ಕೊಟ್ಟೂರಲ್ಲಿ ಆರಂಭಗೊಳ್ಳದ ಇಂದಿರಾ ಕ್ಯಾಂಟೀನ್

KannadaprabhaNewsNetwork |  
Published : May 27, 2025, 12:22 AM IST
ಕೊಟ್ಟೂರಿನಲ್ಲಿ  ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಗೆಂದೆ ಸಿದ್ದಗೊಂಡಿರುವ ಕಟ್ಟಡ  | Kannada Prabha

ಸಾರಾಂಶ

ಬಡ ಕೂಲಿಕಾರರು ಮತ್ತು ಇತರ ಮಧ್ಯಮ ವರ್ಗದವರ ಹಸಿದ ಹೊಟ್ಟೆಗೆ ಕೈಗೆಟುಕುವ ದರದಲ್ಲಿ ಉಪಾಹಾರ, ಊಟ ನೀಡುವ ಯೋಜನೆಯನ್ನು ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ಅನುಷ್ಠಾನಗೊಳಿಸಿದೆ. ಆದರೆ ಆ ಭಾಗ್ಯದಿಂದ ಕೊಟ್ಟೂರಿನ ಜನತೆಯ ವಂಚಿತಗೊಂಡಿದ್ದಾರೆ.

ಕಟ್ಟಡ ನಿರ್ಮಾಣ । ಬಡವರ ಹಸಿವು ನೀಗಿಸಲು ಕೂಡಿ ಬರದ ಮುಹೂರ್ತ

ಜಿ. ಸೋಮಶೇಖರ

ಕನ್ನಡಪ್ರಭ ವಾರ್ತೆ ಕೊಟ್ಟೂರು

ಬಡ ಕೂಲಿಕಾರರು ಮತ್ತು ಇತರ ಮಧ್ಯಮ ವರ್ಗದವರ ಹಸಿದ ಹೊಟ್ಟೆಗೆ ಕೈಗೆಟುಕುವ ದರದಲ್ಲಿ ಉಪಾಹಾರ, ಊಟ ನೀಡುವ ಯೋಜನೆಯನ್ನು ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ಅನುಷ್ಠಾನಗೊಳಿಸಿದೆ. ಆದರೆ ಆ ಭಾಗ್ಯದಿಂದ ಕೊಟ್ಟೂರಿನ ಜನತೆಯ ವಂಚಿತಗೊಂಡಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಕುರಿತು 8 ತಿಂಗಳ ಹಿಂದೆ ಜಿಲ್ಲಾಡಳಿತ ಯೋಜನೆ ರೂಪಿಸಿ ಈ ಸಂಬಂಧ ಬೆಂಗಳೂರು ಮೂಲದ ಎಕ್ಸಿಲ್ ಕಂಪನಿಗೆ ಆರಂಭಗೊಳಿಸಲು ಎಲ್ಲಾ ಬಗೆಯ ಪರವಾನಗಿ ನೀಡಿತು.

ಮೊದ ಮೊದಲು ಕೆಲ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ತಡ ಮಾಡದೇ ನಿರ್ಮಿಸಿದ್ದರಿಂದ ಜನತೆ ಶೀಘ್ರದಲ್ಲಿ ಆರಂಭಗೊಳ್ಳುತ್ತದೆ ಎಂಬ ಆಶಯ ಹೊಂದಿದ್ದರು. ಕಟ್ಟಡವನ್ನು ಅರ್ಧಂಬರ್ಧ ನಿರ್ಮಿಸಿ ಯಾವುದೇ ತೆರನಾದ ಚಟುವಟಿಕೆ ಕೈಗೊಳ್ಳದೆ ಪರವಾನಗಿ ಪಡೆದವರು ನಾಪತ್ತೆಯಾಗಿದ್ದಾರೆ.

ಅಕ್ಕಪಕ್ಕದ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡರೂ ಕೊಟ್ಟೂರು ತಾಲೂಕಿನಲ್ಲಿ ಮಾತ್ರ ಇನ್ನೂ ಇಂದಿರಾ ಕ್ಯಾಂಟೀನ್ ಆರಂಭಗೊಂಡಿಲ್ಲ. ಈ ಕುರಿತು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಹ ಯಾವುದೇ ಮಾಹಿತಿ ಇಲ್ಲವಾಗಿದೆ. ಇದರಿಂದ ಬೇಸತ್ತ ಕೂಲಿ ಕಾರ್ಮಿಕ ಮತ್ತು ಬಡಜನತೆ ಕೊಟ್ಟೂರಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳುತ್ತಿಲ್ಲ ಯಾಕೆ ಎಂದು ಜಿಲ್ಲಾಡಳಿತವನ್ನು ಸತತವಾಗಿ ಪ್ರಶ್ನಿಸತೊಡಗಿದ್ದಾರೆ.

ಮೊದ ಮೊದಲು ಜನರ ಕೂಗಿಗೆ ಸ್ಪಂದಿಸಿದ ಅಧಿಕಾರಿಗಳು ಕೆಲ ದಿನಗಳಲ್ಲಿ ಆರಂಭವಾಗುತ್ತದೆ ಎಂಬ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಜನರ ಹಸಿವು ನೀಗಿಸುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಪಟ್ಟಣದಲ್ಲಿ ಶೀಘ್ರದಲ್ಲಿ ಆರಂಭಗೊಳ್ಳಬೇಕು. ಇಂದಿರಾ ಕ್ಯಾಂಟೀನ್ ಆರಂಭಗೊಳ್ಳುತ್ತಿಲ್ಲ ಏಕೆ?, ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಕೂಡಲೇ ಗಮನವಹಿಸಲಿ ಎಂದು ಜನರು ಆಗ್ರಹಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ನ್ನು ಆರಂಭಗೊಳಿಸಲು ಅಧಿಕಾರಿಗಳು ಅನವಶ್ಯಕವಾಗಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿ ಅಲ್ಲ. ಗ್ರಾಮೀಣ ಮತ್ತು ಬಡ ಜನತೆಯ ಹಸಿವನ್ನು ನೀಗಿಸಲು ಅನುಕೂಲವಾಗುವ ಈ ಕ್ಯಾಂಟೀನನ್ನು ಕೂಡಲೇ ಆರಂಭಿಸಬೇಕಿದೆ ಎನ್ನುತ್ತಾರೆ ಕೂಲಿಕಾರ್ಮಿಕ ಶಿವಮೂರ್ತಿ.ಕೊಟ್ಟೂರಿನಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕೆಂಬ ಯೋಜನೆ ರೂಪಿಸಿದ್ದ ಜಿಲ್ಲಾಡಳಿತದ ಸೂಚನೆ ಮೇರೆಗೆ ಕಟ್ಟಡದ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಕೆಲ ಕಾರಣಗಳಿಂದಾಗಿ ಕಟ್ಟಡ ಕಾರ್ಯ ಪೂರ್ಣಗೊಂಡಿರಲಿಲ್ಲ. ಇದೀಗ ಎಲ್ಲಾ ಸಮಸ್ಯೆಗಳು ಬಗೆ ಹರಿದಿದ್ದು, ಮೇ 29ರಂದು ಇಂದಿರಾ ಕ್ಯಾಂಟೀನ್ ಕೊಟ್ಟೂರಿನಲ್ಲಿ ಖಂಡಿತವಾಗಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್ ತಿಳಿಸಿದ್ದಾರೆ.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ