ಜೈನ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ

KannadaprabhaNewsNetwork |  
Published : Dec 10, 2024, 12:30 AM IST
ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದ ಜೈನ ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಅ‍ವರಿಗೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು | Kannada Prabha

ಸಾರಾಂಶ

ಜೈನ ಸಮಾಜದ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ವತಿಯಿಂದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜೈನ ಸಮಾಜದ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ವತಿಯಿಂದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭರವಸೆ ನೀಡಿದರು.

ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಕರ್ನಾಟಕ ಸಮಸ್ತ ಜೈನ ಸಮಾಜದ ವತಿಯಿಂದ ಸೋಮವಾರ ನಡೆದ ಜೈನ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್ಲ ಧರ್ಮಗಳು ಶ್ರೇಷ್ಠವಾಗಿವೆ. ಅದರಲ್ಲೂ ಮಾನವ ಧರ್ಮ ಅತೀ ಶ್ರೇಷ್ಠವಾಗಿದೆ. ಈ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ ಇದ್ದಾನೆ. ನನ್ನ ಮೇಲೆ ಭರವಸೆ ಇಡಿ. ನಮ್ಮ ಕಾಂಗ್ರೆಸ್‌ ಸರ್ಕಾರ ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಿದೆ‌. ಅದರಂತೆ ಈಗ ನೀಡಿದ ಮನವಿ ಪತ್ರದಲ್ಲಿ ತಿಳಿಸಿದ ಹಾಗೆ ಜೈನ ಸಮುದಾಯದ ಎಲ್ಲ ಬೇಡಿಕೆಗಳ ಈಡೆರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಜೈನ ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ. ಪ್ರಸ್ತುತ ಜೈನ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಬಹುದಿನಗಳ ಬೇಡಿಕೆಯನ್ನು ಈಡೇರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಜೈನ ಧರ್ಮಿಯರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸದಾ ಬದ್ಧವಾಗಿದೆ. ಸರ್ವ ಧರ್ಮಿಯರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಭಾರತದ ಸಂವಿಧಾನ ತುಂಬಾ ಶ್ರೇಷ್ಠವಾದದ್ದು. ಇಲ್ಲಿ ಆಚಾರ ವಿಚಾರಗಳಿಗೆ ತುಂಬಾ ಸ್ವಾತಂತ್ರ್ಯವಿದೆ. ಅಲ್ಪಸಂಖ್ಯಾತ ಕೋಟಾದಲ್ಲಿ ಜೈನ ಧರ್ಮಿಯರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಜೈನ ಧರ್ಮದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಶಾಸಕ ಪ್ರಕಾಶ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ ಮತಕ್ಷೇತ್ರದಲ್ಲಿ ಈಗಾಗಲೆ ಪ್ರತ್ಯೇಕ ವಸತಿ ನಿಲಯಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಶಿಲಾನ್ಯಾಸ ಮಾಡಲಾಗುವುದು. ಉಳಿದ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಆಚಾರ್ಯ ಗುಣಧರನಂದಿ ಮಹಾರಾಜರು ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ಬೇಡಿಕೆಗಳು ಈಡೇರಲೇಬೇಕು. ಜೈನ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆಯನ್ನು ಕೊಡಲೇಬಾರದು‌. ನಮ್ಮ ಧರ್ಮ ಪರಿಪಾಲನೆ ಮಾಡಲು ಅನಕೂಲ ಮಾಡಿ‌ಕೊಡಿ. ಜೈನ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಶಾಸಕರಾದ ಅಭಯ ಪಾಟೀಲ, ರಾಜು ಸೇಠ, ಬಾಬಾಸಾಹೇಬ ಪಾಟೀಲ, ಶಶಿಕಲಾ ಜೊಲ್ಲೆ, ಸಚಿವ ಡಿ.ಸುಧಾಕರ, ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಶಾಸಕ ವೀರಕುಮಾರ ಪಾಟೀಲ, ಶಾಸಕ ಸಿದ್ದು ಸವದಿ ಮೊದಲಾದವರು ಮಾತನಾಡಿದರು.

ಸಮಾರಂಭದ ವೇದಿಕೆ ಮೇಲೆ ಮೂಡುಬಿದರಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಮಠದ ದೇವೆಂದ್ರಕೀರ್ತೀ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪೂರದ ಲಕ್ಷ್ಮೀಸೇನ ಭಟ್ಟಾರಕ , ನಾಂದನಿ ಮಠದ ಜಿನಸೇನ ಭಟ್ಟಾರಕ ಸ್ವಾಮಿಜಿ, ಸೋಂದಾ ಮಠದ ಭಟ್ಟಾಕಲಂಕ‌ ಸ್ವಾಮೀಜಿ, ವಿಧಾನ ಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ, ರವಿರಾಜ ಪಾಟೀಲ, ಜೈನ ಸಮಾಜದ ಮುಖಂಡ ಉತ್ತಮ ಪಾಟೀಲ ಜೈನ‌ ಸಮಾಜದ ಮುಖಂಡರಾದ ವಿನೋದ ದೊಡ್ಡಣ್ಣವರ, ಸುನಿಲ ಹನಮಣ್ಣವರ,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

--------

ಬಾಕ್ಸ್....

ಜೈನರ ಬೇಡಿಕೆ ಕುರಿತು ಸರ್ಕಾರದ ಗಮನ ಸೆಳೆಯುವೆ: ವಿಜಯೇಂದ್ರ

ಜೈನರ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆ. ಅಧಿವೇಶನದಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಿ ಅವುಗಳ ಅನುಷ್ಠಾನಕ್ಕೆ ಪ್ರಯತ್ನ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ವಿಜಯೇಂದ್ರ ಭರವಸೆ ನೀಡಿದರು.

ಬೆಳಗಾವಿಯಲ್ಲಿ ಸಮಸ್ತ ಜೈನ ಅಲ್ಪಸಂಖ್ಯಾತರ ಹೋರಾಟ ಸಮಿತಿ ಏರ್ಪಡಿಸಿದ್ದ ಜೈನ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು. ಸ್ವಾಭಿಮಾನ, ಪ್ರಾಮಾಣಿಕತೆಗೆ ಜೈನ ಸಮಾಜ ಮತ್ತೊಂದು ಹೆಸರು. ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಿ ಪ್ರತಿ ವರ್ಷ ₹200 ಕೋಟಿ ಅನುದಾನ ಕೊಡಬೇಕು, ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿ ಜೈನರ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ 2 ವಿದ್ಯಾರ್ಥಿ ನಿಲಯಗಳನ್ನು ಜೈನ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು ಎಂಬುವುದು ಸೇರಿದಂತೆ ಮೊದಲಾದ ಬೇಡಿಕೆಗಳ ಮನವಿಪತ್ರವನ್ನು ಸಮಿತಿಯು ವಿಜಯೇಂದ್ರ ಅವರಿಗೆ ಸಲ್ಲಿಸಿತು.

ಕೋಟ್.....

ಆಚಾರ್ಯ ಗುಣಧರನಂದಿ ಮಹಾರಾಜರು ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ಬೇಡಿಕೆಗಳು ಈಡೇರಲೇಬೇಕು. ಜೈನ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆಯನ್ನು ಕೊಡಲೇಬಾರದು‌. ನಮ್ಮ ಧರ್ಮ ಪರಿಪಾಲನೆ ಮಾಡಲು ಅನಕೂಲ ಮಾಡಿ‌ಕೊಡಿ. ಜೈನ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯಾಗಬೇಕು.

-ಆಚಾರ್ಯ ಗುಣಧರನಂದಿ ಮಹಾರಾಜರು.

ಈ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ ಇದ್ದಾನೆ. ನನ್ನ ಮೇಲೆ ಭರವಸೆ ಇಡಿ. ನಮ್ಮ ಕಾಂಗ್ರೆಸ್‌ ಸರ್ಕಾರ ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಿದೆ‌. ಅದರಂತೆ ಈಗ ನೀಡಿದ ಮನವಿ ಪತ್ರದಲ್ಲಿ ತಿಳಿಸಿದ ಹಾಗೆ ಜೈನ ಸಮುದಾಯದ ಎಲ್ಲ ಬೇಡಿಕೆಗಳ ಈಡೆರಿಕೆಗೆ ಕ್ರಮ ಕೈಗೊಳ್ಳಲಾಗುವುದು.

- ಡಿ.ಕೆ.ಶಿವಕುಮಾರ, ಉಪಮುಖ್ಯಮಂತ್ರಿ.

---------

9ಬಿಇಎಲ್‌1

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!