವಹಿಸಲಿದ್ದಾರೆ.

ಗಮನ ಸೆಳೆದ ಬೃಹತ್ ಓಲ್ಡ್‌ಮ್ಯಾನ್

ಬೆಳಗಾವಿ ನಗರದ ವಿವಿಧ ಗಲ್ಲಿಗಳಲ್ಲಿ ನಾನಾ ರೀತಿಯ ಓಲ್ಡ್ ಮ್ಯಾನ್ ಪ್ರತಿಕೃತಿಗಳನ್ನು ತಯಾರಿಸಲಾಗಿದೆ. ಡಿ.31ರ ರಾತ್ರಿ ಸರಿಯಾಗಿ 12 ಗಂಟೆಗೆ ಓಲ್ಡ್ ಮ್ಯಾನ್ ಪ್ರತಿಕೃತಿ ದಹಿಸುವ ಮೂಲಕ ಹೊಸ ವರ್ಷ ಸ್ವಾಗತಿಸಲಾಗುತ್ತದೆ. ಓಲ್ಡ್ ಮ್ಯಾನ್ ಪ್ರತಿಕೃತಿ ತಯಾರಿಕೆಯಲ್ಲೂ ಸೃಜನಶೀಲತೆ ಮೆರೆಯುವ ಯುವಜನರು ಆ ಮೂಲಕ ಸಾಮಾಜಿಕ ಸಂದೇಶ ಸಾರುವುದು ವಿಶೇಷ.