ಕನ್ನಡಪ್ರಭ ವಾರ್ತೆ ಬೆಳಗಾವಿ
ಕ್ರೀಡಾಪಟುಗಳಿಗೆ ಉತ್ತಮವಾದ ಕ್ರೀಡಾ ಶಿಕ್ಷಣ ದೊರೆತು, ಕ್ರೀಡೆಯು ವಿದ್ಯಾರ್ಥಿಗಳ ಬದುಕನ್ನು ರೂಪಿಸುವಂತೆ ಆಗಬೇಕು. ಅದಕ್ಕಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಿತ 365 ಕಾಲೇಜುಗಳು ತಕ್ಷಣ ದೈಹಿಕ ಶಿಕ್ಷಕರನ್ನು ಹೊಂದಿರಬೇಕು ಎಂಬ ಸುತ್ತೋಲೆಯನ್ನು ಈಗಾಗಲೇ ಕಳಿಸಿದ್ದೇವೆ. ದೈಹಿಕ ಶಿಕ್ಷಕರನ್ನು ಹೊಂದಿರದ ಕಾಲೇಜುಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.ಕುವೆಂಪು ಸಭಾಂಗಣದಲ್ಲಿ ನಗರದ ರಾಣಿ ಚನ್ನಮ್ಮ ವಿವಿ ಕ್ರೀಡಾ ವಿಭಾಗದಿಂದ ಗುರುವಾರ ಆಯೋಜಿಸಿದ್ದ ರಾಣಿ ಚನ್ನಮ್ಮ ವಿವಿ ಸಂಯೋಜಿತ ಕಾಲೇಜುಗಳ ದೈಹಿಕ ಶಿಕ್ಷಕರ 2024-25ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳೇ ವಿವಿ ಆಸ್ತಿ ಮತ್ತು ಶಕ್ತಿ. ಕ್ರೀಡೆ ಪ್ರತಿಯೊಬ್ಬ ವ್ಯಕ್ತಿಯ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗಿಯಾಗುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸುದೃಢರಾಗುತ್ತಾರೆ. ಸದಾ ಚೈತನ್ಯ, ಲವಲವಿಕೆಯಿಂದದ್ದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತ ಓದಿನಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.ಬೇರುಮಟ್ಟದಲ್ಲಿಯೇ ವಿದ್ಯಾರ್ಥಿಗಳಿಗೆ ಕ್ರೀಡಾಸ್ಫೂರ್ತಿಯನ್ನು ತುಂಬಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ತಯಾರು ಮಾಡಬೇಕು. ದೇಶದಲ್ಲಿ ಕ್ರೀಡಾ ಸಂಪತ್ತನ್ನು ಹೆಚ್ಚಿಸುವ ಬಹುದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ನಿಮ್ಮ ಒಬ್ಬ ವಿದ್ಯಾರ್ಥಿಯಾದರೂ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗಿಯಾಗುವ ರೀತಿಯಲ್ಲಿ ಮಾರ್ಗದರ್ಶನ ಮತ್ತು ಸಂಕಲ್ಪ ಇರಬೇಕು ಎಂದು ಕಿವಿಮಾತು ಹೇಳಿದರು.
ಕುಲಸಚಿವ ಸಂತೋಷ ಕಾಮಗೌಡ ಮಾತನಾಡಿ, ದೈಹಿಕ ಶಿಕ್ಷಕರು ಸದಾ ಫಿಟ್ನೆಸ್ ಕಾಯ್ದುಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ ಬೆಳೆಸಬೇಕು. ಈಚೆಗೆ ಕ್ರೀಡೆ ಅತೀ ಹೆಚ್ಚು ಮಹತ್ವ ಪಡೆದುಕೊಂಡ ಕ್ಷೇತ್ರವಾಗಿದೆ. ಉತ್ತಮ ಕೀಡಾಪಟುಗಳಿಗೆ ಸರ್ಕಾರ ಮತ್ತು ಸರ್ಕಾರೇತರ ಕ್ಷೇತ್ರಗಳಲ್ಲಿ ವಿಫುಲ ಉದ್ಯೋಗ ಅವಕಾಶವಿದೆ. ನಿಮ್ಮ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ನಿಮ್ಮ ಹೆಸರು ಇರುತ್ತದೆ ಎಂದರು.ಹಣಕಾಸು ಅಧಿಕಾರಿಗಳಾದ ಎಂ.ಎ. ಸಪ್ನಾ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಿಯಾಗಿ ಮಾರ್ಗದರ್ಶನ ಮಾಡುವುದರ ಮೂಲಕ ವಿದ್ಯಾರ್ಥಿ ಮತ್ತು ದೇಶದ ಭವಿಷ್ಯ ರೂಪಿಸಬೇಕು ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಸಿ. ಚಳಗೇರಿ ಇದ್ದರು. ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣದ ಅಧ್ಯಕ್ಷ ಡಾ. ರವಿ ವಿ. ಗೋಲಾ ಸ್ವಾಗತಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜಗದೀಶ ಗಸ್ತಿ ಅವರು 2023-24ರ ಸಾಲಿನ ಕ್ರೀಡಾ ವಾರ್ಷಿಕ ವರದಿ ವಾಚಿಸಿದರು. ಸಿದ್ಧಾರೂಢ ಬೆಳಗಲಿ ನಿರೂಪಿಸಿದರು, ಡಾ.ಸಿ.ರಾಮರಾವ್ ವಂದಿಸಿದರು, 2023-24ರ ಶೈಕ್ಷಣಿಕ ಸಾಲಿನಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಸಭೆಯಲ್ಲಿ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು ಇದ್ದರು.ಕ್ರೀಡೆಗಾಗಿ ವಿಶ್ವವಿದ್ಯಾಲಯ ವಿಶೇಷ ಕಾಳಜಿ ವಹಿಸುತ್ತಿದೆ. ಕ್ರೀಡಾಪಟುಗಳಿಗಾಗಿ ವಿಶ್ವವಿದ್ಯಾಲಯ ಡಿಪ್ಲೋಮಾ ಇನ್ ಸ್ಪೋರ್ಟ್ಸ್ ಕೋರ್ಸ್ ಪರಿಚಯಿಸುತ್ತಿದೆ. ಕ್ರೀಡಾ ಕ್ಷೇತ್ರ ಅತ್ಯಂತ ಶಿಸ್ತಿನಿಂದ ಕೂಡಿದೆ. ದೈಹಿಕ ಶಿಕ್ಷಕರು ಶಿಸ್ತು ಬದ್ಧವಾಗಿರಬೇಕು. ಆ ಮೂಲಕ ತಾವು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಬೇಕು.- ಪ್ರೊ.ಸಿ.ಎಂ.ತ್ಯಾಗರಾಜ ಆರ್‌ಸಿಯು ಕುಲಪತಿ