ಮೈಸೂರು ವಧು, ನೆದರ್‌ ಲ್ಯಾಂಡ್‌ ವರ- ವಚನ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ...

KannadaprabhaNewsNetwork | Published : Feb 18, 2025 12:32 AM

ಸಾರಾಂಶ

ಮೈಸೂರಿನ ಹೂಟಗಳ್ಳಿಯ ಸೋಮಶೇಖರಪ್ಪ ಮತ್ತು ಪ್ರೇಮಾ ಅವರ ಪುತ್ರಿ ಟಿ.ಎಸ್ ವಿದ್ಯಾ

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ವಧು ನೆದರ್‌ ಲ್ಯಾಂಡ್‌ ವರನನ್ನು ವಚನ ಮಾಂಗಲ್ಯದ ಮೂಲಕ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಪ್ರಕರಣ ಸೋಮವಾರ ಜರುಗಿದೆ.ಮೈಸೂರಿನ ಹೂಟಗಳ್ಳಿಯ ಸೋಮಶೇಖರಪ್ಪ ಮತ್ತು ಪ್ರೇಮಾ ಅವರ ಪುತ್ರಿ ಟಿ.ಎಸ್ ವಿದ್ಯಾ, ನೆದರ್ ಲ್ಯಾಂಡ್ ಬಾಬ್ ವಾನ್ ಬೊಇಜೆನ್ ಮತ್ತು ಜಾಕ್ವಿಲಿನ್ ಅವರ ಪುತ್ರ ರುಟ್ಗೆರ್ ಸತಿಪತಿಗಳಾದರು.ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮತ್ತು ರೂಪಾ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶರಣರ ವಚನಗಳನ್ನು ಸ್ತುತಿಸಿ, ವಚನ ಪ್ರತಿಜ್ಞೆ ಮಾಡಿದರು.ವಿಜಯನಗರ 2ನೇ ಹಂತದ ಸಂಭ್ರಮ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ವಚನ ಕಲ್ಯಾಣ ಮಹೋತ್ಸವವು ಯಾವುದೇ ರಾಹುಕಾಲ, ಗುಳಿಕಕಾಲಗಳ ಸೋಂಕಿಲ್ಲದೆ, ಲಗ್ನ, ರಾಶಿ, ಕೂಟ, ಗಣ, ತಿಥಿ, ವಾರ, ನಕ್ಷತ್ರ ಮತ್ತು ಶಕುನಗಳ ಸುಳಿವಿಲ್ಲದಂತಹ ಶರಣರ ವಚನಾಧಾರಿತ ಕನ್ನಡ ವಿವಾಹವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.ವಧು ವರರತಂದೆ ತಾಯಿಗಳು ವಚನವನ್ನು ಸ್ತುತಿಸಿ ವಿವಾಹಕ್ಕೆ ಒಪ್ಪಿಗೆ ನೀಡಿದರೆ, ವಧು ವರರು ಯಾವುದೇ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸದೆ, ವೈಚಾರಿಕ ಚಿಂತನೆ ಹೊಂದಿ, ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸುವುದಾಗಿ ಎಲ್ಲರ ಸಮ್ಮುಖದಲ್ಲಿ ವಚನ ಪ್ರತಿಜ್ಞೆ ತೆಗೆದುಕೊಂಡರು. ವರ ವಧುವಿಗೆ ಮಾಂಗಲ್ಯಧಾರಣೆ ಮಾಡಿದರೆ, ವಧು ವರನಿಗೆ ರುದ್ರಾಕ್ಷಿಧಾರಣೆ ಮಾಡುವುದರ ಮೂಲಕ ಸಮಾನತೆಯ ತತ್ವಕ್ಕೆ ವಚನ ಮಾಂಗಲ್ಯ ಸಾಕ್ಷಿಯಾಯಿತು.ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜು ಧ್ವಜಾರೋಹಣ ನೆರವೇರಿಸಿದರು. ಹೆಬ್ಬಾಳು ವಲ್ಲೇಗೌಡ, ಜಾಕ್ವಿಲಿನ್, ಫೆಡ್ರಿಕ್, ಬಸಪ್ಪ, ಗಿರಿಜಮ್ಮ ಇದ್ದರು.

Share this article