ಬ್ಯಾಡಗಿ: ರೈತರ ಶ್ರೇಯೋಭಿವೃದ್ಧಿ ಬಯಸುತ್ತಿರುವ ಮಾರುಕಟ್ಟೆಯ ಹೆಸರಿಗೆ ಕಳಂಕ ತರುವ ನಿಟ್ಟನಲ್ಲಿ ಯಾರೇ ಕೈಹಾಕಿದರೂ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತವೆಂದು ಶಾಸಕ ಬಸವರಾಜ ಶಿವಣ್ಣನವರ ಖಡಕ್ ಎಚ್ಚರಿಕೆ ನೀಡಿದರು.
ಕಿಡಿಗೇಡಿಗಳ ಬಗ್ಗೆ ನಿಗಾವಹಿಸಿ: ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ಮಾತನಾಡಿ, ಹಿಂದೆ ನಡೆದ ಘಟನೆ ಅತ್ಯಂತ ದುರದೃಷ್ಟಕರ. ಮಾರುಕಟ್ಟೆ ಅಭ್ಯುದಯ ಸಹಿಸಲಾಗದ ಕೆಲವು ಕಿಡಿಗೇಡಿಗಳು ಮಾರುಕಟ್ಟೆ ಹೆಸರಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ. ಹಳ್ಳಿಗಳಲ್ಲಿ ಮೆಣಸಿನಕಾಯಿ ಖರೀದಿ ಮಾಡಿದ ವ್ಯಾಪಾರಿಗಳು ಇಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಯತ್ನಿಸುತ್ತಾರೆ. ಅವರಿಗೆ ನಿರೀಕ್ಷಿತ ದರ ಸಿಗದಿದ್ದಾಗ ನಿಜವಾದ ರೈತರನ್ನು ರೊಚ್ಚಿಗೆಬ್ಬಿಸುತ್ತಾರೆ. ಮಾ. 11ರಂದು ನಡೆದ ಘಟನೆಯಲ್ಲಿ ಬಹುತೇಕ ವ್ಯಕ್ತಿಗಳು ಅಂಥವರೇ ಇರುವ ಅನುಮಾನಗಳಿವೆ. ಮಾರುಕಟ್ಟೆಗೆ ಬರುವ ರೈತರ ಬಗ್ಗೆ ದಲಾಲರು ವೈಯಕ್ತಿಕ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಲಾಟೆಯಲ್ಲಿ ರೌಡಿಶೀಟರ್‌ಗಳು: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಂಶುಕುಮಾರ ಮಾತನಾಡಿ, ಮಾ. 11ರಂದು ಬ್ಯಾಡಗಿ ಎಪಿಎಂಸಿ ಆವರಣದಲ್ಲಿ ನಡೆದ ಕುಕೃತ್ಯದಲ್ಲಿ ಭಾಗಿಯಾದವರು ಆಂಧ್ರದಲ್ಲಿ ರೌಡಿಶೀಟರ್ ಹಾಗೂ ಕೊಲೆಗಡುಕರಿದ್ದಾರೆ. ಇದರಿಂದ ಅಮಾಯಕ ರೈತರಿಗೆ ಅನ್ಯಾಯವಾಗಿದ್ದು ಸಹಜ. ಇನ್ನೂ ಹೆಚ್ಚಿನ ತನಿಖೆ ಕೈಗೊಂಡು ನಿರಪರಾಧಿಗಳನ್ನು ಕೈಬಿಡುವ ನಿಟ್ಟಿನಲ್ಲಿ ಸರ್ಕಾರದ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.ಸಿಸಿ ಟಿವಿ ಅಳವಡಿಸಿಕೊಳ್ಳಿ: ಹೆಚ್ಚುವರಿ ಎಸ್ಪಿ ಶಿರೋಳಕರ ಮಾತನಾಡಿ, ಎಲ್ಲ ವರ್ತಕರು ತಮ್ಮ ಅಂಗಡಿಗಳಿಗೆ ಸಿಸಿ ಕ್ಯಾಮೆರಾ ಹಾಗೂ ಬೆಂಕಿ ನಂದಿಸುವ ಪರಿಕರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ್ ಫಿರೋಜ್ ಶಾ, ಎಪಿಎಂಸಿ ಕಾರ್ಯದರ್ಶಿ ಶೈಲಜಾ, ಸಿಪಿಐ ಮಹಾಂತೇಶ ಲಂಬಿ, ಪಿಎಸ್‌ಐ ಅರವಿಂದ, ವರ್ತಕರ ಸಂಘದ ಉಪಾಧ್ಯಕ್ಷ ಎ.ಆರ್. ನದಾಫ್, ಉಳಿವೆಪ್ಪ ಕಬ್ಬೂರ, ಕಾರ್ಯದರ್ಶಿ ರಾಜು ಮೋರಿಗೇರಿ, ಸದಸ್ಯರಾದ ಎನ್.ಎಂ. ಕೆಂಬಿ, ದತ್ತಾತ್ರೇಯ ಸಾಳುಂಕೆ, ಎಂ.ಬಿ. ಹುಚಗೊಂಡರ, ಎನ್.ಎಚ್. ಹುಗ್ಗಿ, ಚಂದ್ರಶೇಖರ ಅಂಗಡಿ, ಎಂ.ಟಿ. ಹಾವೇರಿ, ಶೈಲೇಶ ಬೂದಿಹಾಳಮಠ ಉಪಸ್ಥಿತರಿದ್ದರು.ಇತ್ತೀಚೆಗೆ ರೈತರಿಗೆ ಹಣ ಸರಿಯಾಗಿ ತಲುಪಿಸದೇ ಇರುವ ಪ್ರಕರಣಗಳು ಹೆಚ್ಚಾಗಿದ್ದು, ಮಾರುಕಟ್ಟೆ ಹೆಸರಿಗೆ ಕಳಂಕ ಬರುತ್ತಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಣ ತಲುಪಿಸದ ಅಂಗಡಿಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಗೂ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಮೂಲಕ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವರ್ತಕ ಸಂಘದ ಸದಸ್ಯ ಬಿ.ಎಂ. ಛತ್ರದ ಹೇಳಿದರು.