ಕನ್ನಡಪ್ರಭ ವಾರ್ತೆ ಮೈಸೂರು
ಚಾಮರಾಜಪುರಂನ ರವಿವರ್ಮ ಕಲಾ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಡಿಸೊನೆನ್ಸ್ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು, ಮಂಗಳೂರು, ಬೆಂಗಳೂರು, ಹಾಸನ ಹಾಗೂ ತುಮಕೂರಿನಲ್ಲಿ ಪ್ರಾಯೋಗಿಕವಾಗಿ ಚಿತ್ರಕಲಾ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.
ಸಾರ್ವಜನಿಕರಲ್ಲಿ ಕಲಾಭಿರುಚಿ, ಕಲಾಭಿಮಾನ ಬೆಳೆಸುವುದು ಅಕಾಡೆಮಿ ಉದ್ದೇಶವಾಗಿದ್ದು, ರಾಜ್ಯದಲ್ಲಿ ಸುಮಾರು 600 ಕಲಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದ್ದೇವೆ. ಕಾಲೇಜು ವಿದ್ಯಾರ್ಥಿಗಳ್ಲಿ ಚಿತ್ರಕಲೆ ಕುರಿತು ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕಾರ್ಯಾಗಾರಗಳನ್ನು ಆಯೋಜಿಸಿ ಪ್ರೋತ್ಸಾಹಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.ಪ್ರತಿ ಕಲಾವೃತ್ತದಲ್ಲಿ ಇಬ್ಬರು ತರಬೇತಿ ನೀಡುವ ಕಲಾವಿದರನ್ನು ನಿಯೋಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸಿನಿಮಾ, ಸಂಗೀತ ಹಾಗೂ ಪ್ರದರ್ಶಕ ಕಲೆಗಳನ್ನು ನೋಡಲು ಪ್ರೇಕ್ಷಕರು ಬರುತ್ತಾರೆ. ಚಿತ್ರಕಲಾ ಪ್ರದರ್ಶನಗಳಿಗೆ ಭೇಟಿ ನೀಡುವ ಅಭಿರುಚಿಯುಳ್ಳವರು ಕಡಿಮೆ ಎಂಬ ಆರೋಪವಿದೆ. ಚಿತ್ರ ಕಲಾವಿದರು ಹಾಗೂ ಸಮಾಜದ ನಡುವೆ ಅಂತರ ಸೃಷ್ಟಿಯಾಗಿರುವುದೇ ಅದಕ್ಕೆ ಕಾರಣ. ಜನರ ಜೊತೆ ಕಲಾವಿದರನ್ನು ಬೆಸೆಯಲು ಅಕಾಡೆಮಿ ಕಾರ್ಯೋನ್ಮುಖವಾಗಿದೆ ಎಂದು ಅವರು ಹೇಳಿದರು.
ಕಲಾಕೃತಿಗಳನ್ನು ಯಾರಾದರೂ ಬರೆಯಬಹುದು. ಆದರೆ, ಕೃತಿ ಭಾವನೆ ಹೊಮ್ಮಿಸಲು ಅನುಭವ ಶಕ್ತಿಯು ಕಲಾವಿದನಿಗೆ ಬೇಕಾಗುತ್ತದೆ. ಕಲಾ ಪರಂಪರೆಯನ್ನು ಬೆಳೆಸಲು ಕಲಾವಿದರು ಒಗ್ಗಟ್ಟಾಗಬೇಕು ಎಂದು ಅವರು ತಿಳಿಸಿದರು.