ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆಗೆ ಗ್ರಹಣ

KannadaprabhaNewsNetwork |  
Published : Aug 24, 2025, 02:00 AM IST
ಹೂವಿನಹಡಗಲಿ ತಾಲೂಕಿನ ಅಂಗೂರು ಬಳಿ ನಿರ್ಮಿಸಿದ ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆ. | Kannada Prabha

ಸಾರಾಂಶ

ತುಂಗಭದ್ರೆ ತಟದಲ್ಲಿ ನಿರ್ಮಾಣಗೊಂಡ ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆಗೆ ದಶಕದಿಂದ ಗ್ರಹಣ ಹಿಡಿದಿದೆ. ಯೋಜನೆ ವ್ಯಾಪ್ತಿಯ 4 ಗ್ರಾಮಗಳ ಸಾವಿರಾರು ಎಕರೆ ಖುಷ್ಕಿ ಜಮೀನು ನೀರಾವರಿ ಸೌಲಭ್ಯದಿಂದ ವಂಚಿತವಾಗಿದೆ.

₹1 ಕೋಟಿ ಹಣ ಅರೆಬರೆ ಕಾಮಗಾರಿ, ಇಲಾಖೆ ಕಾರ್ಯವೈಖರಿಗೆ ರೈತರ ಅಸಮಾಧಾನಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತುಂಗಭದ್ರೆ ತಟದಲ್ಲಿ ನಿರ್ಮಾಣಗೊಂಡ ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆಗೆ ದಶಕದಿಂದ ಗ್ರಹಣ ಹಿಡಿದಿದೆ. ಯೋಜನೆ ವ್ಯಾಪ್ತಿಯ 4 ಗ್ರಾಮಗಳ ಸಾವಿರಾರು ಎಕರೆ ಖುಷ್ಕಿ ಜಮೀನು ನೀರಾವರಿ ಸೌಲಭ್ಯದಿಂದ ವಂಚಿತವಾಗಿದೆ.

ಹೌದು, ತಾಲೂಕಿನ ಅಂಗೂರು ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ನಿರ್ಲಕ್ಷ್ಯದಿಂದ, ಅಂಗೂರು, ಕೋಟಿಹಾಳು, ಬೀರಬ್ಬಿ ಮತ್ತು ಕತ್ತೆಬೆನ್ನೂರು ರೈತರ 1012 ಎಕರೆ ಜಮೀನುಗಳಿಗೆ ನೀರುಣಿಸಬೇಕಿದ್ದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸಲ್ಲದ ನೆಪ ಹೇಳಿ ಇಲಾಖೆ ಕಾಲಹರಣ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಸಮಸ್ಯೆ ಕುರಿತು ಶಾಸಕ ಕೃಷ್ಣನಾಯ್ಕ ಸದನದಲ್ಲಿ ಚರ್ಚಿಸಿದ್ದರೂ ಯಾವುದೇ ಪ್ರಯೋಜನವಾಗುವ ಲಕ್ಷಣಗಳು ಕಾಣುತ್ತಿಲ್ಲ.

2006-07ನೇ ಸಾಲಿನಲ್ಲಿ ಸರ್ಕಾರದಿಂದ ಅಂದಿನ ಸಚಿವರಾಗಿದ್ದ ಎಂ.ಪಿ. ಪ್ರಕಾಶ ಕಾಲದಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ನಂತರದಲ್ಲಿ ಶಾಸಕರಾಗಿದ್ದ ಚಂದ್ರನಾಯ್ಕ ಅವಧಿಯಲ್ಲಿ ಯೋಜನೆಗೆ ಭೂಮಿಪೂಜೆ ನೇರವೇರಿಸಿ, ₹780 ಲಕ್ಷಗಳಿಗೆ ಟೆಂಡರ್‌ ಕರೆದು, ಕೆಡಿಎಚ್‌ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆ ವೇಳೆ ಯೋಜನೆಯ ಕಾಲುವೆಗೆ ನೀರೆತ್ತಲು ಸಿಮೆಂಟ್‌ ಪೈಪ್‌ ಬಳಕೆ ಮಾಡಿದ್ದರಿಂದ ಪದೇ ಪದೇ ಹಾಳಾಗುತ್ತಿತ್ತು. ಇದನ್ನರಿತು ಯೋಜನೆಗೆ ಅಗತ್ಯ ಅನುದಾನಕ್ಕಾಗಿ 2017ರಲ್ಲಿ ಶಾಸಕರಾಗಿದ್ದ ಪಿ.ಟಿ. ಪರಮೇಶ್ವರ ನಾಯ್ಕ ತಮ್ಮ ಅವಧಿಯಲ್ಲಿ ₹1 ಕೋಟಿ ಅನುದಾನ ಮಂಜೂರು ಮಾಡಿಸಿ, ಕಾಮಗಾರಿ ಆರಂಭಿಸಿದ್ದರು.

ಯೋಜನೆಯ ಪಂಪ್‌ಹೌಸ್‌ನಿಂದ 180 ಮೀಟರ್‌ ಉದ್ದ ಕಬ್ಬಿಣದ ಪೈಪ್‌ಲೈನ್‌ ಕಾಮಗಾರಿಯ ಜತೆಗೆ ಸರ್ಜ್ ಟ್ಯಾಂಕ್‌ ನಿರ್ಮಿಸಲಾಗಿದೆ. ಈ ಪೈಪ್‌ಲೈನ್‌ನಲ್ಲೂ ನೀರು ಸೋರಿಕೆಯಾಗುತ್ತಿದೆ. ರೈತರ ಜಮೀನಿನಲ್ಲಿ ನೀರು ಸೋರುತ್ತಿದ್ದು, ಕಾಮಗಾರಿ ಮಾಡಲು ರೈತರು ಅನುಮತಿ ನೀಡುತ್ತಿಲ್ಲ. ನಮ್ಮ ಜಮೀನು ಭೂಸ್ವಾಧೀನ ಮಾಡಿಕೊಂಡ ಬಳಿಕ ಕಾಮಗಾರಿ ಆರಂಭಿಸಿ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಗುತ್ತಿಗೆದಾರ ಅರೆಬರೆ ಕಾಮಗಾರಿ ಮಾಡಿದ್ದಾರೆ. ಮಾಡಿದ ಕಾಮಗಾರಿಗೆ ₹68 ಲಕ್ಷಗಳ ಬಿಲ್‌ ನೀಡಿದ್ದು, ಮೇಲಧಿಕಾರಿಗಳಿಗೆ ಇಲಾಖೆಯಿಂದ ದಾಖಲೆ ರವಾನೆಯಾಗಿದೆ. ಆದರೆ ಈ ವರೆಗೂ ಹಣ ಪಾವತಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈ ವರೆಗೂ ಯೋಜನೆಯ ಪಂಪ್‌ಹೌಸ್‌, ಮೋಟಾರ್‌ ಸೇರಿದಂತೆ ಯಾವೊಂದು ನಿರ್ವಹಣೆ ಇಲ್ಲದೇ ಮೋಟಾರ್‌ಗಳು ತುಕ್ಕು ಹಿಡಿದಿವೆ. ಇಲಾಖೆ ಅಧಿಕಾರಿಗಳು ಕಚೇರಿಯಲ್ಲೇ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಸ್ಥಳಕ್ಕೆ ಭೇಟಿ ನೀಡಿಲ್ಲ, ರೈತರ ಸಮಸ್ಯೆ ಆಲಿಸುತ್ತಿಲ್ಲ ಎಂಬುದು ಸ್ಥಳೀಯ ರೈತರ ದೂರು. ನೀರು ಹರಿಯಬೇಕಿದ್ದ ಕಾಲುವೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು, ಜಾಲಿ ಗಿಡ-ಗಂಟಿಗಳೇ ತುಂಬಿಕೊಂಡಿವೆ. ಸದ್ಯದ ಪರಿಸ್ಥಿತಿಯಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಸಾಧ್ಯ. ಮೇಲಧಿಕಾರಿಗಳ ಜತೆಗೆ ಚರ್ಚಿಸಿ ಮತ್ತೆ ಕ್ರಿಯಾ ಯೋಜನೆ ರೂಪಿಸಿ, ಅನುದಾನ ಬಂದ ನಂತರದಲ್ಲಿ ಕಾಮಗಾರಿ ಆರಂಭಿಸಬೇಕಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಎಇಇ ಮುರಳೀಧರ ತಿಳಿಸಿದ್ದಾರೆ.

ಕುಡುಗೋಲು ಮಟ್ಟಿ ಏತ ನೀರಾವರಿಗಾಗಿ ಭೂಸ್ವಾಧೀನವಾದ ಭೂಮಿಗೆ ಇನ್ನೂ ಪರಿಹಾರ ನೀಡಿಲ್ಲ. ಜತೆಗೆ ಶಾಸಕರು, ಸಚಿವರು ಸಾಕಷ್ಟು ಅನುದಾನ ತಂದು ಹಾಕಿದ್ದರೂ ಯೋಜನೆಯ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ. 15 ವರ್ಷದಿಂದ ಯೋಜನೆ ನನೆಗುದಿಗೆ ಬಿದ್ದರೂ, ಯಾವೊಬ್ಬ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ಈ ಭಾಗದ ಸಾವಿರಾರು ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎನ್ನುತ್ತಾರೆ ರೈತ ಬಸವರಾಜ ಕಟ್ಟೆಬೆನ್ನೂರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!