ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅಸ್ಪೃಶ್ಯತೆ ನಿಷೇಧ ನಾಮಫಲಕ ಜಿಲ್ಲೆಯಲ್ಲಿ ಹಾಕುವುದಕ್ಕೆ ಆಗ್ರಹಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಇದು ರಾಜ್ಯಕ್ಕೆ ಮಾದರಿಯಾಗುವುದಾದರೆ ಆಗಲಿ ಚಾಮರಾಜನಗರ ಜಿಲ್ಲೆಯಿಂದಲೇ ಪ್ರಾರಂಭವಾಗಲಿ ಎಂದು ಹೇಳಿದರು.
ಸಭೆಯಲ್ಲಿ ಮುಖಂಡರು ಮಾತನಾಡಿ, ಹಿಂದುಳಿದ ಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ಅಸ್ಪೃಶ್ಯತೆ ಆಚರಣೆ ಕೆಲವು ಕಡೆಗಳಲ್ಲಿ ಮುಂದುವರೆದಿದೆ. ಅಸ್ಪೃಶ್ಯತೆ ಆಚರಣೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಾದರಿಯಾದ ಕ್ರಮ ವಹಿಸಬೇಕಿದೆ ಎಂದರು.ಜಿಲ್ಲೆಯಲ್ಲಿರುವ ಎಲ್ಲ ದೇವಾಲಯ, ಹೋಟೆಲ್‌ಗಳಲ್ಲಿ ಅಸ್ಪೃಶ್ಯತೆ ನಿಷೇಧ ಎಂಬ ನಾಮಫಲಕವನ್ನು ಹಾಕಬೇಕು, ನಾಮಫಲಕದಲ್ಲಿ ಅಸ್ಪೃಶ್ಯತೆ ಆಚರಣೆ ಕಂಡುಬಂದರೆ ಅವರ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ರದ್ದು ಪಡಿಸಲಾಗುವುದು ಎಂದು ನಾಮಫಲಕದಲ್ಲಿ ಹಾಕಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಹಲವು ಭಾಗಗಳಲ್ಲಿ ಜೀತಪದ್ದತಿಯಿಂದ ವಿಮುಕ್ತರಾದವರಿಗೆ ಪುನರ್ವಸತಿ ಕಲ್ಪಿಸಿರುವುದಿಲ್ಲ. ಜೀತಮುಕ್ತರಾದವರಿಗೆ ಗುರುತಿನ ಚೀಟಿ ಇಲ್ಲದಿರುವುದರಿಂದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಮೀಸಲಾಗಿದ್ದ ಜಮೀನಿನ ಸಾಗುವಳಿಗೆ ಹಕ್ಕುಪತ್ರ ನೀಡಿದ್ದರೂ ಸದರಿ ಜಮೀನಿನಲ್ಲಿ ಬೇರೆಯವರು ಕೃಷಿ ಮಾಡುತ್ತಿದ್ದಾರೆ. ಸರ್ಕಾರಿ ಜಾಗ ಇರುವೆಡೆ ಸೂಕ್ತ ಜಮೀನು ಕೊಟ್ಟು ಜೀತ ಮುಕ್ತರಿಗೆ ಹಾಗೂ ಪುನರ್ವಸತಿ ಕಲ್ಪಿಸಬೇಕು ಎಂದು ಸಮುದಾಯದ ಮುಖಂಡರು ಸಭೆಯಲ್ಲಿ ತಿಳಿಸಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಡಿಸಿ ಮುಂಬರುವ ಸೆಪ್ಟೆಂಬರ್ ಮಾಹೆಯಲ್ಲಿ ಜಿಲ್ಲಾದ್ಯಂತ ಜೀತಮುಕ್ತ ಜಿಲ್ಲೆ ಅಭಿಯಾನ ಹಮ್ಮಿಕೊಳ್ಳಲಾಗುವುದು. ಅಭಿಯಾನ ಅಂಗವಾಗಿ ಜಿಲ್ಲೆಯ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ವಿಶೇಷ ಗ್ರಾಮಸಭೆ ಏರ್ಪಡಿಸಿ ಜೀತಮುಕ್ತರಿಗೆ ಪುನರ್ವಸತಿ ಕಲ್ಪಿಸಲು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. ಸಮುದಾಯದ ಮುಖಂಡರೊಬ್ಬರು ಮಾತನಾಡಿ, ಮುಕ್ಕಡಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 8 ಜನರು ಜೀತ ವಿಮುಕ್ತರಾಗಿದ್ದಾರೆ. ಇವರಿಗೆ 10 ಸಾವಿರ ಪರಿಹಾರ ಬಿಟ್ಟರೆ ಬೇರೆ ಯಾವುದೇ ಪರಿಹಾರ ಸಿಕ್ಕಿಲ್ಲ. ಮನೆ, ಜಮೀನು ಕೊಡಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಡಿಸಿ ಇದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಜಾಗದಲ್ಲಿ ಪುನರ್ವಸತಿ ಕಲ್ಪಿಸಲು ಕ್ರಮವಹಿಸಲಾಗುವುದು. ಒಂದು ವೇಳೆ ಸರ್ಕಾರಿ ಜಾಗ ಇಲ್ಲದಿದ್ದರೆ ಖಾಸಗಿಯವರಿಂದ ಜಾಗ, ಜಮೀನು ಖರೀದಿಸಿ ಕೊಡಲಾಗುವುದು. ಅಲ್ಲದೆ ಗ್ರಾಪಂಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಜೀತಮುಕ್ತರಿಗೆ ಆದ್ಯತೆ ನೀಡಲಾಗುವುದು. ಈ ಬಗ್ಗೆ ಸಭಾ ನಡಾವಳಿಗಳಲ್ಲಿ ನಮೂದಿಸಿ ಕಾರ್ಯರೂಪಕ್ಕೆ ತರಲು ತಿಳಿಸಲಾಗುವುದು ಎಂದರು.
ಸಿದ್ದಯ್ಯನಪುರ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದಲೂ ಸಾಗುವಳಿ ಮಾಡುತ್ತಿದ್ದು ಈ ಸಂಬಂಧ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿನಿಲಯಗಳು ಊರಿನ ಹೊರಭಾಗದಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಿಬರಲು ಕಷ್ಟವಾಗುತ್ತಿದೆ. ನಗರದ ಕೇಂದ್ರ ಭಾಗಕ್ಕೆ ವಿದ್ಯಾರ್ಥಿ ನಿಲಯವನ್ನು ಸ್ಥಳಾಂತರಿಸಿಕೊಡಬೇಕು ಎಂಬ ಮುಖಂಡರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಿನೋಟಿಫಿಕೇಶನ್‌ಗೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಅಲ್ಲದೆ ಸಿದ್ದಯ್ಯನಪುರ ಕಂದಾಯ ಗ್ರಾಮಕ್ಕೆ ಪ್ರಸ್ತಾವನೆ ಕೂಡ ಕಳುಹಿಸಿಕೊಡಲಾಗಿದೆ. ವಿದ್ಯಾರ್ಥಿನಿಲಯಗಳ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಮಧ್ಯಭಾಗದಲ್ಲಿ ವಿದ್ಯಾರ್ಥಿನಿಲಯಗಳ ಸ್ಥಾಪನೆಗೆ ಒತ್ತು ನೀಡಿ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದರು.