ಕನ್ನಡಪ್ರಭ ವಾರ್ತೆ ಹೊನ್ನಾಳಿ
ಯಾವುದೇ ಸರ್ಕಾರಿ ಕಟ್ಟಡ ಕಾಮಗಾರಿಗಳು ಕಳಪೆ ಇಲ್ಲದಂತೆ ನಿರ್ಮಿಸಿ, ಕಾಮಗಾರಿಗಳು ಪೂರ್ಣವಾದ ಬಳಿಕ ಕಟ್ಟಡ ಪರಿಶೀಲನೆಗೆ ಆಹ್ವಾನಿಸಿ ಕಟ್ಟಡ ಪರಿಶೀಲಿಸಿ ಮೆಚ್ಚುಗೆ ಸೂಚಿಸಿದ ಬಳಿಕ ನಿಮಗೆ ಪೂರ್ಣ ಮೊತ್ತದ ಬಿಲ್ ಗಳು ಪಾವತಿ ಮಾಡಿಸಲಾಗುವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಗುತ್ತಿಗೆದಾರರಿಗೆ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ 2022-23 ನೇ ಸಾಲಿನ ವಿವೇಕ ಯೋಜನೆಯಡಿ ₹125 ಲಕ್ಷ ಅನುದಾನದಡಿ 5 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ ಇನ್ನೂ 5 ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೊನೆ ಹಂತದ ಅನುಮೋದನೆ 2-3 ದಿನಗಳಲ್ಲಿ ಆಗಲಿದೆ ಆ ಕಾಮಗಾರಿಗಳಿಗೂ ₹ 125 ಲಕ್ಷ ಅನುದಾನ ಬಿಡುಗಡೆಯಾಗಲಿದೆ. ಆ ಕಾಮಗಾರಿ ಶೀಘ್ರದಲ್ಲೇ ಉದ್ಘಾಟನೆ ಕೈಗೊಳ್ಳಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ಹಿಂದೆ ನಡೆಸಿದ ಹಲವು ಶಾಲಾ ಕಾಲೇಜುಗಳ ಕೊಠಡಿಗಳ ನಿರ್ಮಾಣ ಕಾಮಗಾರಿಗಳು ಮೂರೇ ವರ್ಷಗಳಲ್ಲಿ ಸೋರಿಕೆಯಾಗುತ್ತಿವೆ ಎಂದು ಕಾಲೇಜಿನ ಆಡಳಿತ ವರ್ಗವೇ ಹೇಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಳಪೆ ಕಾಮಗಾರಿ, ಉತ್ತಮ ಗುಣಮಟ್ಟದ ಕಾಮಗಾರಿ ಮಾಡದಿದ್ದರೆ ಯಾವುದೇ ಕಾರಣಕ್ಕೂ ಅನುದಾನ ಬಿಡುಗಡೆಗೆ ಶಿಫಾರಸ್ಸು ಮಾಡಲ್ಲ ಎಂದು ಎಚ್ಚರಿಸಿದರು.ಬೇಕಾಬಿಟ್ಟಿ ಕಾಮಗಾರಿಗಳು ನಡೆದರೆ ಒಂದೆರೆಡು ವರ್ಷಗಳಲ್ಲಿಯೇ ಕಟ್ಟಡಗಳಲ್ಲಿ ಬಿರುಕುಬಿಟ್ಟು ಅವಘಡಗಳು ಸಂಭವಿಸುತ್ತವೆ. ಗುತ್ತಿಗೆದಾರರು ಸೂಕ್ತ ಪ್ರಮಾಣದ ಸಿಮೆಂಟ್, ಮರಳು, ಜಲ್ಲಿಕಲ್ಲು ಮಿಶ್ರಣ ಮಾಡಿ ಕಟ್ಟಡಗಳ ನಿರ್ಮಿಸಿದರೆ ಕಟ್ಟಡಗಳು ಬಹುಕಾಲ ಬಾಳಿಕೆ ಬರುತ್ತವೆ. ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದರೂ ಕಳಪೆ ಕಾಮಗಾರಿಯಿಂದ ಕಟ್ಟಡಕ್ಕೆ ಹಾನಿಯಾಗುತ್ತದೆ. ಸಂಬಂಧಪಟ್ಟ ಎಂಜಿನಿಯರ್ ಗಳು ಆಗಿಂದಾಗ್ಗೆ ಕಾಮಗಾರಿ ಪರಿಶೀಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ರಾಮಚಂದ್ರಪ್ಪ, ಸಿಡಿಸಿ ಸದಸ್ಯರಾದ ನರಸಗೊಂಡನಹಳ್ಳಿ ಕೃಷ್ಣಮೂರ್ತಿ, ಎಸ್.ಆರ್.ಹನುಮಂತಪ್ಪ, ಯು.ಎನ್.ಸಂಗನಾಳಮಠ, ಎಂ.ಎಸ್.ರೇವಣಪ್ಪ, ಉಪನ್ಯಾಸಕರಿದ್ದರು.