ಋಷಿಗಳ ದಿವ್ಯ ದರ್ಶನ ಎಲ್ಲರಿಗೂ ಮುಟ್ಟಿಸಿದ ಕಲೆ ಯಕ್ಷಗಾನ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork |  
Published : Aug 24, 2025, 02:00 AM IST
೨೩ಎಸ್.ಆರ್.ಎಸ್೩ಪೊಟೋ೧ (ಹಿರಿಯ ಯಕ್ಷಗಾನ ಕಲಾವಿದ ಗಣಪತಿ ಭಾಗವತ ಕವಾಳೆ ಅವರಿಗೆ ದಿ.ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿ ನೀಡಿ ಗೌರವಿಸಲಾಯಿತು.)೨೩ಎಸ್.ಆರ್.ಎಸ್೩ಪೊಟೋ೧ (ದಿ.ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ಶ್ರೀರಾಮ ಮಹಿಮೆ ಎರಡನೇ ಮುದ್ರಣವನ್ನು ಸ್ವರ್ಣವಲ್ಲೀ ಶ್ರೀಗಳು ಬಿಡುಗಡೆಗೊಳಿಸಿದರು.) | Kannada Prabha

ಸಾರಾಂಶ

ಋಷಿ-ಮುನಿಗಳು ತಪಸ್ಸು ಹಾಗೂ ಜ್ಞಾನದ ಮಹಿಮೆಯಿಂದ ದೇವರನ್ನು ಕಂಡುಕೊಂಡರು. ಅದನ್ನು ಬರೆದಿಟ್ಟರು. ಅದೇ ನಮ್ಮ ಪುರಾಣ ಮತ್ತು ಇತಿಹಾಸವಾಗಿದೆ.

ಶಿರಸಿ: ಋಷಿಗಳ ದಿವ್ಯ ದರ್ಶನವನ್ನು ಶತಮಾನಗಳಿಂದ ಯಶಸ್ವಿಯಾಗಿ ಎಲ್ಲರಿಗೂ ಮುಟ್ಟಿಸಿದ ಕಲೆ ಯಕ್ಷಗಾನ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಶ್ರೀ ನುಡಿದರು.

ಅವರು ಶನಿವಾರ ಸೋಂದಾ ಸ್ವರ್ಣವಲ್ಲೀಯ ಸುಧರ್ಮಾ ಸಭಾಭವನದಲ್ಲಿ ಯಕ್ಷ ಶಾಲ್ಮಲಾ ಸ್ವರ್ಣವಲ್ಲೀ ಹಾಗೂ ಸರ್ವಜ್ಞೇಂದ್ರ ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಂಡ ೨೧ನೇ ವರ್ಷದ ಯಕ್ಷೋತ್ಸವದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಋಷಿ-ಮುನಿಗಳು ತಪಸ್ಸು ಹಾಗೂ ಜ್ಞಾನದ ಮಹಿಮೆಯಿಂದ ದೇವರನ್ನು ಕಂಡುಕೊಂಡರು. ಅದನ್ನು ಬರೆದಿಟ್ಟರು. ಅದೇ ನಮ್ಮ ಪುರಾಣ ಮತ್ತು ಇತಿಹಾಸವಾಗಿದೆ. ವಿಕಲ್ಪರಹಿತ ಶುದ್ಧ ಚೈತನ್ಯವು ಪರಬ್ರಹ್ಮ ತತ್ವವಾಗಿದೆ. ಋಷಿಗಳು ಎತ್ತರ ಹಾಗೂ ಕೆಳಭಾಗದ ತತ್ವವನ್ನು ನೋಡಿದ್ದಾರೆ. ಕಾಲ ಕಳೆದಂತೆ ಮನುಷ್ಯನ ಮನಸ್ಥಿತಿ ಬದಲಾಗುತ್ತದೆ ಎಂದರು.

ಹಿರಿಯ ಯಕ್ಷಗಾನ ಕಲಾವಿದ ಗಣಪತಿ ಭಾಗವತ ಕವಾಳೆ ಅವರಿಗೆ ದಿ. ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೊಸ್ತೋಟ ಭಾಗವತರಿಂದ ಸಾಕಷ್ಟು ಕಲಿತಿದ್ದೇವೆ. ತಾಳ, ಸೂತ್ರ ಯಕ್ಷಗಾನ ಕಲಿಸಲು, ಪ್ರಸಂಗದ ಪಂದ್ಯ ಅಳತೆಗೆ ಬಹಳ ಸುಲಭ. ಹಿರಿಯ ಕಲಾವಿದರ ಒಡನಾಟದಿಂದ ಬಹಳಷ್ಟು ಕಲಿಯಲು ಸಾಧ್ಯವಾಯಿತು. ಯಕ್ಷಗಾನವನ್ನು ರಾಷ್ಟ್ರೀಯ ಕಲೆಯಾಗಿ ಬಿಂಬಿಸಲು ಸಾಧ್ಯವಿದೆ. ಅದಕ್ಕೆ ನಾವೆಲ್ಲರೂ ಪ್ರಯತ್ನಿಸಬೇಕಿದೆ ಎಂದರು.

ದಿ.ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ಶ್ರೀರಾಮ ಮಹಿಮೆ ಎರಡನೇ ಮುದ್ರಣವನ್ನು ಸ್ವರ್ಣವಲ್ಲೀ ಶ್ರೀಗಳು ಬಿಡುಗಡೆಗೊಳಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಂಸ್ಕೃತಿ ಪರಿಚಯಿಸಿ, ಸಂಸ್ಕಾರ ನೀಡುವ ವೈವಿಧ್ಯಮಯ ವಿಶೇಷತೆಗಳನ್ನು ಯಕ್ಷಗಾನ ಕಲೆ ಹೊಂದಿದೆ. ಈ ಕಲೆ ಮುಂದಿನ ಪೀಳಿಗೆಗೆ ಹಸ್ತಾಂತರವಾಗಬೇಕು. ಸ್ವರ್ಣವಲ್ಲೀಯ ಯಕ್ಷ ಶಾಲ್ಮಲಾ ಇಂತಹ ಚಟುವಟಿಕೆಯನ್ನು ಪ್ರಬಲವಾಗಿ ನಡೆಸಿದಾಗ ಪ್ರತಿಭೆಗಳ ಪ್ರತಿಭೆ ಹೊರಬರಲು ಸಾಧ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ಹಣ ಗಳಿಕೆ ಜೀವನೋದ್ದೇಶವಾಗಿ ಉಳಿದೆಲ್ಲವೂ ದೂರವಾಗುತ್ತಿರುವ ಸಂಕಟದ ಪರಿಸ್ಥಿತಿ ನೋಡುತ್ತಿದ್ದೇವೆ. ಶ್ರೀಗಳ ಮಾರ್ಗದರ್ಶನದಲ್ಲಿ ಯಕ್ಷಶಾಲ್ಮಲಾದ ಚಟುವಟಿಕೆ ನಿರಂತರವಾಗಿ ನಡೆಯಬೇಕು ಎಂದರು.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಮಾತನಾಡಿ, ಉತ್ತರ ಕನ್ನಡದಲ್ಲಿ ಯಕ್ಷಗಾನಕ್ಕೆ ಕೊರತೆಯಿಲ್ಲ. ಪ್ರತಿ ಮನೆಯಲ್ಲೊಬ್ಬ ಕಲಾವಿದ ಇದ್ದು ಯಕ್ಷಗಾನ ರಂಗವನ್ನು ಪೂಜಿಸುವ ರೀತಿಯಲ್ಲಿ ಒಪ್ಪಿಕೊಂಡು, ಅಪ್ಪಿಕೊಂಡ ಜಿಲ್ಲೆ ಉತ್ತರಕನ್ನಡವಾಗಿದೆ. ಶಾಸ್ತ್ರಕ್ಕೆ ಅನುಗುಣವಾಗಿ ರಾಗ ಸಂಯೋಜನೆಯೊಂದಿಗೆ ಯಕ್ಷಗಾನ ನಡೆಯಬೇಕು. ಯಕ್ಷಗಾನ ರಂಗವಾಗಿ ಮನೋರಂಜನೆ, ವಾಣಿಜ್ಯ ರಂಗವಾಗಿ ಸ್ವೀಕರಿಸಬಾರದು. ಯಕ್ಷಗಾನ ಪ್ರಾವಿತ್ರ್ಯತೆ ಹೊಂದಿದೆ. ನಾಟ್ಯ, ಮಾತುಗಾರಿಕೆ, ಚಿಂತನೆ, ವೇಷಭೂಷಣ ಹೊಂದಿದೆ. ಶ್ರೇಷ್ಠವಾದ ಕಲೆಯಾಗಿ ಗುರುತಿಸಿಕೊಂಡಿದೆ ಎಂದರು.

ಯಕ್ಷ ಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ ಸ್ವಾಗತಿಸಿದರು. ಪತ್ರಕರ್ತ ನಾಗರಾಜ ಮತ್ತಿಗಾರ ಕೃತಿ ಕುರಿತು ಮಾತನಾಡಿದರು. ಶಂಕರ ಭಟ್ಟ ಉಂಚಳ್ಳಿ ಸನ್ಮಾನ ಪತ್ರ ವಾಚಿಸಿದರು. ಯಕ್ಷ ಶಾಲ್ಮಲಾದ ಕಾರ್ಯದರ್ಶಿ ನಾಗರಾಜ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಪ್ರವೀಣ ಹೆಗಡೆ ಕೊಡ್ನಗದ್ದೆ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಡಿ ಮಕ್ಕಳಿಗೆ ಸೆಗಣಿ ತೆಗೆಯುವ ಕೆಲಸ!
ಮಂಜನಾಡಿ ಗುಡ್ಡ ಕುಸಿತ ಪ್ರಕರಣ: ತಾಂತ್ರಿಕ ತನಿಖೆ ಆರಂಭ