ಬಳ್ಳಾರಿ: ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪ್ರತ್ಯೇಕ ಭವನ ನಿರ್ಮಿಸಿ ಕೊಡಲು ಪೂರಕ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಕೆ.ಪ್ರಸಾದ್ ಭರವಸೆ ನೀಡಿದರು.
ಕಾರ್ಯನಿರತ ಪತ್ರಕರ್ತರು ದೈನಂದಿನ ಕೆಲಸಕ್ಕೆ ಸೂಕ್ತವಾದ ಭವನ ನಿರ್ಮಿಸಿಕೊಡುವ ಕುರಿತು ಈಗಾಗಲೇ ಪ್ರಸ್ತಾಪ ಮಾಡಲಾಗಿದೆ. ವಾರ್ತಾ ಇಲಾಖೆಯ ಹೆಸರಿನಲ್ಲಿ ಗುರುತಿಸಿ ಭವನ ನಿರ್ಮಿಸಿಕೊಡಲಾಗುವುದು. ಈ ಸಂಬಂಧ ಇಲಾಖೆ ಅಧಿಕಾರಿಗಳು ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಬೇರೆ ಜಿಲ್ಲೆಗಳಲ್ಲಿ ಪತ್ರಕರ್ತರಿಗೆಂದೇ ಪ್ರತ್ಯೇಕ ಭವನ ನಿರ್ಮಿಸಿಕೊಂಡಿದ್ದಾರೆ. ಬಳ್ಳಾರಿಯಲ್ಲಿ ಮಾತ್ರ ಅದು ಸಾಧ್ಯವಾಗಿಲ್ಲ. ಹೀಗಾಗಿ ಭವನ ನಿರ್ಮಾಣ ಅಗತ್ಯವಾಗಿದೆ ಎಂದು ಹೇಳಿದರು.
ಪತ್ರಕರ್ತರು ಬೇರೆಡೆ ತೆರಳಿ ಸುದ್ದಿ ಕಾರ್ಯಗಳಿಗೆ ತೆರಳುವಾಗ ಸುಸಜ್ಜಿತ ವಾಹನ ಸಮಸ್ಯೆಯಿದೆ. ಕೂಡಲೇ ಸೂಕ್ತ ವಾಹನ ವ್ಯವಸ್ಥೆ ಮಾಡಲಾಗುವುದು. ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ಸೇವೆ ನೀಡುವುದು, ಶಿಕ್ಷಣ ಸಂಸ್ಥೆಗಳಲ್ಲಿ ರಿಯಾಯಿತಿ ನೀಡುವುದು ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಪೂರಕ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮಾತನಾಡಿ, ಸಾಮಾಜಿಕ ಬದ್ಧತೆಯನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುವ ಪತ್ರಕರ್ತರು ಸಮಾಜದ ಕನ್ನಡಿಯಿದ್ದಂತೆ. ಪತ್ರಕರ್ತರ ಲೇಖನಿಗೆ ಬಹುದೊಡ್ಡ ಶಕ್ತಿಯಿದೆ. ಸಾರ್ವಜನಿಕರಲ್ಲಿ ಜನಾಭಿಪ್ರಾಯ ಮೂಡಿಸುವ ಸಮಾಜದ ತಪ್ಪುಗಳನ್ನು ತಿದ್ದು ಸರಿದಾರಿಗೆ ತರುವವರು ನೈಜ ಪತ್ರಕರ್ತರು ಎನಿಸಿಕೊಳ್ಳುತ್ತಾರೆ. ನಾವು ಬರೆಯುವ ಸುದ್ದಿ ಅಥವಾ ಲೇಖಕನ ಸಮಾಜಮುಖಿ ಕಾರ್ಯಕ್ಕೆ ಪೂರಕವಾಗಿದೆಯೇ ಎಂಬುದನ್ನು ಅರಿತು ಮುಂದಡಿ ಇಟ್ಟರೆ ಅದುವೇ ನಿಜವಾದ ಪತ್ರಿಕಾ ಧರ್ಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಘದ ರಾಜ್ಯ ಸಮಿತಿ ಸದಸ್ಯ ಎಚ್.ಬಸವರಾಜ್, ಖಜಾಂಚಿ ಕೆ.ಅಶೋಕ್ ಸಮಾರಂಭದಲ್ಲಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಹುಲುಗಪ್ಪ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು. ಹಿರಿಯ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು.