ಮೊಳಕೆಯೊಡೆಯದ ಮೆಕ್ಕೆಜೋಳ ಬೀಜ, ರೈತರು ಕಂಗಾಲು

KannadaprabhaNewsNetwork |  
Published : Jun 22, 2025, 01:18 AM IST
ಕೊಟ್ಟೂರು ತಾಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಬಿತ್ತನೆ ಮಾಡಲು ತಂದಿದ್ದ ಖಾಸಗಿ ಕಂಪನಿಯ ಮೆಕ್ಕೆಜೋಳ ಬೀಜ  ಬಿತ್ತಿ ಏನು ಬೆಳವಣಿಗೆಕಾಣದೆ ಹೊಲದಲ್ಲಿ ನಿಂತು ಗೋಳಾಡಿದ ರೈತರು   | Kannada Prabha

ಸಾರಾಂಶ

ಕೊಟ್ಟೂರು ತಾಲೂಕಿನ ಗಾಣಗಟ್ಟಿ ಹಾಗೂ ಸುತ್ತಲಿನ ಅನೇಕ ರೈತರು ರಾಣಿಬೆನ್ನೂರು ಪಟ್ಟಣದಿಂದ ಖರೀದಿಸಿ ತಂದು ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೀಜ ಮೊಳಕೆಯೊಡದೆ ಇರುವುದರಿಂಜ ರೈತರು ಕಂಗಾಲಾಗಿದ್ದಾರೆ. ಗಾಣಗಟ್ಟಿ ಗ್ರಾಮವೊಂದರಲ್ಲಿಯೇ ೨೦ಕ್ಕೂ ಹೆಚ್ಚು ರೈತರು ರಾಣಿಬೆನ್ನೂರಿನ ಖಾಸಗಿ ಸೀಡ್ಸ್ ಅಂಗಡಿಯಿಂದ ಬೀಜ ಖರೀದಿಸಿ ತಂದಿದ್ದರು.

ಕೊಟ್ಟೂರು: ತಾಲೂಕಿನ ಗಾಣಗಟ್ಟಿ ಹಾಗೂ ಸುತ್ತಲಿನ ಅನೇಕ ರೈತರು ರಾಣಿಬೆನ್ನೂರು ಪಟ್ಟಣದಿಂದ ಖರೀದಿಸಿ ತಂದು ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೀಜ ಮೊಳಕೆಯೊಡೆಯದೆ ಇರುವುದರಿಂದ ರೈತರು ಕಂಗಾಲಾಗಿದ್ದಾರೆ.

ಗಾಣಗಟ್ಟಿ ಗ್ರಾಮವೊಂದರಲ್ಲಿಯೇ ೨೦ಕ್ಕೂ ಹೆಚ್ಚು ರೈತರು ರಾಣಿಬೆನ್ನೂರಿನ ಖಾಸಗಿ ಸೀಡ್ಸ್ ಅಂಗಡಿಯಿಂದ ನಿಸರ್ಗ ೯೯ ಎಂಬ ಹೆಸರಿನ ಮೆಕ್ಕೆಜೋಳ ಬೀಜದ ೨೨೦ ಪ್ಯಾಕೆಟ್‌ ಖರೀದಿಸಿ ತಂದು ೧೫ ದಿನಗಳ ಹಿಂದೆ ಬಿತ್ತನೆ ಮಾಡಿದ್ದರು. ಆದರೆ ಎಂಟು ದಿನಕ್ಕೆ ಮೊಳಕೆಯೊಡೆದು ಮೇಲೇಳಬೇಕಾದ ಸಸಿಗಳು ಎಲ್ಲಿಯೂ ಕಾಣುತ್ತಿಲ್ಲ. ಎಲ್ಲೋ ಒಂದೆರಡು ಸಸಿ ಹೊಲದಲ್ಲಿ ಕಾಣುತ್ತಿದೆ. ಇಷ್ಟು ದಿನಗಳಾದರೂ ಬಿತ್ತನೆ ಮಾಡಿದ್ದ ಬೀಜ ಹುಟ್ಟದೇ ಇರುವುದನ್ನು ಮನಗಂಡ ರೈತರು ಇದೀಗ ಮೋಸ ಹೋದೆವು ಎಂದು ಅಲವತ್ತುಕೊಳ್ಳುತ್ತಿದ್ದಾರೆ.

ರೈತರು ಖರೀದಿ ಮಾಡಿದ್ದಕ್ಕೆ ಅಂಗಡಿ ಹೆಸರಿನ ಜಿಎಸ್‌ಟಿ ಸಂಖ್ಯೆ ಇರುವ ರಸೀದಿ ಇದೆ. ಕ್ವಿಂಟಲ್‌ಗೆ ₹೬೦೦ರಂತೆ ಒಬ್ಬೊಬ್ಬ ರೈತ ೧೫ರಿಂದ ೩೦ ಪ್ಯಾಕೆಟ್‌ಗಳನ್ನು ಖರೀದಿಸಿದ್ದಾರೆ. ಗ್ರಾಮದ ರೈತರಾದ ಹನುಮಂತಪ್ಪ, ಮಾಂತೇಶ, ಮಾರುತಿ, ಪ್ರವೀಣ, ಎನ್. ಮಾಂತೇಶ, ವೆಂಕಟೇಶ, ಬಸವರಾಜ. ಮಾಯಪ್ಪ, ರಾಜ, ಬಂಡ್ರಿ ಮಹೇಶ, ಆನಂದಪ್ಪ ಇತರ ರೈತರು ಅಧಿಕ ಇಳುವರಿ ನೀಡುವ ಬೀಜ ಎಂದು ನಂಬಿ, ಗ್ರಾಮದಲ್ಲಿ ಮೊದಲ ಮಳೆ ಬೀಳುತ್ತಿದ್ದಂತೆ ಒಟ್ಟಾಗಿ ರಾಣಿಬೆನ್ನೂರಿಗೆ ಹೋಗಿ ಬೀಜ ತಂದಿದ್ದರು. ಬಿತ್ತನೆ ಹೊತ್ತಲ್ಲಿ ಹದವಾದ ಮಳೆಯೂ ಆಗಿತ್ತು. ಉತ್ತಮ ಇಳುವರಿ ಬರಲೆಂದು ದೇವರಲ್ಲಿ ಪ್ರಾರ್ಥಿಸಿದ್ದರು. ಆದರೆ ೧೫ ದಿನಗಳಾದರೂ ಸಸಿಗಳು ಹುಟ್ಟಿಲ್ಲ.

ಕಳಪೆ ಬೀಜ ಮಾರಾಟದ ಹಿನ್ನೆಲೆಯಲ್ಲಿ ರಾಣಿಬೆನ್ನೂರಿನ ರೈತರ ದೂರು ಆಧರಿಸಿ ಮೂರು ಸೀಡ್ಸ್ ಅಂಗಡಿ ಮಾಲೀಕರ ವಿರುದ್ಧ ಎಫ್‌ಐಆರ್ ಆಗಿದೆ. ಅಂಗಡಿ ಮಾಲೀಕರು ತಲೆಮರೆಸಿಕೊಂಡಿದ್ದಾರೆ. ನಮ್ಮಲ್ಲಿ ಒಂದಿಬ್ಬರು ಕಳಪೆ ಬೀಜ ಬಂದಿರುವ ಕುರಿತು ಹೇಳಲು ಹೋದಾಗ ಈ ವಿಷಯ ಗೊತ್ತಾಗಿದೆ ಎಂದು ರೈತರು ಹೇಳಿದರು.

ಅಲ್ಲಿನ ಸೀಡ್ಸ್ ಅಂಗಡಿ ಮಾಲೀಕರು ಹೊರ ರಾಜ್ಯಗಳಿಂದ ಬೀಜೋಪಚಾರವಿಲ್ಲದ, ಗುಣಮಟ್ಟವಲ್ಲದ ಸಾಧಾರಣ ಮೆಕ್ಕೆಜೋಳ ತಂದು ತಮ್ಮ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುವ ದಂಧೆ ಮಾಡುತ್ತಾರೆ. ಅವರಲ್ಲಿ ದೂರದ ಜಿಲ್ಲೆಗಳ ರೈತರೇ ಹೆಚ್ಚು ಖರೀದಿ ಮಾಡುವುದರಿಂದ ಪ್ರಕರಣ ಬಯಲಿಗೆ ಬರುವುದೇ ಇಲ್ಲ. ಬೀಜ ಖರೀದಿಗಾಗಿ ₹೧೫ರಿಂದ ₹೨೦ ಸಾವಿರ, ಜತೆಗೆ ಹೋಗಿ ಬರುವ ಖರ್ಚು ಮಾಡಿಕೊಂಡಿರುವ ರೈತರು ಮತ್ತೆ ಅಲ್ಲಿಗೆ ಹೋಗುವುದೇ ಇಲ್ಲ. ಈಗಾಗಲೇ ಕೆಲವರು ಹೊಲ ಹರಗಿ ಮತ್ತೊಮ್ಮೆ ಬಿತ್ತನೆ ಮಾಡಿದ್ದಾರೆ. ಕಳೆದ ವರ್ಷಗಳಲ್ಲಿ ಅಲ್ಲಿಂದ ತಂದ ಬೀಜದಿಂದ ಉತ್ತಮ ಇಳುವರಿ ಬಂದಿತ್ತು. ಈ ಬಾರಿ ಮೋಸ ಹೋದೆವು ಎಂದು ರೈತರು ಅಳಲು ತೋಡಿಕೊಂಡರು.

ತಾಲೂಕಿನಲ್ಲಿ ಮಳೆ ಬೆಳೆ, ಕಳಪೆ ಬೀಜ ವಿಚಾರವಾಗಿ ಇಲ್ಲಿನ ತಾಪಂ ಕೆಡಿಪಿ ಸಭೆಯಲ್ಲಿ ಶಾಸಕ ಕೆ. ನೇಮರಾಜ ನಾಯ್ಕ ಕೇಳಿದಾಗ, ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಲ್ಲಿ ಅಧಿಕೃತ ಅಂಗಡಿ, ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆಯಾದ ಬೀಜಗಳು ಕಳಪೆಯಿಲ್ಲ. ಆದರೆ ಬಹುತೇಕ ರೈತರು ರಾಣಿಬೆನ್ನೂರಿನಿಂದ ತಂದು ಬಿತ್ತಿರುವ ಮೆಕ್ಕೆಜೋಳ ಬೀಜ ಕಳಪೆಯಾಗಿದ್ದು, ಸಸಿ ಹುಟ್ಟಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಾಮದೇವ ಕೊಳ್ಳಿ ಮಾಹಿತಿ ನೀಡಿದರು.

ಹಿಂದಿನ ವರ್ಷಗಳಲ್ಲಿಯೂ ರಾಣಿಬೆನ್ನೂರಿನಿಂದ ಬೀಜ ತಂದು ಬಿತ್ತಿ ಉತ್ತಮ ಇಳುವರಿ ಪಡೆದಿದ್ದೆವು. ಅದರಂತೆ ಈ ಬಾರಿಯೂ ಅಲ್ಲಿಂದ ತಂದ ಬೀಜ ಬಿತ್ತಿದ್ದೇವೆ. ೧೫ ದಿನವಾದರೂ ಬೀಜ ಮೊಳಕೆಯೊಡೆದಿಲ್ಲ. ನಾವು ಮೋಸ ಹೋಗಿದ್ದೇವೆ. ಯಾರಿಗೆ ದೂರು ನೀಡಿದರೆ ಏನು ಪ್ರಯೋಜನ? ನಾವು ಖರೀದಿಸಿದ್ದ ಅಂಗಡಿ ಮಾಲೀಕ ಪರಾರಿಯಾಗಿದ್ದಾರೆ ಎಂದು ಗಾಣಗಟ್ಟಿಯ ರೈತ ಎಂ. ಹನುಮಂತಪ್ಪ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ