ಹೆಚ್ಚಿನ ಪರಿಹಾರ ವಿತರಣೆಗೆ ಕ್ರಮ: ತಂಗಡಗಿ

KannadaprabhaNewsNetwork | Published : Nov 17, 2024 1:18 AM

ಸಾರಾಂಶ

ಕಳೆದ ಎರಡು ದಿನಗಳಿಂದೆ ಬಿದ್ದ ಅಕಾಲಿಕ ಮಳೆಗೆ ತಾಲೂಕಿನ ಸಿದ್ದಾಪುರ ಹೋಬಳಿ ಸೇರಿ ವಿವಿಧ ಗ್ರಾಮಗಳಲ್ಲಿ ಹಾನಿಗೊಳಗಾದ ಭತ್ತದ ಬೆಳೆಯನ್ನು ಹಾನಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಶನಿವಾರ ಪರಿಶೀಲನೆ ನಡೆಸಿದರು.

ಬೆಳೆ ಹಾನಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಕನ್ನಡಪ್ರಭ ವಾರ್ತೆ ಕಾರಟಗಿ

ಕಳೆದ ಎರಡು ದಿನಗಳಿಂದೆ ಬಿದ್ದ ಅಕಾಲಿಕ ಮಳೆಗೆ ತಾಲೂಕಿನ ಸಿದ್ದಾಪುರ ಹೋಬಳಿ ಸೇರಿ ವಿವಿಧ ಗ್ರಾಮಗಳಲ್ಲಿ ಹಾನಿಗೊಳಗಾದ ಭತ್ತದ ಬೆಳೆಯನ್ನು ಹಾನಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಶನಿವಾರ ಪರಿಶೀಲನೆ ನಡೆಸಿದರು.ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ ಸೇರಿದಂತೆ ಅಧಿಕಾರಿಗಳ ತಂಡದೊಂದಿಗೆ ವಿವಿಧ ರೈತರ ಗದ್ದೆಗಳಿಗೆ ತೆರಳಿದ ಸಚಿವರು ಮಳೆ ಗಾಳಿಗೆ ನೆಲಕ್ಕುರುಳಿದ್ದ ಭತ್ತ ಪರಿಶೀಲಿಸಿದರು.ಸಿದ್ದಾಪುರ ಹೋಬಳಿಯಲ್ಲಿ ಭಾರಿ ಗಾಳಿ ಮಳೆಗೆ ಕಟಾವು ಹಂತಕ್ಕೆ ಬಂದಿದ್ದ ಬೆಳೆ ಹಾನಿಗೊಳಗಾದ ಬಗ್ಗೆ ರೈತರಿಂದ ಮಾಹಿತ ಪಡೆದ ಸಚಿವರು ಕೆಲ ಪ್ರದೇಶಕ್ಕೆ ಭೇಟಿ ನೀಡಿ ನೆಲಕ್ಕೆ ಒರಗಿದ ಬೆಳೆಯ ಹಾನಿಯ ತೀವ್ರತೆ ಗಮನಿಸಿದರು. ಈ ವೇಳೆ ಕೆಲ ಗ್ರಾಮಗಳಲ್ಲಿನ ರೈತರು ಗಾಳಿ-ಮಳೆಯಿಂದ ಹಾನಿಗೊಳಗಾದ ಪ್ರದೇಶದ ಪ್ರಾಥಮಿಕ ವರದಿಯ ಮಾಹಿತಿ ವಿವರಿಸಿದರು.ಪರಿಶೀಲನೆ ನಂತರ ಮಾತನಾಡಿದ ಸಚಿವ ತಂಗಡಗಿ, ಇನ್ನೊಂದು ವಾರದಲ್ಲಿ ಅಂತಿಮ ವರದಿ ಕೈಸೇರಲಿದ್ದು, ರೈತರಿಗೆ ನೀಡಬೇಕಾದ ಪರಿಹಾರದ ಕುರಿತು ಕೃಷಿ ಸಚಿವ ಕೃಷ್ಣ ಭೈರೇಗೌಡರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಕಳೆದ ಹದಿನೈದು ದಿನಗಳ ಹಿಂದೆ ಮುಂಗಾರು ಆರಂಭದಲ್ಲಿ ಸುರಿದ ಮಳೆಗೆ ಹಾಳಾದ ಬೆಳೆಗೂ ರೈತರಿಗೆ ಪರಿಹಾರವೂ ಕೂಡಾ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಕಳೆದ ೧೫ ದಿನಗಳ ಹಿಂದೆ ಇದೇ ರೀತಿ ಹಾನಿಗೊಳಗಾದ ಬೆಳೆ ಪರಿಶೀಲನೆ ಮಾಡಿದ್ದು, ಈಗ ಮತ್ತೇ ಅದೇ ಅವಘಡ ನಡೆದಿದೆ. ಇದರೊಂದಿಗೆ ತಾಲೂಕಿನ ಯರಡೋಣಾ ಭಾಗದಲ್ಲಿ ೨೦೦ ಎಕರೆ ಪ್ರದೇಶದಲ್ಲಿ ಭತ್ತಕ್ಕೆ ಕೊಳವೆ ರೋಗ ಅಂಟಿಕೊಂಡಿದ್ದು, ಹೆಚ್ಚಿನ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು. ಈಗ ಭತ್ತದ ಬೆಲೆ ಮಾರುಕಟ್ಟೆಯಲ್ಲಿ ಕುಸಿದಿದೆ. ಜಿಲ್ಲಾಧಿಕಾರಿಗಳಿಗೆ ಶೀಘ್ರವೇ ಭತ್ತ ಖರೀದಿ ಕೇಂದ್ರ ತೆರೆಯುವಂತೆ ಸೂಚಿಸಲಾಗುವುದು ಎಂದರು.₹೩ ಕೋಟಿ ಕಾಮಗಾರಿ:

ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಕೆಕೆಆರ್‌ಡಿಬಿಯಡಿ ಮಂಜೂರಾದ ೩ ಕೋಟಿ ವೆಚ್ಚದ ಡಾಂಬರ್ ರಸ್ತೆ ಕಾಮಗಾರಿಗೆ ಸಚಿವ ಶಿವರಾಜ ತಂಗಡಗಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ರಸ್ತೆಗಳು ಜೀವನಾಡಿ, ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ರಸ್ತೆಗಳ ನಿರ್ಮಾಣಕ್ಕೆ ಸರ್ಕಾರ ಆಧ್ಯತೆ ನೀಡಿದೆ. ಆ ಕಾರಣಕ್ಕೆ ಗುತ್ತಿಗೆದಾರರು ಗುಣಮಟ್ಟದಲ್ಲಿ ಕಾಲಮಿತಿಯೊಲಗೆ ರಸ್ತೆ ನಿರ್ಮಾಣ ಮಾಡಬೇಕು. ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.ಮುಂದಿನ ಮೂರೂವರೆ ವರ್ಷಗಳಲ್ಲಿ ಕ್ಷೇತ್ರದಲ್ಲಿ ಬಾಕಿ ಇರುವ ರಸ್ತೆಗಳ ಅಭಿವೃದ್ಧಿಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೆಲವೊಂದು ಪ್ರದೇಶದಲ್ಲಿ ಆಧ್ಯತೆ ಮೇರೆಗೆ ಪ್ರಮುಖ ರಸ್ತೆಗಳಿಗೆ ಇದೀಗ ಚಾಲನೆ ನೀಡಲಾಗುತ್ತಿದೆ ಎಂದರು. ಇದೇ ಸಂದರ್ಭ ಸಿದ್ದಾಪುರ ಸಮೀಪದ ಕೃಷ್ಣಾಪುರದ ಎಸ್.ಸಿ ಕಾಲನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.ಉಳೇನೂರು ಗ್ರಾಪಂ ಅಧ್ಯಕ್ಷ ಶಿವರಾಜ್ ಪಾಟೀಲ್, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ್ ಭಾವಿ, ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾ. ಪಾ ಬೂದಗುಂಪಾ, ವಿಜಯಕುಮಾರ ಕೋಲ್ಕಾರ್, ಜನಗಂಡೆಪ್ಪ ಪೂಜಾರ್, ಚಂದ್ರಶೇಖರ್ ಪೊಲೀಸ್ ಪಾಟೀಲ್, ನಾಗೇಶ್ ಸಿಂಧನೂರು, ಅಮರೇಶ ಬರಗೂರು ಸೇರಿದಂತೆ ಆರ್.ಐ ಶರಣಪ್ಪ, ಕೃಷಿ ಅಧಿಕಾರಿ ಮಾರುತಿ, ಕಂದಾಯ ಇಲಾಖೆ ಸಿಬ್ಬಂದಿ ಮರುಳಸಿದ್ದಪ್ಪ ಇತರರಿದ್ದರು.

Share this article