ಕರಾವಳಿಯಲ್ಲೇ ಉದ್ಯೋಗಸೃಷ್ಟಿಗೆ ಕ್ರಮ: ಡಿಕೆ ಶಿವಕುಮಾರ್‌

KannadaprabhaNewsNetwork |  
Published : Jul 29, 2025, 01:47 AM IST
32 | Kannada Prabha

ಸಾರಾಂಶ

ಕರಾವಳಿ ಪ್ರದೇಶಕ್ಕಾಗಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು. ಬಳಿಕ ಅಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸ್ಥಾಪನೆ ಬಗ್ಗೆ ಯೋಚಿಸುತ್ತೇವೆ. ಹೊಟೆಲ್‌, ಬ್ಯಾಂಕ್‌, ಉದ್ಯಮ ವಲಯಕ್ಕೆ ಕರಾವಳಿ ಕೊಡುಗೆ ಅಪಾರ. ಉಡುಪಿ ಪಂಚಾಯತಿ ಒಂದರಲ್ಲೇ ಮೂರು ಮೆಡಿಕಲ್ ಕಾಲೇಜಿದೆ. ಅಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜತೆಗೆ ಅಲ್ಲೇ ಉದ್ಯೋಗ ಸೃಷ್ಟಿಗೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕುಂದಾಪ್ರ ಕನ್ನಡ-2025 ಕಾರ್ಯಕ್ರಮ । ನಿರ್ದೇಶಕ ಯೋಗರಾಜ್‌ ಭಟ್‌ಗೆ ‘ಊರಗೌರವ’ ಪ್ರದಾನ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರಾವಳಿ ಜನತೆ ಉದ್ಯೋಗಕ್ಕಾಗಿ ಬೇರೆಡೆ ಹೋಗುವುದನ್ನು ತಪ್ಪಿಸಿ ಅಲ್ಲೇ ಉದ್ಯೋಗ ಸೃಷ್ಟಿಯಾಗುವಂತೆ ಮಾಡಬೇಕಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಕುಂದಾಪ್ರ ಕನ್ನಡ -2025 ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿನ 340 ಕಿ.ಮೀ. ಇರುವ ಕರಾವಳಿ ಪ್ರದೇಶಕ್ಕಾಗಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು. ಬಳಿಕ ಅಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸ್ಥಾಪನೆ ಬಗ್ಗೆ ಯೋಚಿಸುತ್ತೇವೆ. ಹೊಟೆಲ್‌, ಬ್ಯಾಂಕ್‌, ಉದ್ಯಮ ವಲಯಕ್ಕೆ ಕರಾವಳಿ ಕೊಡುಗೆ ಅಪಾರ. ಉಡುಪಿ ಪಂಚಾಯತಿ ಒಂದರಲ್ಲೇ ಮೂರು ಮೆಡಿಕಲ್ ಕಾಲೇಜಿದೆ. ಅಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜತೆಗೆ ಅಲ್ಲೇ ಉದ್ಯೋಗ ಸೃಷ್ಟಿಗೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.ನಮ್ಮ ಪರಂಪರೆ, ಭಾಷೆ, ಸಂಸ್ಕೃತಿ ಉಳಿಸಿಕೊಳ್ಳುವುದು ಅತ್ಯಂತ ಅಗತ್ಯ. ಕುಂದಾಪುರದ ವೈಭವ ಉಳಿಸಿಕೊಳ್ಳಲು ಬೆಂಗಳೂರಿನಲ್ಲಿ ಆಚರಣೆ ಮಾಡುತ್ತಿರುವುದು ವಿಶೇಷ. ಯಕ್ಷಗಾನ, ಕಂಬಳ, ನಾಟಕ ಸೇರಿ ಇತರೆಲ್ಲ ಸಂಸ್ಕೃತಿ ಕಾಪಾಡಿಕೊಂಡು ಹೋಗಲು, ಉತ್ತೇಜಿಸಲು ಬದ್ಧವಾಗಿದ್ದೇವೆ ಎಂದು ಹೇಳಿದರು.

ಗ್ರೇಟರ್‌ ಬೆಂಗಳೂರಿಂದ ಕನ್ನಡಿಗರು ರಾಜಧಾನಿಯಲ್ಲಿ ಒಡೆದುಹೋಗುತ್ತಾರೆ ಎಂದು ಹಲವರು ಟೀಕಿಸಿದ್ದಾರೆ. ಆದರೆ, ಬೆಂಗಳೂರು ರಾಜ್ಯದ ಎಲ್ಲ ಕನ್ನಡಿಗರ ಹೃದಯ. ಕಲಬುರ್ಗಿಯಿಂದ ಕುಂದಾಪುರದವರೆಗಿನ ಎಲ್ಲ ಕನ್ನಡಿಗರು ಇಲ್ಲಿದ್ದಾರೆ. ಕುಂದಾಪುರ, ಉಡುಪಿಯಿಂದ ಬಂದವರು ಯಾರೂ ನಾವು ಎಲ್ಲಿಂದಲೋ ಇಲ್ಲಿ ಬಂದಿದ್ದೇವೆ ಎಂಬ ಭಾವನೆ ಇಟ್ಟುಕೊಳ್ಳುವುದು ಬೇಡ. ಇದು ನಿಮ್ಮ ರಾಜ್ಯ. ನಿಮ್ಮ ರಾಜಧಾನಿ. ಇದನ್ನು ಉಳಿಸಿಕೊಳ್ಳುವುದು ನಿಮ್ಮ ಹೊಣೆ ಎಂದರು.‘ಊರ ಗೌರವ’ ಪುರಸ್ಕಾರ ಪಡೆದ ಸಿನಿಮಾ ನಿರ್ದೇಶಕ ಯೋಗರಾಜ ಭಟ್ ಮಾತನಾಡಿ, ವ್ಯಕ್ತಿಗಿಂತ ಊರು ದೊಡ್ಡದು. ಭಾಷಾಭಿಮಾನವೂ ದೊಡ್ಡದು. ನಮ್ಮ ಭಾಷೆಯನ್ನು ನಾವು ಮಾತನಾಡುವುದೇ ಬದುಕು. ನಾನು ಬೆಳೆದಿದ್ದು ಧಾರವಾಡ ಆದರೂ ಮನೆಯಲ್ಲಿ ಕುಂದಾಪುರದ ವಾತಾವರಣವಿತ್ತು. ಭಾಷಾಭಿಮಾನ ತುಂಬಾ ದೊಡ್ಡದು. ಎಷ್ಟಾಗುತ್ತದೋ ಅಷ್ಟರ ಮಟ್ಟಿಗೆ ನಮ್ಮ ಭಾಷೆಯನ್ನು ಆಡಬೇಕು. ಮನಸ್ಸಿನ ಆಳದಿಂದ ಭಾಷೆಯನ್ನು ಪ್ರೀತಿಸಿ ಎಂದು ಹೇಳಿದರು.

ಕುಂದಾಪ್ರ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಪ್ರಕಾಶ್‌ ಶೆಟ್ಟಿ, ನಟಿ ರಕ್ಷಿತಾ, ನಟ ಶೈನ್‌ ಶೆಟ್ಟಿ, ಪ್ರವೀರ್‌ ಶೆಟ್ಟಿ ಇದ್ದರು. ಬೆಳಗ್ಗೆಯಿಂದ ಇಡೀ ದಿನ ಕುಂದಾಪುರದ ಸಂಸ್ಕೃತಿ ಬಿಂಬಿಸುವ ಹಲವು ಸಾಂಸ್ಕೃತಿಕ ಕಾರ್ಯಕ್ರಮ, ಊಟೋಪಚಾರ ಆಯೋಜಿಸಲಾಗಿತ್ತು.ಪುಸ್ತಕ ಬಿಡುಗಡೆ:

ಗೀತ ಸಾಹಿತಿ ಪ್ರಮೋದ್ ಮರವಂತೆ ವಿರಚಿತ ‘ಸೆಕೆಂಡ್‌ ವೈಫ್‌’, ಆರ್‌.ಜೆ.ನಯನಾ ಅವರ ‘ಈ ಪಯಣ ನೂತನ’ , ವಸಂತ ಗಿಳಿಯಾರ್ ಅವರ, ‘ತೊಂಡೆ ಚಪ್ಪರ’ ಕೃತಿಗಳನ್ನು ‘ಕನ್ನಡಪ್ರಭ’ ಪುರವಣಿ ಸಂಪಾದಕ ಗಿರೀಶ್‌ರಾವ್ ಹತ್ವಾರ್‌ (ಜೋಗಿ) ಅವರು ಬಿಡುಗಡೆ ಮಾಡಿದರು. ಪ್ರಕಾಶಕ ಜಮೀಲ್‌ ಸಾವಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ