- ದಾವಣಗೆರೆಗೆ ಉಪ ಲೋಕಾಯುಕ್ತರ ಭೇಟಿ ಪರಿಣಾಮ । ಅನೇಕ ಅಧಿಕಾರಿಗಳ ವಿರುದ್ಧ ಕೇಸ್ - - -
ಕನ್ನಡಪ್ರಭ ವಾರ್ತೆ ದಾವಣಗೆರೆಚನ್ನಗಿರಿ ತಾಲೂಕು ಸೂಳೆಕೆರೆ 5447.10 ಎಕರೆ ವಿಸ್ತೀರ್ಣ ಹೊಂದಿದ್ದು, ಚಿಕ್ಕೋಡಾ ಹಿನ್ನೀರಿನಲ್ಲಿ 146 ಎಕರೆಯಷ್ಟು ಕೆರೆ ಜಾಗ ಒತ್ತುವರಿಯಾಗಿದ್ದನ್ನು ತೆರವುಗೊಳಿಸಲಾಗಿದೆ. ಅಲ್ಲದೇ, ಕೆರೆ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಏ.22ರಿಂದ ಐದು ದಿನ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ಆಡಳಿತದಲ್ಲಿ ನ್ಯೂನತೆ ಕಂಡುಬಂದ ಪ್ರಕರಣ ಪತ್ತೆ ಮಾಡಿದ್ದರು. 13 ವಿವಿಧ ಇಲಾಖೆ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ, ಅನುಪಾಲನಾ ವರದಿ ನೀಡಲು ಸೂಚಿಸಿದ್ದರು. ಈ ಹಿನ್ನೆಲೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಉಪ ಲೋಕಾಯುಕ್ತರು, ಅಪರ ನಿಬಂಧಕರು, ಉಪ ನಿಬಂಧಕರ ಭೇಟಿ ಸಂದರ್ಭದಲ್ಲಿ ಸೂಳೆಕೆರೆ ಒತ್ತುವರಿಯಾಗಿದ್ದು ಕಂಡುಬಂದ ಹಿನ್ನೆಲೆ ಕ್ರಮ ಕೈಗೊಳ್ಳಲಾಗುತ್ತಿದೆ.27 ಅಧಿಕಾರಿಗಳ ವಿರುದ್ಧ ದೂರು:
ಸೂಳೆಕರೆಯ ಹೂಳು ತೆಗೆದು, ಹೆಚ್ಚು ನೀರು ಸಂಗ್ರಹಿಸಲು ಅವಕಾಶ ಇದೆ. ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಪರಿಸರ ಸಂರಕ್ಷಣೆ ಸೇರಿದಂತೆ ಸುತ್ತಮುತ್ತಲಿನ 41 ಗ್ರಾಮಗಳ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವುದು, ಶೌಚಾಲಯದ ನೀರನ್ನು ಕೆರೆಗೆ ಬಿಡದಂತೆ ಕ್ರಮ ಕೈಗೊಳ್ಳಬೇಕು. ಹೊನ್ನಾಳಿ ಉಪ ವಿಭಾಗಾಧಿಕಾರಿಗಳು, ಚನ್ನಗಿರಿ ತಹಸೀಲ್ದಾರ್, ಪಂಚಾಯತ್ ರಾಜ್ ಎಂಜಿನಿಯರಿಂಗ್, ಗ್ರಾಮೀಣ ನೀರು ಪೂರೈಕೆ, ಜಲ ಸಂಪನ್ಮೂಲಕ, ಪರಿಸರ, ಪ್ರವಾಸೋದ್ಯಮ ಇಲಾಖೆ, ಗ್ರಾಪಂ ಪಿಡಿಒ ಸೇರಿದಂತೆ 12 ನ್ಯೂನತೆ ಉಲ್ಲೇಖಿಸಿ, 27 ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ.ಹಿರಿಯ ಭೂ ವಿಜ್ಞಾನಿ ಅಧಿಕಾರಿ ಮೇಲೆ ದೂರು:
ದಾವಣಗೆರೆ ತಾಲೂಕಿನ ಬುಳ್ಳಾಪುರ, ಪಂಜೇನಹಳ್ಳಿ, ಹೆಬ್ಬಾಳ್, ಆಲೂರು ಸರ್ವೆ ನಂಬರ್‌ಗಳ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಬಫರ್ ಝೋನ್, ಗಡಿ ನಾಶ, ಮಿನರಲ್ ಸಾಗಣಿ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ 36 ನ್ಯೂನ್ಯತೆಗಳನ್ನು ಉಲ್ಲೇಖಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಬೆಸ್ಕಾಂ, ಸಾರಿಗೆ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ 18 ಅಧಿಕಾರಿಗಳ ಮೇಲೆ ದೂರು ದಾಖಲಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಉಪ ಲೋಕಾಯುಕ್ತರು ಭೇಟಿ ನೀಡಿದ್ದಾಗ ಸರಿಯಾಗಿ ಕಡತ ತೋರಿಸದ ಮತ್ತು ನಿರ್ವಹಣೆ ಮಾಡದ 15 ವಿವಿಧ ನ್ಯೂನತೆ ಪರಿಗಣಿಸಿ ಹಿರಿಯ ಭೂ ವಿಜ್ಞಾನಿ ಅಧಿಕಾರಿ ಮೇಲೆ ದೂರು ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.ಪಾಲಿಕೆ ಇಇ, ಉಪ ಆಯುಕ್ತರ ಮೇಲೆ ದೂರು:
ಮಹಾನಗರ ಪಾಲಿಕೆ ಮೇಲೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಸ್ಕರಣೆ ಮತ್ತು ನಿರ್ವಹಣೆ ಲೋಪದೋಷ ಸೇರಿ 8 ನ್ಯೂನತೆ, ಪಾಲಿಕೆಯಲ್ಲಿ ಹಾಜರಾತಿ ವ್ಯತ್ಯಾಸ, ಖಾಸಗಿ ವ್ಯಕ್ತಿಯಿಂದ ಕಡತ ನಿರ್ವಹಣೆ ಸೇರಿ 15 ವಿವಿಧ ನ್ಯೂನತೆ ಗಮನಿಸಿ, ಮೊದಲ ದೂರು ಪಾಲಿಕೆ ಇಇ, ಇನ್ನೊಂದು ಉಪ ಆಯುಕ್ತರ ಮೇಲೆ ದೂರು ದಾಖಲಿಸಿ, ಮುಂದಿನ ಕ್ರಮಕ್ಕೆ ಲೋಕಾಯುಕ್ತ ಸಂಸ್ಥೆ ಮುಂದಾಗಿದೆ.ಎಪಿಎಂಸಿ ಕಾರ್ಯದರ್ಶಿ, ಜಿಲ್ಲಾ ಸರ್ಜನ್ ಮೇಲೆ ದೂರು:
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಂಗಡಿಯವರು ಬಿಳಿ ಚೀಟಿ ಮೇಲೆ ಬಿಲ್ ಬರೆಯುವುದು ಮತ್ತು ರೈತರಿಂದ ಶೇ.3ರಿಂದ 8ರಷ್ಟು ಕಮೀಷನ್ ಪಡೆಯುವುದು, ಅಲ್ಲಿನ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸದಿರುವುದು ಸೇರಿ 15 ನ್ಯೂನತೆ ಗಮನಿಸಿ ಎಪಿಎಂಸಿ ಕಾರ್ಯದರ್ಶಿ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ನಿತ್ಯವೂ 1500ಕ್ಕಿಂತ ಹೆಚ್ಚು ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಪ್ರಮುಖ ಪರೀಕ್ಷಾ ಸಾಧನಗಳಿಲ್ಲ, ಎಂಆರ್‌ಐ ಇಲ್ಲ, ಮಹಿಳೆಯರಿಗೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಇಲ್ಲ, ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ವೇಳೆ ತ್ಯಾಜ್ಯವನ್ನು ಚರಂಡಿಗೆ ನೇರವಾಗಿ ಬಿಡಲಾಗುತ್ತಿದೆ. ಶೌಚಾಲಯಗಳ ಸ್ವಚ್ಛತೆ ಇಲ್ಲ, ಆಹಾರ ವಿತರಣೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳದ್ದು ಸೇರಿದಂತೆ ವಿವಿಧ 20 ನ್ಯೂನತೆಗಳನ್ನು ಗಮನಿಸಿ ಜಿಲ್ಲಾ ಸರ್ಜನ್ ಮೇಲೆ ದೂರು ದಾಖಲಿಸಲಾಗಿದೆ.ತಹಸೀಲ್ದಾರ್ ವಿರುದ್ಧವೂ ದೂರು:
ದಾವಣಗೆರೆ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ವೇಳೆ ಸಿಬ್ಬಂದಿ ಗೈರು ಹಾಜರಾಗಿದ್ದರೂ ಹಾಜರಾತಿ ವಹಿಯಲ್ಲಿ ಸಹಿ ಮಾಡಿರಲಿಲ್ಲ ಮತ್ತು ರಜೆ ದಾಖಲು ಮಾಡದೇ ಖಾಲಿ ಬಿಡಲಾಗಿತ್ತು. ವಿವಿಧ 4 ಅಂಶಗಳನ್ನು ಪರಿಗಣಿಸಿ ತಹಸೀಲ್ದಾರರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ.- - -
(ಬಾಕ್ಸ್-1) * ಸಾರಿಗೆ ಅಧಿಕಾರಿಗಳ ಮೇಲೆ ದೂರುಸಾರಿಗೆ ಇಲಾಖೆಗೆ ಭೇಟಿ ನೀಡಿದ ವೇಳೆ ಎಫ್‍ಸಿ ಇಲ್ಲದ ವಾಹನಗಳು, ಮಿನರಲ್ ಸಾಗಣೆ ಮಾಡುವಾಗ ತಪಾಸಣೆ ಮಾಡಿದ ಬಗ್ಗೆ, ಶಾಲಾ ವಾಹನಗಳು ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿ ಅಳವಡಿಕೆ, ಷರತ್ತುಗಳ ಪೂರೈಸಿದ ಮಾಹಿತಿ, ಖನಿಜ ಸಾಗಣೆ ವಾಹನಗಳ ಪರ್ಮಿಟ್ ನೀಡಿಕೆ, ಖನಿಜ ಸಾಗಣೆ ವಾಹನಗಳಿಗೆ ಎಂಡಿಪಿ ಮತ್ತು ಜಿಪಿಎಸ್ ಅಳವಡಿಕೆ, ಖಾಸಗಿ ವಾಹನಗಳ ಮೇಲೆ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಅಧ್ಯಕ್ಷರು, ಕಾರ್ಯದರ್ಶಿ ಎಂದು ನಂಬರ್ ಪ್ಲೇಟ್ ಮೇಲೆ ಹೆಸರು ಅಳವಡಿಸಿದ ವಾಹನಗಳ ಮೇಲೆ ತೆಗೆದುಕೊಂಡ ಕ್ರಮದ ಮಾಹಿತಿ ಸೇರಿದಂತೆ ಸರಿಯಾದ ಮಾಹಿತಿ ನೀಡದ ಕಾರಣ 12 ನ್ಯೂನತೆ ಗುರುತಿಸಿ ಸಾರಿಗೆ ಅಧಿಕಾರಿಗಳ ಮೇಲೆ ದೂರು ದಾಖಲಿಸಲಾಗಿದೆ.
- - -(ಬಾಕ್ಸ್-2) * ಕಾರ್ಮಿಕ ಆಯುಕ್ತ, ಉಪ ನೋಂದಣಾಧಿಕಾರಿ ಮೇಲೆ ದೂರು
ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಸಮರ್ಪಕ ಮಾಹಿತಿ ಇಲ್ಲ, ಸಹಾಯಕ ಆಯುಕ್ತರಿಗೆ 16 ಅರ್ಜಿಗಳ ಆದೇಶಕ್ಕೆ ಇಟ್ಟಿದ್ದರೂ ಆದೇಶ ಮಾಡಿರುವುದಿಲ್ಲ. ನೋಂದಾಯಿತ ಅಂಗಡಿಗಳು ಹೆಚ್ಚಿದ್ದರೂ ಕೆಲವು ಮಾತ್ರ ತಪಾಸಣೆ ಮಾಡಲಾಗಿದೆಯೆಂಬ ನ್ಯೂನತೆ ಸೇರಿದಂತೆ 9 ಅಂಶಗಳ ಗಮನಿಸಿ, ಕಾರ್ಮಿಕ ಇಲಾಖೆ ಸಹಾಯಕ ಕಾರ್ಮಿಕ ಆಯುಕ್ತರ ಮೇಲೆ ದೂರು ದಾಖಲಿಸಲಾಗಿದೆ. ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಗದು ನಿರ್ವಹಣೆ ಸರಿಯಾಗಿ ಮಾಡಿಲ್ಲ. ಸಿಬ್ಬಂದಿ ಹಾಜರಾತಿ ವಹಿಯಲ್ಲಿ ವೈಟ್ನರ್‌ನಿಂದ ತಿದ್ದಲಾಗಿದೆ. ಹೊರಗುತ್ತಿಗೆ ಸಿಬ್ಬಂದಿ ವೇತನಕ್ಕಿಂತ ಹೆಚ್ಚು ಯುಪಿಐನಲ್ಲಿ ವಹಿವಾಟು ಮಾಡಿರುವುದು ಸೇರಿದಂತೆ 8 ಅಂಶ ಉಲ್ಲೇಖಿಸಿ ಉಪನೊಂದಣಾಧಿಕಾರಿಗಳ ಮೇಲೆ ದೂರು ದಾಖಲಿಸಲಾಗಿದೆ.- - -
(ಬಾಕ್ಸ್-3)* ಹಿರಿಯ ಫಾರ್ಮಸಿ ಅಧಿಕಾರಿ ಮೇಲೆ ದೂರು
ಜಿಲ್ಲಾ ಔಷಧ ಉಗ್ರಾಣದಲ್ಲಿ ಔಷಧ ನಾಶಪಡಿಸುವಾಗ ನಿಯಮ ಪಾಲಿಸುತ್ತಿಲ್ಲ, ಅವದಿ ಮೀರಿದ ಔಷಧಿಗಳಿವೆ. ಸಿಬ್ಬಂದಿ ಗುರುತಿನ ಚೀಟಿ ಧರಿಸಿಲ್ಲ ಎಂಬಿತ್ಯಾದಿ 4 ನ್ಯೂನ್ಯತೆ ಪರಿಗಣಿಸಿ ಹಿರಿಯ ಫಾರ್ಮಸಿ ಅಧಿಕಾರಿ ಮೇಲೆ ದೂರು ದಾಖಲಿಸಲಾಗಿದೆ. ಬಾಬು ಜಗಜೀವನ್ ರಾಂ ಭವನವನ್ನು ಕೋಟ್ಯಾಂತರ ರು. ತೆರಿಗೆ ಹಣದಿಂದ ನಿರ್ಮಿಸಿದ್ದರೂ ಇದರ ಉಪಯೋಗ ಮಾಡುವಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇದನ್ನು ಪರಿಗಣಿಸಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಮೇಲೆ ದೂರು ದಾಖಲು ಮಾಡಲಾಗಿದೆ.- - -
-(ಸಾಂದರ್ಭಿಕ ಚಿತ್ರ)