ಕನ್ನಡಪ್ರಭ ವಾರ್ತೆ ಹನೂರು
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನರೇಂದ್ರ ಜೊತೆ ಚರ್ಚಿಸಿ ಅಭಿವೃದ್ಧಿಪಡಿಸಲಾಗುವುದು. ಮಾಜಿ ಶಾಸಕ ಆರ್ ನರೇಂದ್ರರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹಾದೇವಪ್ಪ ತಿಳಿಸಿದರು.ಮೈಸೂರಿನ ನಜರಬಾದ್ ಸಮೀಪದ ಸರ್ಕಾರಿ ಅತಿಥಿ ಗೃಹದಲ್ಲಿ ಹನೂರು ಕ್ಷೇತ್ರದ ಮುಖಂಡರ ಸಮಸ್ಯೆ ಅಹವಾಲು ಸ್ವೀಕಾರ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಮತಯಾಚನೆಗೆ ತೆರಳಿದ್ದಾಗ ಅಲ್ಲಿನ ಸಮಸ್ಯೆಗಳ ಬಗ್ಗೆ ಖುದ್ದು ತಿಳಿದುಕೊಂಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದೆ ಅದರಂತೆ ಹನೂರು ವಿಧಾನಸಭಾ ಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾಜಿ ಶಾಸಕ ನರೇಂದ್ರ ಅವರ ಜೊತೆ ಚರ್ಚೆ ನಡೆಸಿ ಸಮಗ್ರ ಮಾಹಿತಿಯನ್ನು ಪಡೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜೊತೆ ಚರ್ಚಿಸಿ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಅನುದಾನ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಒಬ್ಬ ಶಾಸಕನಿಂದ ಸಚಿವ ಸಂಪುಟ ಸಭೆ ಆಯೋಜನೆ ಅಸಾಧ್ಯ: ಚಾಮರಾಜನಗರ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಈಗಾಗಲೇ ಜಿಲ್ಲೆಯಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆಗಳ ಪಟ್ಟಿಯನ್ನು ಮಾಡಿಸಲಾಗಿದೆ. ಮುಖ್ಯಮಂತ್ರಿಗಳ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿ ಈ ಭಾಗದಲ್ಲಿ ಸಚಿವ ಸಂಪುಟ ಸಭೆ ನಿಗದಿ ಮಾಡಿರುವುದು ನಾನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್. ಒಬ್ಬ ಶಾಸಕನಿಂದ ಸಚಿವ ಸಂಪುಟ ಸಭೆ ಅಸಾಧ್ಯ ಎಂದು ಶಾಸಕ ಎಂ. ಆರ್ ಮಂಜುನಾಥ ಹೆಸರು ಹೇಳದೆ ಟಾಂಗ್ ನೀಡಿದರು.ಆರ್. ನರೇಂದ್ರ ನಾನು ಒಂದೇ ಕುಟುಂಬದ ಅಣ್ಣ ತಮ್ಮಂದಿರಂತೆ. ಕ್ಷೇತ್ರದಲ್ಲಿ ಇದುವರೆಗೂ ಆಗುತ್ತಿರುವ ಅಭಿವೃದ್ಧಿಗಳು ಅವರ ನೇತೃತ್ವದಲ್ಲಿಯೇ ಆಗಿದೆ ಮುಂದೆಯೂ ಸಹ ಆಗುತ್ತದೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ನರೇಂದ್ರಗೆ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ನೀಡಲು ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳ ಜೊತೆ ಚರ್ಚೆ: ಚಾಮರಾಜನಗರ ಹಾಗೂ ಮೈಸೂರು ಜಿಲ್ಲಾಧಿಕಾರಿಗಳ ಜೊತೆ ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿ ಜಿಲ್ಲೆಯಲ್ಲಿ ಪ್ರಮುಖವಾಗಿ ಆಗಬೇಕಾಗಿರುವ ಕಾಮಗಾರಿಗಳ ಪಟ್ಟಿ ಮಾಡಿಸಿ ವರದಿ ಪಡೆದುಕೊಂಡಿದ್ದೇನೆ. ಮಲೆ ಮಹದೇಶ್ವರ ಮಂಟೇಸ್ವಾಮಿ ಸಿದ್ದಪ್ಪಾಜಿ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿಕೊಂಡಿದ್ದೇವೆ. ಪಟ್ಟಿಯಂತೆ ಅನುದಾನ ನೀಡಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ ಎಂದರು.ಸಭೆಯಲ್ಲಿ ಹನೂರು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ನರೇಂದ್ರರನ್ನು ಬಿಟ್ಟು ಬೇರೆಯವರು ಯಾರಾದರೂ ಇದ್ದೀರಾ ಎಂದು ನಗೆ ಚಟಾಕಿ ಆರಿಸಿದರು.
ಪಪಂ ಸದಸ್ಯ ಗಿರೀಶ್ ಮಾತನಾಡಿ, ಆರ್ ನರೇಂದ್ರರನ್ನು ಕಡೆಗಣಿಸಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಹೆಚ್ಚಿನ ಲೀಡ್ ಕೊಡಿಸಿದ್ದೇವೆ. ನೀವು ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಯನ್ನು ಈಡೇರಿಸಬೇಕು ಎಂದರು. ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಕಳೆದ 50 ವರ್ಷಗಳಿಂದ ದಿ. ರಾಜುಗೌಡ ಕುಟುಂಬ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲಿರುಡು ಶ್ರಮಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋಲಾಗಿದೆ. ಅವರಿಗೆ ಉನ್ನತ ಸ್ಥಾನ ನೀಡುವ ಮೂಲಕ ಕೈ ಬಲಪಡಿಸಬೇಕು ಎಂದರು.ಜಿಪಂ ಮಾಜಿ ಅಧ್ಯಕ್ಷೆ ಶಿವಮ್ಮ ಮಾಜಿ ಸದಸ್ಯರುಗಳಾದ ಬಸವರಾಜು, ಕೊಪ್ಪಳಿ ಮಹದೇವ ನಾಯಕ್, ಚಾಮುಲ್ ನಿರ್ದೇಶಕರುಗಳಾದ ನಂಜುಂಡಸ್ವಾಮಿ, ಶಾಹುಲ್ ಅಹಮದ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಹರೀಶ್ ಸುದೇಶ್, ಬಸವರಾಜು, ನವೀನ್, ಮುಖಂಡರುಗಳಾದ ಮಹದೇವ ಪ್ರಸಾದ್, ಸೋಮಣ್ಣ ನಾಗೇಂದ್ರ ಮಾದೇಶ್ ಸೇರಿದಂತೆ ಹನೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ಮುಖಂಡರು ಹಾಜರಿದ್ದರು.