ಹಾವೇರಿ:ನಗರದಲ್ಲಿ ಶನಿವಾರ ಆಯೋಜಿಸಿದ್ದ ಭೂ ಗ್ಯಾರಂಟಿ ಸಮಾವೇಶದಲ್ಲಿ ಜಿಲ್ಲೆಯ 30 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ವಿವಿಧ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಇನ್ನೂ ಸುಮಾರು ಹತ್ತು ಸಾವಿರ ವಿವಿಧ ಹಕ್ಕು ಪತ್ರಗಳ ವಿತರಣೆ ಬಾಕಿ ಇದ್ದು, ಹಕ್ಕು ಪತ್ರ ಸಿದ್ಧತೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿ ಬಹು ದೊಡ್ಡ ಬದಲಾವಣೆಗಳು ಆಗುತ್ತಿವೆ. ಇಲಾಖೆಯ ಆಸ್ತಿ ಮತ್ತು ಭೂದಾಖಲೆಗಳ ನಿರ್ವಹಣೆಯಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳನ್ನು ಶಾಶ್ವತವಾಗಿ ಪರಿಹರಿಸಲು ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ಉಪಕರಣಗಳು ಹಾಗೂ ಸುಸಜ್ಜಿತ ಹೆಚ್ಚಿನ ಸಿಬ್ಬಂದಿಯೊಂದಿಗೆ ಸಮಗ್ರ ಬದಲಾವಣೆ ತರಲಾಗಿದೆ ಎಂದು ಹೇಳಿದ್ದಾರೆ.
ಇ ಆಫೀಸ್ ಕಾಗದ ರಹಿತ ಆಡಳಿತ, ನನ್ನ ಭೂಮಿ ಹಳೆ ಭೂ ಮಂಜೂರಾತಿಗೆ ಪಕ್ಕ ದಾಖಲೆ ದುರಸ್ತಿ ಪೋಡಿ, ನನ್ನ ಆಸ್ತಿ ಭೂ ದಾಖಲೆಗಳನ್ನು ಆಧಾರ್‌ನೊಂದಿಗೆ ಜೋಡಣೆ, ಭೂ ನ್ಯಾಯ ಬಾಕಿ ಕಂದಾಯ ನ್ಯಾಯಾಲಯ ಪ್ರಕರಣಗಳ ತ್ವರಿತ ವಿಲೇ, ಆಟೋಮೆಟಿಷನ್ ತಕ್ಷಣ ಖಾತೆ ಬದಲಾವಣೆ, ಲ್ಯಾಂಡ್ ಬಿಟ್ ಸರ್ಕಾರಿ ಆಸ್ತಿಗಳ ರಕ್ಷಣೆಯಂತಹ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.ಈ ಎಲ್ಲ ಕಾರ್ಯಕ್ರಮಗಳ ಮಧ್ಯೆ ಅತಿ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ದಾಖಲೆರಹಿತ ಗ್ರಾಮ ವಾಸಿಗಳಿಗೆ ಪಕ್ಕ ಹಕ್ಕು ಪತ್ರ ನೀಡುವ ಕಂದಾಯ ಗ್ರಾಮ ಯೋಜನಯು ಬದುಕಿಗೊಂದು ಭರವಸೆ ನೀಡುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ನೀಡಿದ ಸಹಕಾರ ದೊಡ್ಡದು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪೊಲೀಸ್ ಇಲಾಖೆ ಅಧಿಕಾರಿಗಳ ಶ್ರಮದಿಂದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಯಶಸ್ವಿಯಾಗಿ ಜರುಗಿದೆ. ಜಿಲ್ಲೆಯ ಅಭಿವೃದ್ಧಿಗೆ ಇದೇ ಹಾದಿಯಲ್ಲಿ ಮುನ್ನಡೆಯಲಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.