ಮಾತು ಕೇಳದ ಅಧಿಕಾರಿಗಳ ಮೇಲೆ ಕ್ರಮ: ರಾಯರಡ್ಡಿ ಹೇಳಿಕೆ

KannadaprabhaNewsNetwork |  
Published : Sep 09, 2026, 02:15 AM IST
ಸಚಿವ ಬಸವರಾಜ ರಾಯರಡ್ಡಿ | Kannada Prabha

ಸಾರಾಂಶ

ಯಾವುದೇ ಇಲಾಖೆ ಅಧಿಕಾರಿಗಳು ಮಾತು ಕೇಳದಿದ್ದರೆ ನನಗೆ ಹೇಳಿ, ಮಾತು ಕೇಳದ ಅಧಿಕಾರಿಗಳಿಗೆ ಫೈರ್ (ಎಚ್ಚರಿಕೆ, ಕ್ರಮ) ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅಬ್ಬರಿಸಿದ್ದಾರೆ.

ಯಲಬುರ್ಗಾ: ಯಾವುದೇ ಇಲಾಖೆ ಅಧಿಕಾರಿಗಳು ಮಾತು ಕೇಳದಿದ್ದರೆ ನನಗೆ ಹೇಳಿ, ಮಾತು ಕೇಳದ ಅಧಿಕಾರಿಗಳಿಗೆ ಫೈರ್ (ಎಚ್ಚರಿಕೆ, ಕ್ರಮ) ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅಬ್ಬರಿಸಿದ್ದಾರೆ.

ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾತು ಕೇಳದ ಅಧಿಕಾರಿಗಳಿಗೆ ನನ್ನ ಡಿಜಿಟಲ್ ಸಹಿ ಮಾಡಿ ಲೆಟರ್ ಕೊಟ್ಟುಬಿಡಿ. ಅವರನ್ನು ಫೈರ್ ಮಾಡುತ್ತೇನೆ ಎಂದು ಪಿಎಗೆ ರಾಯರೆಡ್ಡಿ ಸೂಚಿಸಿದ್ದು, ಪರೋಕ್ಷವಾಗಿ ಅಧಿಕಾರಿಗಳಿಗೆ ರಾಯರೆಡ್ಡಿ ಧಮ್ಕಿ ಹಾಕಿದರಾ ಎನ್ನುವ ಪ್ರಶ್ನೆ ಮೂಡಿದೆ. ತಹಸೀಲ್ದಾರ್, ನೀನು ನನ್ನ ಪಿಆರ್‌ಒ ಆಗಿ ಕೆಲಸ ಮಾಡಬೇಕು. ಯಾಕೆಂದರೆ ನಾನು ಫುಲ್ ಬ್ಯುಜಿ ಇರುತ್ತೇನೆ. ಹೀಗಾಗಿ ನೀನು ನನ್ನ ಪಿಆರ್‌ಒ ಆಗಿ ಕೆಲಸ ಮಾಡಬೇಕು ಎಂದು ವೇದಿಕೆಯಲ್ಲಿಯೇ ತಹಸೀಲ್ದಾರ್ ಪ್ರಕಾಶ್ ನಾಶಿ ಅವರಿಗೆ ಸೂಚಿಸಿದರು. ಶಿಕ್ಷಣ ಇಲಾಖೆ ಬಹಳ ಕಾರ್ಯಭಾರದ ಇಲಾಖೆಯಾಗಿದೆ. ರಾಜ್ಯದಲ್ಲಿ ೯೬ ವಿಶ್ವವಿದ್ಯಾಲಯಗಳಿವೆ. ೧.೫೨ ಕೋಟಿ ವಿದ್ಯಾರ್ಥಿಗಳು ಓದುತ್ತಾರೆ ಎಂದರು.

ಗ್ಯಾರಂಟಿ ನಿಲ್ಲುವುದಿಲ್ಲ: ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ನನ್ನವೇ ೮ ಪಂಪ್‌ಸೆಟ್ ಫ್ರೀ ಇದೆ. ಪಂಪ್‌ಸೆಟ್‌ಗೆ ಫ್ರೀ ಕರೆಂಟ್ ಬಂಗಾರಪ್ಪ ಅವರ ಕಾಲದಲ್ಲಿ ಕೊಟ್ಟಿದ್ದು. ಸರ್ಕಾರದಲ್ಲಿ ೭.೪೦ ಲಕ್ಷ ನೌಕರರು ಇದ್ದಾರೆ. ಪ್ರತಿವರ್ಷ ₹೫೫ ಸಾವಿರ ಕೋಟಿ ಸಂಬಳ ಆಗುತ್ತದೆ. ಬರಪೀಡಿತ ಪ್ರದೇಶಗಳ ಮೂರನೇ ಪಟ್ಟಿಯಲ್ಲಿ ಯಲಬುರ್ಗಾ, ಕುಷ್ಟಗಿ ಘೋಷಣೆಯಾಗಬೇಕು ಎಂದಿದ್ದೇವೆ. ಕೊಪ್ಪಳದ್ದು ಯೋಚನೆ ಮಾಡುತ್ತಿದ್ದಾರೆ ಎಂದರು.

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಪ್ರದೀಪ್ ಈಶ್ವರ ಹೇಳಿಕೆ ವಿಚಾರವಾಗಿ, ಹೇಳಿದ್ದರಲ್ಲಿ ತಪ್ಪೇನಿದೆ? ಅವರವರ ವೈಯಕ್ತಿಕವಾಗಿ ಹೇಳಿದ್ದಾರೆ. ಇದು ಪಕ್ಷಕ್ಕೆ ಬಿಟ್ಟ ವಿಚಾರ. ಮುಖ್ಯಮಂತ್ರಿ ಯಾರನ್ನು ಮಾಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತದೆ. ವೈಯಕ್ತಿಕವಾಗಿ ಯಾರಿಗೆ ಅಭಿಮಾನ ಇರುತ್ತದೆಯೋ ಅವರ ಹೆಸರು ಹೇಳುತ್ತಾರೆ. ನಾನು ಯಾವಾಗ ಹೇಳಬೇಕೋ ಆವಾಗ ಹೇಳುತ್ತೇನೆ. ಡಿ.ಕೆ. ಶಿವಕುಮಾರ್ ಕಾಲ ಬಂದಾಗ ಸಿಎಂ ಆಗ್ತಾರೆ ಎಂದು ಹೇಳಿದ್ದೆ. ಈಗ ಆ ಪ್ರಶ್ನೆ ಬರುವುದೇ ಇಲ್ಲ. ಈಗ ಸಿಎಂ ಹುದ್ದೆ ಖಾಲಿ ಇಲ್ಲ ಎಂದರು.

ಎಲ್ಲರೂ ಸಿದ್ದು ಜತೆಗಿದ್ದೇವೆ: ಸಿದ್ದರಾಮಯ್ಯ ಅವರನ್ನು ಯಾರೂ ಸೈಡ್‌ಲೈನ್ ಮಾಡಲು ಆಗುವುದಿಲ್ಲ. ಅವರು ಮಾಸ್ ಲೀಡರ್. ಜಾರಕಿಹೋಳಿ ಅವರು ದೂರ ಹೋಗಿಲ್ಲ, ನಾನು ದೂರ ಹೋಗಿಲ್ಲ, ಶಿವಕುಮಾರ್ ಅವರೂ ದೂರ ಹೋಗಿಲ್ಲ. ಎಲ್ಲರೂ ಸಿದ್ದರಾಮಯ್ಯ ಅವರ ಜತೆಗೆ ಇದ್ದಾರೆ. ಸಿದ್ದರಾಮಯ್ಯ ಅವರು ಎಲ್ಲರ ಜತೆಗೂ ಇದ್ದಾರೆ ಎಂದರು.

ಬಿಜೆಪಿ ನಾಯಕರ ಸಿದ್ದರಾಮಯ್ಯ ಭೇಟಿ ವಿಚಾರದ ಬಗ್ಗೆ ಕೇಳಿದಾಗ, ಹಾಗೆ ಕೆಡಿಸಾಕ ಹೋಗೋದೇನೈತಿ? ಆಗಲಿ, ಭೇಟಿ ಆಗಲು ಯಾರು ಬೇಡ ಅಂದಿದಾರೆ. ಸಿದ್ದರಾಮಯ್ಯ ಎಂದೂ ಕಾಂಗ್ರೆಸ್ ಬಿಟ್ಟು ಹೋಗಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪ್ರಮುಖ ನಾಯಕರು. ಸಿದ್ದರಾಮಯ್ಯ-ಜಾರಕಿಹೋಳಿ ಉತ್ತಮ ಸ್ನೇಹಿತರು. ಸಿದ್ದರಾಮಯ್ಯ ಏಕಾಂಗಿಯಾಗಿಲ್ಲ. ನಾವೆಲ್ಲ ಉತ್ತಮ ಸ್ನೇಹಿತರು. ಸಿದ್ದರಾಮಯ್ಯ ಜತೆಗೆ ಎಲ್ಲ 224 ಶಾಸಕರೂ ಇದ್ದಾರೆ ಎಂದರು.ಸೋಲಿಸುವ ಅಧಿಕಾರ ಮತದಾರರ ಕೈಯಲ್ಲಿದೆ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ನನ್ನ ಕುರಿತು ಏನೇ ಆರೋಪ ಮಾಡಿದ್ದರೂ ನಾನು ಉತ್ತರಿಸಲು ಹೋಗುವುದಿಲ್ಲ. ಯಾರನ್ನು ಸೋಲಿಸಲು ಯಾರೊಬ್ಬರಿಗೂ ಸಾಧ್ಯವಿಲ್ಲ, ಸೋಲಿಸುವ ಅಧಿಕಾರ ಮತದಾರರ ಕೈಯಲ್ಲಿ ಮಾತ್ರ ಇದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಕೆಟ್ಟದಾಗಿ ಮಾತನಾಡಿದ್ದರೆ ಅವರ ಬಾಯಿ ಹೊಲಸಾಗುತ್ತದೆ. ಅದಕ್ಕೆ ನಾನು ಉತ್ತರ ನೀಡುವುದಿಲ್ಲ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ ತಂಡದಿಂದ ವಿದ್ಯಾರ್ಥಿಗಳ ತಪಾಸಣೆ
ಹಲವು ಸವಾಲುಗಳನ್ನೆದುರಿಸಿ ಶಿಕ್ಷಕರು ವೃತ್ತಿ ಗೌರವ ಕಾಪಾಡಿಕೊಳ್ಳಬೇಕಾಗಿದೆ