ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ

KannadaprabhaNewsNetwork |  
Published : Oct 22, 2023, 01:00 AM IST
ಗುರುದತ್ ಹೆಗಡೆ | Kannada Prabha

ಸಾರಾಂಶ

ಮುಂದಿನ ದಿನಗಳಲ್ಲಿ ಮತ್ತೆ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು. ಈಗಾಗಲೇ ಕೆಲವು ರೈತರು ಹಿಂಗಾರು ಬೆಳೆ ಬೆಳೆದಿದ್ದಾರೆ. ಹಿಂಗಾರು ಮಳೆ ಕೊರತೆಯಾದರೆ ಬೆಳೆ ಹಾನಿಯಾಗುವ ಸಂಭವವಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದರೂ ಕುಡಿಯುವ ನೀರಿಗೇನು ಸಮಸ್ಯೆಯಿಲ್ಲ. ಸುಮಾರು 80ಕ್ಕೂ ಅಧಿಕ ಕೆರೆಗಳಿಗೆ ನೀರನ್ನು ತುಂಬಿಸಿಕೊಳ್ಳಲಾಗಿದೆ. ಮುಂದಿನ 4ರಿಂದ 5 ತಿಂಗಳು ಯಾವುದೇ ರೀತಿಯ ಕುಡಿಯುವ ನೀರಿನ ಕೊರತೆಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮತ್ತೆ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು. ಈಗಾಗಲೇ ಕೆಲವು ರೈತರು ಹಿಂಗಾರು ಬೆಳೆ ಬೆಳೆದಿದ್ದಾರೆ. ಹಿಂಗಾರು ಮಳೆ ಕೊರತೆಯಾದರೆ ಬೆಳೆ ಹಾನಿಯಾಗುವ ಸಂಭವವಿದೆ ಎಂದರು.

ಪರಿಹಾರ ಸಾಫ್ಟ್‌ವೇರ್ ಮೂಲಕ ರೈತರಿಗೆ ಬೆಳೆ ಪರಿಹಾರವನ್ನು ಕೊಡಿಸಲಾಗುತ್ತಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಮುಂದಿನ ಒಂದೂವರೆ ತಿಂಗಳಲ್ಲಿ ರೈತರಿಗೆ ಬೆಳೆ ಪರಿಹಾರವನ್ನು ವಿತರಿಸಲಾಗುತ್ತದೆ. ವಿಮಾ ಕಂಪನಿಗಳಿಂದ ಮಧ್ಯಂತರ ಪರಿಹಾರ ಕೊಡಿಸಲಾಗುವುದು. ಅಣ್ಣಿಗೇರಿ ಪಟ್ಟಣಕ್ಕೆ ತೆರಳಿ ಖುದ್ದು ಪರಿಶೀಲನೆ ಮಾಡಿದ್ದೇನೆ. ಹಳ್ಳಿಗಳಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡುವ ಮುನ್ನ ನೀರನ್ನು ಪರೀಕ್ಷೆ ಮಾಡಿಸುವಂತೆ ತಿಳಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಸುಮಾರು 15ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ ಎಂಬ ಮಾಹಿತಿ ದೊರೆತಿದೆ. ಸಣ್ಣ ಪುಟ್ಟ ಸಮಸ್ಯೆಗಳಿಂದ ಬಂದಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿ, ಮರುಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

ನೀರಿನ ಸಮಸ್ಯೆಯಾದರೆ ಟ್ಯಾಂಕರ್ ಹಾಗೂ ಬೋರೆವೆಲ್‌ ಮೂಲಕ ನೀರನ್ನು ಒದಗಿಸಲಾಗುವುದು. ಹಲವಾರು ಸಮಸ್ಯೆಗಳಿಂದ ರೈತರಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ಒದಗಿಸುವಲ್ಲಿ ಅಡೆತಡೆಯಾಗುತ್ತಿದೆ. ಬರುವ ರೈತರಿಗೆ ಸಮರ್ಪಕವಾಗಿ ವಿದ್ಯುತ್ ವಿತರಿಸಲಾಗುವುದು ಎಂದರು.

ವಿದ್ಯುತ್‌ ಬಿಲ್‌:

ಸರ್ಕಾರಿ ಕಚೇರಿಗಳಲ್ಲಿ ಅನುದಾನದ ಕೊರತೆಯಿಂದ ವಿದ್ಯುತ್ ಬಿಲ್ ಬಾಕಿ ಉಳಿದಿವೆ. ಆಯಾ ಇಲಾಖೆಗಳಿಗೆ ಅನುದಾನ ಬಿಡುಗಡೆಯಾದ ಬಳಿಕ ಕೂಡಲೇ ವಿದ್ಯುತ್ ಬಿಲ್ ಭರಿಸಲಾಗುತ್ತದೆ ಎಂದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಮಾತನಾಡಿ, ಸರ್ಕಾರಿ ಕಚೇರಿಗಳಿಗೆ ಲೋಕಾಯುಕ್ತರು ಎಂದು ಹೇಳಿಕೊಂಡು ಅನಗತ್ಯ ಕರೆಗಳು ಬರುತ್ತಿವೆ. ಈ ಕುರಿತಂತೆ ಯಾರು ಕೂಡ ದೂರು ಕೊಟ್ಟಿರುವುದಿಲ್ಲ. ದೂರು ದಾಖಲಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ