ರಾಮನಗರ: ತಾಲೂಕಿನ ಮಾಯಗಾನಹಳ್ಳಿಯಲ್ಲಿ ಹೈಟೆಕ್ ಆಗಿರುವ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.
ಸ್ಥಳೀಯ ಗ್ರಾಮ ಪಂಚಾಯಿತಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನಿಮಗೆ ಸರ್ಕಾರ ಹೆಚ್ಚಿನ ಅಧಿಕಾರ ನೀಡಿದೆ. ಗ್ರಾಮ ಪಂಚಾಯತಿಗೆ ಸರ್ಕಾರ ದಿಂದ ಹೆಚ್ಚಿನ ಅನುದಾನ ಲಭ್ಯವಾಗುತ್ತಿದ್ದು, ಶಾಸಕರ ಅನುದಾನದಡಿ 13 ಕೋಟಿ ರು.ಗಳ ವೆಚ್ಚದಲ್ಲಿ ಹಲವು ಶಾಶ್ವತ ಅಭಿವೃದ್ಧಿ ಕೆಲಸಗಳು ಗ್ರಾಪಂನಲ್ಲಿ ಮಾಡಲಾಗುತ್ತಿದೆ. ಮಾಯಗಾನಹಳ್ಳಿ ಗ್ರಾಪಂ ಸದಸ್ಯರೆಲ್ಲರೂ ಉತ್ತಮ ಕಟ್ಟಡ ನಿರ್ಮಿಸಿ ಮಾದರಿಯ ಕೆಲಸ ಮಾಡಿದ್ದೀರಿ ಎಂದು ಶ್ಲಾಘಿಸಿದರು.
ಮಾಯಗಾನಹಳ್ಳಿ ಗ್ರಾಪಂ ಮೇಲಂತಸ್ತಿನ ಕಟ್ಟಡದ ಜೊತೆಗೆ ವರ್ಗ 1ರಲ್ಲಿ ಕಾಂಪೌಂಡ್, ನೆಲಹಾಸು, ಬಣ್ಣ, ಸೇರಿ ಒಟ್ಟು 30 ಲಕ್ಷ ರೂ ವೆಚ್ಚದಲ್ಲಿ ಸುಂದರ, ಸುಸಜ್ಜಿತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಗ್ರಾಪಂ ಆವರಣದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಕೊಠಡಿ ಮೀಸಲಿಟ್ಟಿರುವುದು ಇತರ ಗ್ರಾಪಂಗಳಿಗೆ ಮಾದರಿಯಾಗಿದೆ. ಯಾವುದೇ ವ್ಯಕ್ತಿ ಗ್ರಾಪಂ ಸದಸ್ಯರಾಗುವುದು ಮುಖ್ಯವಲ್ಲ, ಗ್ರಾಮದ ಜನರು ಮೆಚ್ಚುವ ಕೆಲಸಗಳನ್ನು ವಿಶಾಲವಾದ ಚಿಂತನೆಯೊಂದಿಗೆ ಅಭಿವೃದ್ಧಿ ಕೆಲಸ ಮಾಡಿದಾಗ ಮಾತ್ರ ನಿಮಗೆ ಗೌರವ ಸಿಗುತ್ತದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಚ್.ರಂಜಿತ್ ಮಾತನಾಡಿ, ಮಾಯಗಾನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಹೈಟೆಕ್ ಶಾಲೆಯ ಅವಶ್ಯಕತೆಯಿದೆ. ಅದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ನೆರವಾಗುತ್ತದೆ. ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳನ್ನು ಸಿದ್ದಗೊಳಿಸಲು ಸಾಧ್ಯವಾಗುತ್ತದೆ ಎಂದು ಶಾಸಕರಲ್ಲಿ ಮನವಿ ಮಾಡಿದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಬಗರ್ ಹುಕ್ಕು ಸಮಿತಿ ಸದಸ್ಯ ರವಿ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾಪರಮಶಿವಯ್ಯ, ಮಾಜಿ ಅಧ್ಯಕ್ಷ ಎಂ.ಎಚ್.ರಂಜಿತ್, ಸದಸ್ಯರಾದ ಪ್ರಕಾಶ್, ನಾಗ ರಾಜು, ರಾಜಶೇಖರ್, ವೆಂಕಟೇಶ್, ಶ್ರೀನಿವಾಸ್, ಮಾಯಮ್ಮ, ಶೋಭಾ, ಕೆಂಪರಾಜಮ್ಮ, ಪಿಡಿಒ ಡಿ.ಎಲ್. ಮಾದೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಸದಸ್ಯರು ಅವರ ಗ್ರಾಮ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಇತ್ಯಾದಿ ಪ್ರಾಥಮಿಕ ಸಮಸ್ಯೆಗಳನ್ನು ಆಯಾ ಗ್ರಾಮಗಳಲ್ಲಿ ಪರಿಶೀಲನೆ ಮಾಡಬೇಕು. ಖುದ್ದಾಗಿ ಗ್ರಾಮಗಳನ್ನು ವೀಕ್ಷಿಸಬೇಕು. ಸೌಲಭ್ಯಗಳು ಇಲ್ಲದೆಡೆ ಕೂಡಲೇ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಶ್ರದ್ಧಾಸಕ್ತಿಯಿದ್ದಾಗ ಮಾತ್ರ ಗ್ರಾಮೀಣಾಭಿವೃದ್ಧಿ ಸಾಧ್ಯ.
29ಕೆಆರ್ ಎಂಎನ್ 6.ಜೆಪಿಜಿ