ಗ್ರಾಮಗಳ ಅಭಿವೃದ್ಧಿಗೆ ಸೌಲಭ್ಯ ಕಲ್ಪಿಸಲು ಕ್ರಮ

KannadaprabhaNewsNetwork | Published : May 2, 2024 12:15 AM

ಸಾರಾಂಶ

ಅರಣ್ಯ ಪ್ರದೇಶದ ಒಳಗಿರುವ ಗ್ರಾಮಗಳ ಅಭಿವೃದ್ಧಿಗೆ ಕಾನೂನಿನಲ್ಲಿ ತೊಡಕಿರುವುದರಿಂದ ಜಿಲ್ಲಾಡಳಿತ ಸರ್ಕಾರಕ್ಕೆ ಗ್ರಾಮಗಳ ಮೂಲ ಸೌಲಭ್ಯಗಳ ಕಲ್ಪಿಸುವ ಬಗ್ಗೆ ಪತ್ರ ವ್ಯವಹಾರ ಮಾಡಿ ವಿವಿಧ ಇಲಾಖೆಯ ಅನುಮತಿ ಪಡೆಯಲು ಹಾಗೂ ಮೂಲ ಸೌಲಭ್ಯವನ್ನು ಕಲ್ಪಿಸಲು ಕ್ರಮ ಕೈಗೊಂಡಿದೆ ಎಂದು ಕೊಳ್ಳೇಗಾಲ ಉಪವಿಭಾಗ ಅಧಿಕಾರಿ ಶಿವಮೂರ್ತಿ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಅರಣ್ಯ ಪ್ರದೇಶದ ಒಳಗಿರುವ ಗ್ರಾಮಗಳ ಅಭಿವೃದ್ಧಿಗೆ ಕಾನೂನಿನಲ್ಲಿ ತೊಡಕಿರುವುದರಿಂದ ಜಿಲ್ಲಾಡಳಿತ ಸರ್ಕಾರಕ್ಕೆ ಗ್ರಾಮಗಳ ಮೂಲ ಸೌಲಭ್ಯಗಳ ಕಲ್ಪಿಸುವ ಬಗ್ಗೆ ಪತ್ರ ವ್ಯವಹಾರ ಮಾಡಿ ವಿವಿಧ ಇಲಾಖೆಯ ಅನುಮತಿ ಪಡೆಯಲು ಹಾಗೂ ಮೂಲ ಸೌಲಭ್ಯವನ್ನು ಕಲ್ಪಿಸಲು ಕ್ರಮ ಕೈಗೊಂಡಿದೆ ಎಂದು ಕೊಳ್ಳೇಗಾಲ ಉಪವಿಭಾಗ ಅಧಿಕಾರಿ ಶಿವಮೂರ್ತಿ ಅವರು ತಿಳಿಸಿದರು.

ಜಿಲ್ಲಾಡಳಿತದ ಪರವಾಗಿ ನಾಗಮಲೆ ಗ್ರಾಮದಲ್ಲಿ ಪಡಸಲನತ್ತ ನಿವಾಸಿಗಳನ್ನು ಒಂದೆಡೆ ಸೇರಿಸಿ ಶಾಂತಿ ಸಭೆ ಮಾಡುವ ಮೂಲಕ ಗ್ರಾಮಸ್ಥರ ಜೊತೆ ಮಾತನಾಡಿದ ಅವರು ಗ್ರಾಮಸ್ಥರ ಜೊತೆ ಶಾಂತಿ ಸಭೆ ನಡೆಸಿ ಧೈರ್ಯ ತುಂಬಿದರು. ಚುನಾವಣಾ ಸಂದರ್ಭದಲ್ಲಿ ಮತದಾನವನ್ನು ಬಹಿಷ್ಕರಿಸುವುದು ತಪ್ಪು ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಹಾಗೆಯೇ ಸವಲತ್ತು ಕೇಳುವುದು ಸಹ ನಿಮ್ಮ ಹಕ್ಕಾಗಿರುತ್ತದೆ. ಹೀಗಾಗಿ ಚುನಾವಣಾ ಸಂದರ್ಭದಲ್ಲಿ ಇಂತಹ ಘರ್ಷಣೆಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ಇರಬೇಕು. ಗ್ರಾಮದಲ್ಲಿ ಮೊದಲಿನಿಂದ ಹೇಗೆ ಎರಡು ಸಮುದಾಯಗಳು ಸೋದರರಂತೆ ಇರುವ ಹಾಗೆ ಗಿರಿಜನರ ಜೊತೆ ಅದೇ ರೀತಿ ಗ್ರಾಮಗಳ ನಿವಾಸಿಗಳು ಸಾಮರಸ್ಯದಿಂದ ಇರುವಂತೆ ತಿಳಿಸಿದರು. ಎಎಸ್ಪಿ ಉದೇಶ್ ಮಾತನಾಡಿ, ನಾಗಮಲೆ (ತೇಕಣೆ) ಮತ್ತು ಪಡಸಲನತ್ತ ಗ್ರಾಮದಲ್ಲಿ ಎರಡು ಸಮುದಾಯಗಳು ವಾಸ ಮಾಡುತ್ತಿದ್ದೀರಿ. ಅದೇ ರೀತಿ ಇನ್ನು ಮುಂದೆ ಯಾವುದೇ ಲೋಪದೋಷಗಳು ಬಾರದಂತೆ ಗ್ರಾಮದಲ್ಲಿ ಸಾಮರಸ್ಯದಿಂದ ಇರಬೇಕು. ಏ.26ರಂದು ಮತದಾನ ವೇಳೆಯಲ್ಲಿ ಗಲಭೆಗೆ ಕಾರಣರಾದವರನ್ನು ರಕ್ಷಣೆ ಮಾಡುವುದು ತಪ್ಪು. ಹೀಗಾಗಿ ನಿಮ್ಮ ಗ್ರಾಮಗಳಲ್ಲಿ ಅಂತಹ ವ್ಯಕ್ತಿಗಳಿದ್ದರೆ ಇಲಾಖೆಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಮುಂದೆ ನಿಮ್ಮ ಸಮಸ್ಯೆಗಳಿದ್ದರೆ ಜಿಲ್ಲಾಡಳಿತಕ್ಕೆ ತಿಳಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಮೂಲಕ ಗ್ರಾಮಗಳಲ್ಲಿ ಸೌರ್ಹರ್ದತೆಯಿಂದ ಶಾಂತಿ ಕಾಪಾಡಲು ಸಹಕಾರ ನೀಡಬೇಕು. ಗಲಭೆ ಮಾಡಿ ತಲೆಮರೆಸಿಕೊಂಡಿರುವವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಕಾನೂನಿಗೆ ಗೌರವಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಧರ್ಮೇಂದರ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಮಠದ್ ಹಾಗೂ ವಲಯ ಆರ್‌ಎಫ್ಓ ಭಾರತಿ ನಂದಿಹಳ್ಳಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ಗ್ರಾಮಲೆಕ್ಕಿಗ ವಿನೋದ್ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಿರಣ್ ಕುಮಾರ್ ಪೊಲೀಸ್ ಸಿಬ್ಬಂದಿ ವರ್ಗ ಸಮುದಾಯದ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.

Share this article