ಕನ್ನಡಪ್ರಭ ವಾರ್ತೆ ಸುರಪುರ
ಚುನಾವಣೆ ನೀತಿ ಸಂಹಿತೆ ಮಾ.16ರಿಂದ ಆರಂಭವಾಗಿದ್ದು, ಪ್ರಚೋಧನಕಾರಿ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವವರು ಮತ್ತು ಕೊಟ್ಟವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಕಾವ್ಯಾರಾಣಿ ಕೆ.ವಿ. ಹೇಳಿದರು.ನಗರದ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಟ್ಸಾಪ್, ಫೇಸ್‌ಬುಕ್, ಇನಸ್ಟಾಗ್ರಾಂ, ಎಕ್ಸ್ (ಟ್ವಿಟರ್), ಶೇರ್‌ಚಾಟ್ ಗ್ರೂಪಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದರೆ ಚುನಾವಣೆ ಇಲಾಖೆಯ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದರು.
ಅಂಚೆ ಮತದಾನ ವ್ಯವಸ್ಥೆ ಮಾಡಲಾಗಿದೆ. ಸರಕಾರಿ ನೌಕರರು ಚುನಾವಣಾ ಕಚೇರಿಗೆ ಬಂದು ಎಪಿಕ್ ಕಾರ್ಡ್ ತೋರಿಸಿ ಮತದಾನ ಮಾಡಬಹುದು. ಪಿಆರ್‌ಓ ಮತ್ತು ಎಪಿಆರ್‌ಓಗಳಿಗೆ ಚುನಾವಣೆ ನಡೆಸುವ ತರಭೇತಿ ನೀಡಲಾಗಿದೆ. ಉಪ ಚುನಾವಣೆಗೆ ಏ.12ರಂದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಏ.19 ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿದೆ. ಬೆ.11ರಿಂದ 3ರ ವರೆಗೆ ನಾಮಪತ್ರ ಸಲ್ಲಿಸಲಾಗುವುದು. ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು. ಸರಕಾರಿ ರಜೆ ದಿನಗಳನ್ನು ಹೊರತುಪಡಿಸಿ ನಾಮಪತ್ರ ಸ್ವೀಕರಿಸಲಾಗುವುದು ಎಂದು ತಿಳಿಸಿದರು.ರಾಷ್ಟ್ರ, ರಾಜ್ಯ, ಸ್ಥಳೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಸೂಚಕರ ಸಹಿ ಮತ್ತು ಅಭ್ಯರ್ಥಿಗಳ ಸಹಿ ಮುಖ್ಯ. ನಾಲ್ಕು ನಾಮಪತ್ರ ಸಲ್ಲಿಸಬೇಕು. ಉಪ ಚುನಾವಣೆ ನಿಮಿತ್ತ ಏ.12ರಿಂದ ತಹಸೀಲ್ದಾರ್ ಕಚೇರಿಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (144 ಸೆಕ್ಸನ್) ಜಾರಿಯಲ್ಲಿರುತ್ತದೆ. ಪಕ್ಷೇತರ ಅಭ್ಯರ್ಥಿಗಳು 10 ಜನರ ಸೂಚಕರ ಸಹಿಗಳನ್ನು ಹಾಕಿಸುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಅಪರಾಧಗಳಿದ್ದರೆ ಮಾಧ್ಯಮಗಳ ಮೂಲಕ ಘೋಷಣೆ ಮಾಡಬೇಕು. ಇದ್ದರೆ ಇದೆಯೆಂದು, ಇಲ್ಲವೆಂದರೆ ಇಲ್ಲ ಎಂಬುದಾಗಿ ಘೋಷಿಸಬೇಕು ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿ ನಾಗಮ್ಮ ಕಟ್ಟಿಮನಿ, ಹುಣಸಗಿ ತಹಸೀಲ್ದಾರ್ ಬಸವರಾಜ ನಾಯ್ಕೊಡಿ ಹಾಗೂ ಸಾಹೇಬಗೌಡ, ರವಿನಾಯಕ ಸೇರಿದಂತೆ ಇತರರಿದ್ದರು.