ಕಾರವಾರ: ಆರ್‌ಟಿಇ ಕಾಯ್ದೆ ಪ್ರಕಾರ ಶಾಲಾ ಶುಲ್ಕ ಭರಿಸಿಲ್ಲವೆಂಬ ಕಾರಣಕ್ಕೆ ಮಗುವಿನ ವರ್ಗಾವಣೆ ಪತ್ರ ತಡೆ ಹಿಡಿಯುವಂತಿಲ್ಲ. ಒಂದು ವೇಳೆ ತಡೆ ಹಿಡಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ಹೇಳಿದರು.
ಇತ್ತೀಚೆಗೆ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ವರ್ಗಾವಣೆ ಪತ್ರ ನೀಡದೇ ಸತಾಯಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಆಯೋಗಕ್ಕೆ ಬರುತ್ತಿವೆ. ಈ ಬಗ್ಗೆ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಖಾಸಗಿ ಶಾಲೆಗಳಿಗೆ ಸೂಕ್ತ ನಿರ್ದೇಶನ
ನೀಡುವಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಅನುದಾನ ಮತ್ತು ಅನುದಾನ ರಹಿತ ಶಾಲೆಗಳ ಮುಖ್ಯಾಧ್ಯಾಪಕರ ಕೊಠಡಿಯಲ್ಲಿ ಆರ್‌ಟಿಇ ಸೆಲ್‌ನ ಸಂಪೂರ್ಣ ಮಾಹಿತಿಯುಳ್ಳ ಫಲಕವನ್ನು ಕಡ್ದಾಯವಾಗಿ ಅಳವಡಿಸಬೇಕು. ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಪಿಟಿಎ ರಚನೆ ಮಾಡಿ, ಪೋಷಕರು ಮತ್ತು ಆಡಳಿತ ಮಂಡಳಿ ಚರ್ಚಿಸಿ ಶುಲ್ಕ ನಿಗದಿಪಡಿಸಬೇಕು. ಈ ಸಂಬಂಧ ಅಗತ್ಯ ದಾಖಲೆಗಳನ್ನು ಇಡಬೇಕು ಎಂದರು.ಮಕ್ಕಳ ರಕ್ಷಣಾ ನೀತಿ-2016 ಅನುಷ್ಠಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ-2016 ಅನುಷ್ಠಾನಗೊಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಮಕ್ಕಳಿಗೆ ಗುಣಮಟ್ಟದ ಕಲಿಕೆಯ ಜೊತೆ ಮಕ್ಕಳ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ನೀತಿ- 2016 ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲಾ ಹಂತದ ಅಧಿಕಾರಿಗಳು ಪ್ರಯತ್ನಿಸಬೇಕು. ಸರ್ಕಾರಿ, ಖಾಸಗಿ ಸೇರಿದಂತೆ ವಿವಿಧ ಇಲಾಖೆಗಳ ಅಡಿ ಕಾರ್ಯನಿರ್ವಹಿಸುವ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸುರಕ್ಷತಾ ಸಮಿತಿ ರಚನೆ ಮಾಡಬೇಕು ಎಂದರು.
ಸಂಬಂಧಪಟ್ಟ ಇಲಾಖೆಯಿಂದ ಸಮಸ್ಯೆ ಮತ್ತು ಸೂಕ್ತ ಪರಿಹಾರ ಒದಗಿಸಲು ಪ್ರಯತ್ನಿಸಿದಾಗ ಶಾಲೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ತಿಳಿಸಿದರು.