ಎಸ್ಪಿ ಎಚ್ಚರಿಕೆ, ಹರಪನಹಳ್ಳಿಯಲ್ಲಿ ಶಾಂತಿಸಭೆ
ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಎಚ್ಚರಿಸಿದ್ದಾರೆ.
ಅವರು ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಸಂಬಂಧ ಶಾಂತಿ ಸಭೆಯ ಅಧ್ಯಕ್ಷತೆ ಶುಕ್ರವಾರ ಮಾತನಾಡಿದರು. ಮದ್ಯಪಾನ ಮಾಡಿ ವಿಚಿತ್ರ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಾರೆ. ಈ ರೀತಿ ಮಾಡಿದರೆ ಕ್ರಮ ಖಂಡಿತ ಎಂದು ಅವರು ಹೇಳಿದರು. ಮೊಬೈಲ್ ಬಳಕೆ ಸಾಮಾಜಿಕ ಶಾಂತಿ ಕದಡಲು ಆಗಬಾರದು ಎಂದ ಅವರು, ವಿಜಯನಗರ ಜಿಲ್ಲೆಯಲ್ಲಿ ಕೇವಲ 850 ಪೊಲೀಸರು ಇದ್ದಾರೆ. ಆದ್ದರಿಂದ ಶಾಂತಿಪಾಲನೆ ಕೇವಲ ಪೊಲೀಸರದ್ದಲ್ಲ, ತಮ್ಮದೂ ಹೌದು ಎಂದು ಸಾರ್ವಜನಿಕರಿಗೆ ತಿಳಿಸಿದರು.ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾತನಾಡಿ, ತಾಲೂಕಿನಲ್ಲಿ 917 ಕಡೆ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಮ್ಮ ಸಿಬ್ಬಂದಿ ಕಡಿಮೆ ಇರುವುದರಿಂದ ತಾವೇ ಒಂದೊಂದು ಗಣೇಶಮೂರ್ತಿ ಬಳಿ 4 ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದರು.
ತಹಸೀಲ್ದಾರ್ ಬಿ.ವಿ. ಗಿರೀಶಬಾಬು ಮಾತನಾಡಿ, ನಮ್ಮ ಸಂಸ್ಕಾರ, ಸಂಸ್ಕೃತಿ ಉಳಿಸಿಕೊಂಡು ಹಬ್ಬ ಆಚರಿಸಬೇಕು. ಯಾವುದೇ ಅಹಿತಕರ ಘಟನೆಯಾಗದಂತೆ ಹಬ್ಬ ಆಚರಿಸಿ ಎಂದು ಹೇಳಿದರು.
ಪುರಸಭಾ ಮುಖ್ಯಾಧಿಕಾರಿ ರೇಣುಕಾ ಎಸ್. ದೇಸಾಯಿ ಮಾತನಾಡಿ, ಷರತ್ತಿಗೆ ಒಳಪಡಿಸಿ ಗಣೇಶಮೂರ್ತಿ ಸ್ಛಾಪನೆಗೆ ಅನುಮತಿ ನೀಡುತ್ತೇವೆ ಎಂದರು.
ಅರಸೀಕೆರೆ ಸಲಾಂ ಸಾಹೇಬ್ ಮಾತನಾಡಿ, ಅನ್ಯಧರ್ಮೀಯರನ್ನು ಗೌರವಿಸಿದರೆ ನಮ್ಮ ಧರ್ಮಕ್ಕೆ ಗೌರವ ಬರುತ್ತದೆ. ನಮ್ಮ ಹಬ್ಬದಲ್ಲಿ ನೀವು, ನಿಮ್ಮ ಹಬ್ಬದಲ್ಲಿ ನಾವು ಪಾಲ್ಗೊಂಡು ಶಾಂತಿ, ಸಂಭ್ರಮದಿಂದ ಹಬ್ಬಗಳನ್ನು ಆಚರಿಸಿ ಸಮಾಜಕ್ಕೆ ಉತ್ತಮ ಸಂದೇಶ ಕೊಡೋಣ ಎಂದು ನುಡಿದರು.
ಸಿಪಿಐ ಮಹಾಂತೇಶ ಸಜ್ಜನ್, ವಿವಿಧ ಠಾಣೆಗಳ ಪಿಎಸ್‌ಐಗಳಾದ ಶಂಭುಲಿಂಗ ಹಿರೇಮಠ, ಕಿರಣ್ ಕುಮಾರ, ವಿಜಯಕೃಷ್ಣ, ನಾಗರತ್ನಮ್ಮ, ಅಗ್ನಿಶಾಮಕದಳದ ಅಧಿಕಾರಿ ನರಸಪ್ಪ ಉಪಸ್ಥಿತರಿದ್ದರು.