ಮೈಕ್ರೋ ಫೈನಾನ್ಸ್‌ ಕಿರುಕುಳ ನೀಡಿದರೆ ಕ್ರಮ: ಡಿಸಿ ದಿವಾಕರ

KannadaprabhaNewsNetwork |  
Published : Feb 06, 2025, 12:17 AM IST
5ಎಚ್‌ಪಿಟಿ3-ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮೈಕ್ರೋಫೈನಾನ್ಸ್ ಮತ್ತು ಹಣಕಾಸು ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿದರು. ಎಸ್ಪಿ ಶ್ರೀಹರಿಬಾಬು ಮತ್ತಿತರರಿದ್ದರು. | Kannada Prabha

ಸಾರಾಂಶ

ಮೈಕ್ರೋ ಫೈನಾನ್ಸ್‌ಗಳು ಹೆಚ್ಚಿನ ಬಡ್ಡಿ ವಸೂಲಾತಿ ಮಾಡಿದರೆ, ಕಿರುಕುಳ ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು

ಹೊಸಪೇಟೆ: ಮೈಕ್ರೋ ಫೈನಾನ್ಸ್‌ಗಳು ಹೆಚ್ಚಿನ ಬಡ್ಡಿ ವಸೂಲಾತಿ ಮಾಡಿದರೆ, ಕಿರುಕುಳ ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮೈಕ್ರೋಫೈನಾನ್ಸ್ ಮತ್ತು ಹಣಕಾಸು ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 105 ಮೈಕ್ರೋ ಫೈನಾನ್ಸ್‌ಗಳಿವೆ. ಈ ಸಂಸ್ಥೆಗಳಿಂದ ಹಣ ಪಡೆದಿರುವ ಸಾಲಗಾರರಿಗೆ ಆರ್‌ಬಿಐ ನಿರ್ದೇಶನದಂತೆ ನಿಯಮಾನುಸಾರ ಲೇವಾದೇವಿ ಸಂಸ್ಥೆಗಳು ಹೆಚ್ಚುವರಿ ಬಡ್ಡಿ ವಿಧಿಸುವಂತಿಲ್ಲ. ಭದ್ರತೆಯ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ.14, ಭದ್ರತೆ ಇಲ್ಲದ ಸಾಲಗಳಿಗೆ ಗರಿಷ್ಠ ಶೇ.16ರಷ್ಟು ಮಾತ್ರ ಕಡ್ಡಾಯವಾಗಿ ಬಡ್ಡಿದರ ವಿಧಿಸತಕ್ಕದ್ದು. ಆದರೆ ಹೆಚ್ಚಿನ ಬಡ್ಡಿ ವಸೂಲಾತಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದರೆ ಶೀಘ್ರವೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

ಸಾಲ ನೀಡುವ ಮುಂಚಿತವಾಗಿ ಸಾಲಗಾರರಿಗೆ ನಿಯಮಗಳನ್ನು ತಿಳಿಸಬೇಕು. ನಿಗದಿತ ವೇಳೆಗೆ ಸಾಲ ಮರುಪಾವತಿಸದಿದ್ದರೆ ಸಾಲ ವಸೂಲಾತಿಗೆ ಹೊರಗುತ್ತಿಗೆ ಏಜೆನ್ಸಿಗಳಿಗೆ ನೀಡುವಂತಿಲ್ಲ. ವಸೂಲಾತಿಗೆ ತೆರಳುವ ವ್ಯಕ್ತಿ ಅಧಿಕೃತ ಮಾಹಿತಿಯೊಂದಿಗೆ ಗುರುತಿನ ಚೀಟಿ ಸಹಿತ ವಸೂಲಾತಿಗೆ ಮುಂದಾಗಬೇಕು. ಕೊಟ್ಟೂರಿನಲ್ಲಿ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.

ಸಾಲಗಾರರ ಮನೆಯ ಮುಂದೆ ಗೋಡೆಬರಹದಲ್ಲಿ ಸಾಲದ ಬಾಕಿ ಬರೆಯುವುದು, ಮಾನಸಿಕವಾಗಿ ನಿಂದಿಸುವುದು, ಅವಾಚ್ಯ ಶಬ್ದ ಬಳಸುವುದು, ಅವಮಾನಿಸುವ ಪ್ರಕರಣ ಅಮಾನವೀಯವಾಗಿದೆ. ಇಂತಹ ಪ್ರಕರಣಗಳು ಕಂಡು ಬಂದರೆ ಅವಮಾನಿತರು ದೂರು ನೀಡದಿದ್ದರೂ ಇಲಾಖೆಯಿಂದಲೇ ಸುಮೊಟೋ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಎಸ್ಪಿ ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಲಕೃಷ್ಣಪ್ಪ ಸೇರಿದಂತೆ ವಿವಿಧ ಮೈಕ್ರೋಫೈನಾನ್ಸ್ ಕಂಪನಿಗಳ ವ್ಯವಸ್ಥಾಪಕರು, ಸಿಬ್ಬಂದಿ ಇದ್ದರು.

ಮೈಕ್ರೋಫೈನಾನ್ಸ್, ಹಣಕಾಸು ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ಕುರಿತ ಸಭೆಯಲ್ಲಿ ಡಿಸಿ ದಿವಾಕರ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ