ಹುಬ್ಬಳ್ಳಿ: ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳಿವೆ. ಕೆರೆಗಳು ಕುಡಿಯುವ ನೀರಿನ ಮೂಲಗಳಾಗಿವೆ. ಅವುಗಳಿಗೆ ತಡೆಗೋಡೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯರಿನಾರಾಯಣಪುರ ಗ್ರಾಮದ ಕೆರೆಗೆ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಮಳೆಗಾಲದ ಸಂದರ್ಭದಲ್ಲಿ ಕೆರೆಗಳು ಭರ್ತಿಯಾಗುತ್ತವೆ. ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಕ್ಕಳು ಓಡಾಡದಂತೆ ಮೊದಲೇ ಸಾರ್ವಜನಿಕರು, ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿನ ಕೆರೆಗಳಿಗೆ ತಡೆಗೋಡೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಸೂಚನೆ ನೀಡಲಾಗಿದೆ. ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನೂ ನೀಡಲಾಗಿದೆ ಎಂದರು.
ಗುಡೇನಕಟ್ಟಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಯರಿನಾರಾಯಣಪುರ ಗ್ರಾಮದ ಕೆರೆಗೆ ಈಗಾಗಲೇ ₹50 ಲಕ್ಷ ಅನುದಾನ ನೀಡಲಾಗಿತ್ತು. ಕೆರೆ ಕೂಡ ಬಹಳಷ್ಟು ದೊಡ್ಡದಾಗಿದೆ. ತಡೆಗೋಡೆ ನಿರ್ಮಾಣ ಮಾಡಿದರೂ ಮಕ್ಕಳು ಕೆರೆ ಕಡೆಗೆ ಹೋಗದಂತೆ ಪಾಲಕರು ಎಚ್ಚರ ವಹಿಸಬೇಕು ಎಂದರು.ಅಂಗನವಾಡಿ ಸ್ಥಳಾಂತರ: ಯರಿನಾರಾಯಣಪುರ ಗ್ರಾಮದ ಕೆರೆಯ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರ ಮಾಡಲಾಗುವುದು. ಇದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ಮಕ್ಕಳನ್ನು ಕಾಪಾಡುವುದು ಪಾಲಕರು ಮತ್ತು ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಅಂಗನವಾಡಿ ಕೇಂದ್ರಗಳ ಬಗ್ಗೆ ಗಮನ ಹರಿಸುವುದು ಅಗತ್ಯವಿದೆ ಎಂದರು.
ಇದೇ ವೇಳೆ, ಸಂತೋಷ ಲಾಡ್ ಫೌಂಡೇಶನ್‌ನಿಂದ ಮೃತರ ಕುಟುಂಬಸ್ಥರಿಗೆ ₹4 ಲಕ್ಷ ಸಹಾಯಧನ ವಿತರಣೆ ಮಾಡಿದರು. ಕುಟುಂಬಸ್ಥರು ಹೆಚ್ಚಿನ ಧೈರ್ಯ ತಂದುಕೊಳ್ಳಬೇಕು ಎಂದು ಸಾಂತ್ವನ ತಿಳಿಸಿದರು. ಇದೇ ವೇಳೆ ಗ್ರಾಮದ ಸುಂದರವ್ವ ಅಗಸರ ಅವರ ಪಿಂಚಣಿ ಸಮಸ್ಯೆ ಬಗೆಹರಿಸುವಂತೆ ತಹಸೀಲ್ದಾರ್ ರಾಜು ಮಾವರಕರ ಮತ್ತು ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ ಎಸ್. ಅವರಿಗೆ ಸೂಚಿಸಿದರು.
ಗುಡೇನಕಟ್ಟಿ ಪಿಡಿಒ ಅಮಾನತು
ಅವಳಿ ಮಕ್ಕಳ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸಂತೋಷ ಲಾಡ್ ಶನಿವಾರ ಕುಂದಗೋಳ ತಾಲೂಕಿನ ಯರಿನಾರಾಯನಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಸಾರ್ವಜನಿಕರ ಸುರಕ್ಷತೆಗೆ ಸರಿಯಾದ ಕ್ರಮಕೈಗೊಳ್ಳದ ಮತ್ತು ಗ್ರಾಮದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸದೆ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಪಿಡಿಒ ತಕ್ಷಣವೇ ಅಮಾನತುಗೊಳಿಸಲು ಆದೇಶಿಸಿದ್ದರು.