ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕರ್ನಲ್ (ನಿವೃತ್ತ) ಸಿ.ಪಿ.ಮುತ್ತಣ್ಣ ಅವರು ಕೊಡಗು ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.
ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ನಾಗರಿಕರು ಭಯದಿಂದ ಬದುಕುವಂತಾಗಿದೆ. ಆ ನಿಟ್ಟಿನಲ್ಲಿ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷ ನಿಯಂತ್ರಿಸುವಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಪದೇ ಪದೇ ಗ್ರಾಮಗಳಿಗೆ ಬರುವ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂದು ಸಲಹೆ ಮಾಡಿದರು.ಟ್ರಂಚ್‌ಗಳ ನಿರ್ಮಾಣ, ಆನೆ ಓಡಾಡುವ ಮಾರ್ಗ ಸಂಬಂಧಿಸಿದಂತೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವುದು. ಎಲಿಪೆಂಟ್ ಟಾಸ್ಕ್ಪೋರ್ಸ್ ಮತ್ತು ರ‍್ಯಾಪಿಡ್ ರೆಸ್ಪಾನ್ಸ್ ತಂಡಗಳು ಎಸ್‌ಒಪಿ ಮಾದರಿಯಲ್ಲಿ ಕಾರ್ಯನಿರ್ವಹಿಸಿ ಕಾಡಾನೆಯನ್ನು ನಿಯಂತ್ರಿಸಲು ಮುಂದಾಗಬೇಕಿದೆ ಎಂದು ಮನವಿ ಮಾಡಿದರು.
ಅಗತ್ಯವಿರುವ ಕಡೆ ಸೋಲಾರ್ ಲೈಟ್‌ಗಳನ್ನು ಅಳವಡಿಸುವುದು. ಹಾಡಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವುದು, ಸೈನ್‌ಬೋರ್ಡ್ ಮೂಲಕ ಅಗತ್ಯ ಮಾಹಿತಿಯನ್ನು ನೀಡುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸಿ.ಪಿ.ಮುತ್ತಣ್ಣ ಮನವಿ ಮಾಡಿದರು.
ಮತ್ತೊಬ್ಬ ಪ್ರಮುಖ ಬೋಪಣ್ಣ ಮಾತನಾಡಿ, ವನ್ಯಪ್ರಾಣಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಬ್ಯಾರಿಕೇಡ್‌ಗಳ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ ಎಂದು ಸಲಹೆ ಮಾಡಿದರು.
ಶನಿವಾರಸಂತೆ, ಬೆಂಡೆಬೆಟ್ಟ, ಆನೆಕಾಡು, ದುಬಾರೆ, ಸಿದ್ದಾಪುರ, ಮಾಲ್ದಾರೆ, ನಾಗರಹೊಳೆ ಈ ವ್ಯಾಪ್ತಿಯಲ್ಲಿ ಹೆಚ್ಚು ಕಾಡಾನೆಗಳು ಸಂಚರಿಸುತ್ತವೆ ಎಂದು ಮಾಹಿತಿ ನೀಡಿದರು.
ಯಶವಂತ ಕಾಳಪ್ಪ ಅವರು ಮಾತನಾಡಿ ಕುಟ್ಟಂದಿ ಸೇರಿದಂತೆ ಇತರೆ ಕಡೆಗಳಲ್ಲಿ ಕಾಡಾನೆಯನ್ನು ಓಡಿಸುವ ಸಂದರ್ಭದಲ್ಲಿ ಆನೆಗಳು ಚದುರಿ ಹೋಗುತ್ತವೆ. ಇದರಿಂದ ಕಾಡಾನೆಗಳು ತೋಟಗಳಿಗೆ ಹೋಗುವುದು ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೋಸ್ ಮಾದಪ್ಪ ಅವರು ಮಾತನಾಡಿ ಕಾಡಂಚಿನಲ್ಲಿರುವ ಗ್ರಾಮದ ಜನರಿಗೆ ಪುನರ್ ವಸತಿ ಕಲ್ಪಿಸಬೇಕು. ವನ್ಯಪ್ರಾಣಿಗಳ ಹಾವಳ ತಪ್ಪಿಸಬೇಕು ಎಂದು ಮನವಿ ಮಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಮಾತನಾಡಿ ಆರ್‌ಆರ್‌ಟಿ ಮತ್ತು ಇಟಿಎಫ್ ನ್ನು ಒಂದುಗೂಡಿಸಿ ಕಾರ್ಯನಿರ್ವಹಿಸಲು ಮುಂದಾಗಲಾಗಿದೆ ಎಂದು ಹೇಳಿದರು.
ಕಾರ್ಮಿಕರಿಗೆ ಆತಂಕ: ರೈತ ಸಂಘದ ಜಿಲ್ಲಾಧ್ಯಕ್ಷ ಕುಶಾಲಪ್ಪ ಅವರು ಮಾತನಾಡಿ ಕಾಡಾನೆ ಹಾವಳಿಯಿಂದಾಗಿ ಕಾಫಿ ಕೊಯ್ಯಲು ಕಾರ್ಮಿಕರು ಮುಂದೆ ಬರುತ್ತಿಲ್ಲ. ವನ್ಯಪ್ರಾಣಿಗಳ ನಿಯಂತ್ರಣ ಮಾಡಿದಾಗ ಮಾತ್ರ ಕಾರ್ಮಿಕರು ಸುರಕ್ಷಿತವಾಗಿ ಕೃಷಿ ಕೆಲಸ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು. ಡಾ.ತಮ್ಮಯ್ಯ, ಕಾರ್ತಿಕ್, ಸಿ.ಪಿ.ಅಯ್ಯಪ್ಪ, ಕೆ.ಎಂ.ನಾಣಯ್ಯ, ಕೃಷ್ಣನ್, ರವಿಚಂಗಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ, ಇತರರು ಕಾಡಾನೆ ಹಾವಳಿ ತಡೆಯುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವು ಮಾಹಿತಿ ನೀಡಿದರು.ವನ್ಯಪ್ರಾಣಿಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರ ಮಾಹಿತಿ ಪಡೆದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ವನ್ಯಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಲಾಗುವುದು. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆಗೆ ಸಮಾಲೋಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.