ಅಕ್ಟೋಬರ್‌ನಲ್ಲೇ ಬೇಸಿಗೆ ನೆನಪಿಸುವ ಕೆರೆಗಳು!

KannadaprabhaNewsNetwork |  
Published : Oct 22, 2023, 01:00 AM IST
ನೀರಿಲ್ಲದೇ ಬರಿದಾಗಿರುವ ಕೂಡ್ಲಿಗಿ ತಾಲೂಕು ಗುಡೇಕೋಟೆ ಕೆರೆ. | Kannada Prabha

ಸಾರಾಂಶ

ಕೂಡ್ಲಿಗಿ ತಾಲೂಕಿನಲ್ಲಿ 80ಕ್ಕೂ ಹೆಚ್ಚು ಕೆರೆ, ಕಟ್ಟೆಗಳಿದ್ದು, ಪ್ರತಿವರ್ಷ ಜನವರಿ, ಫೆಬ್ರುವರಿ ತಿಂಗಳಲ್ಲಿ ನೀರು ಖಾಲಿಯಾಗುತ್ತಿದ್ದವು. ಆದರೆ ಈ ಬಾರಿ ಈಗಲೇ ಖಾಲಿಯಾಗುತ್ತಿದ್ದು, 50 ವರ್ಷಗಳ ಹಿಂದಿನ ಬರ ನೆನಪು ಆಗುತ್ತಿದೆ. ಅಕ್ಟೋಬರ್‌ನಲ್ಲಿಯೇ ತಾಲೂಕಿನ 75ಕ್ಕೂ ಹೆಚ್ಚು ಕೆರೆಗಳು ನೀರಿಲ್ಲದೇ ಬಣಗುಡುತ್ತಿವೆ. ಇದು ಭೀಕರ ಬರದ ಮುನ್ಸೂಚನೆ. ಈಗಲೇ ಕೆರೆಗಳಲ್ಲಿ ನೀರಿಲ್ಲದಿದ್ದರೆ ಈ ವರ್ಷದ ಬೇಸಿಗೆ ಕಳೆಯುವುದು ಹೇಗೆ ಎಂಬುದು ರೈತರ ಚಿಂತೆ.

ಭೀಮಣ್ಣ ಗಜಾಪುರ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ತಾಲೂಕಿನಲ್ಲಿ 80ಕ್ಕೂ ಹೆಚ್ಚು ಕೆರೆ, ಕಟ್ಟೆಗಳಿದ್ದು, ಪ್ರತಿವರ್ಷ ಜನವರಿ, ಫೆಬ್ರುವರಿ ತಿಂಗಳಲ್ಲಿ ನೀರು ಖಾಲಿಯಾಗುತ್ತಿದ್ದವು. ಆದರೆ ಈ ಬಾರಿ ಈಗಲೇ ಖಾಲಿಯಾಗುತ್ತಿದ್ದು, 50 ವರ್ಷಗಳ ಹಿಂದಿನ ಬರ ನೆನಪು ಆಗುತ್ತಿದೆ.

ಅಕ್ಟೋಬರ್‌ನಲ್ಲಿಯೇ ತಾಲೂಕಿನ 75ಕ್ಕೂ ಹೆಚ್ಚು ಕೆರೆಗಳು ನೀರಿಲ್ಲದೇ ಬಣಗುಡುತ್ತಿವೆ. ಇದು ಭೀಕರ ಬರದ ಮುನ್ಸೂಚನೆ. ಈಗಲೇ ಕೆರೆಗಳಲ್ಲಿ ನೀರಿಲ್ಲದಿದ್ದರೆ ಈ ವರ್ಷದ ಬೇಸಿಗೆ ಕಳೆಯುವುದು ಹೇಗೆ ಎಂಬುದು ರೈತರ ಚಿಂತೆ.

ಕೂಡ್ಲಿಗಿ ತಾಲೂಕಿನ 80ಕ್ಕೂ ಹೆಚ್ಚು ಕೆರೆಗಳಲ್ಲಿ ಕೆಲವು ಕೆರೆಗಳ ಉಸ್ತುವಾರಿಯನ್ನು ಪಂಚಾಯತ್ ರಾಜ್‌ ಎಂಜಿನಿಯರಿಂಗ್ ಇಲಾಖೆ ನೋಡಿಕೊಳ್ಳುತ್ತದೆ. ದೊಡ್ಡ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಯವರು ನೋಡಿಕೊಳ್ಳುತ್ತಾರೆ. ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ಶೇ. 50ರಷ್ಟು ನೀರಿದೆ. ಅಪ್ಪೇನಹಳ್ಳಿ ಕೆರೆಯಲ್ಲಿ ಶೇ. 60, ರಾಮದುರ್ಗ ಕೆರೆಯಲ್ಲಿ ಶೇ. 50ರಷ್ಟು ನೀರಿದೆ. ಉಳಿದಂತೆ ಕೂಡ್ಲಿಗಿ ದೊಡ್ಡಕೆರೆ, ಚೌಡಾಪುರ ಕೆರೆ, ಟಿ. ಬಸಾಪುರದ 2 ಕೆರೆಗಳು, ಕ್ಯಾಸನಕೆರೆ ಕೆರೆ, ಗುಂಡಿನಹೊಳೆ ಕೆರೆಗಳಲ್ಲಿ ಶೇ. 25ರಷ್ಟು ನೀರಿದೆ. ಸರ್ವೋದಯ ಹಾಗೂ ಅಮಲಾಪುರ ಕೆರೆಯಲ್ಲಿ ಶೇ. 20ರಷ್ಟು ನೀರಿದೆ. ಇವಿಷ್ಟು ಬಿಟ್ಟರೆ ಇಡೀ ತಾಲೂಕಿನ 75ಕ್ಕೂ ಹೆಚ್ಚು ಕೆರೆಗಳು ಚಳಿಗಾಲ ಬರುವ ಮುಂಚೆಯೇ ಖಾಲಿಯಾಗಿವೆ. ತಾಲೂಕಿನ ಬಹುತೇಕ ಕೆರೆಗಳಿಗೆ ಈ ಬಾರಿ ಮಳೆಯಿಂದ ನೀರೇ ಬಂದಿಲ್ಲ.

ಪಂಪ್‌ಸೆಟ್‌ಗಳು ಕೈಕೊಡಲಿವೆ:ಕೂಡ್ಲಿಗಿ ತಾಲೂಕಿನಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಕೆರೆಯ ನೀರೇ ಮುಖ್ಯ ಜಲಮೂಲ. ಆಯಾ ಭಾಗದ ಕೆರೆಗಳಲ್ಲಿ ನೀರಿದ್ದರೆ ಮಾತ್ರ ಪಂಪ್‌ಸೆಟ್‌ನಲ್ಲಿ ನೀರು ಬರುತ್ತದೆ. ದನಕರುಗಳಿಗೆ ಹೋಗಲಿ, ಜನತೆಗೂ ನೀರು ಸಿಗದ ಪರಿಸ್ಥಿತಿ ಬಂದರೆ ಆಶ್ಚರ್ಯಪಡಬೇಕಾಗಿಲ್ಲ. ಪ್ರತಿ ವರ್ಷ 30ರಿಂದ 40 ಕೆರೆಗಳಲ್ಲಿ ಶೇ. 40ರಷ್ಟು ನೀರು ಬೇಸಿಗೆ ಬರುವಾಗ ಇರುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ. ಜನರಿಗೆ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು, ಜಾನುವಾರುಗಳು ಹಾಗೂ ಕಾಡುಪ್ರಾಣಿಗಳಿಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವತ್ರಿಕವಾಗಿ ಕೇಳಿಬರುತ್ತಿರುವ ಒತ್ತಾಯವಾಗಿದೆ.ಕೂಡ್ಲಿಗಿ ತಾಲೂಕಿನ ಬಹುತೇಕ ಕೆರೆಗಳಲ್ಲಿ ಈ ಬಾರಿ ನೀರಿಲ್ಲ. ಪ್ರತಿವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯೇ ಆಗಿಲ್ಲ. ಹಿಂಗಾರಿನಲ್ಲಿ ಅಕಾಲಿಕ ಮಳೆ ಬಂದರೆ ಮಾತ್ರ ಅಲ್ಪ ಸ್ವಲ್ಪ ನೀರು ಬರಬಹುದು. ಐದಾರು ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದ್ದು, ಅದು ಪೋಲಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಾಲೂಕು ಪಂಚಾಯತ್ ರಾಜ್ ಎಂಜಿನಿಯರಿಂಗ್‌ ಇಲಾಖೆಯ ಎಇಇ ಮಲ್ಲಿಕಾರ್ಜುನ ಕೂಡ್ಲಿಗಿ ಹೇಳುತ್ತಾರೆ. 50 ವರ್ಷಗಳ ಹಿಂದೆ ಭೀಕರ ಬರಗಾಲ ಎದುರಿಸಿದ್ದೆವು. ಆ ನೆನಪು ಈಗ ಬರುತ್ತಿದೆ. ಕೂಡ್ಲಿಗಿ ತಾಲೂಕಿನ ಯಾವುದೇ ಕಾಡಿಗೆ ಹೋದರೂ ಈಗಲೇ ಕುಡಿಯಲು ನೀರಿಲ್ಲ. ಕಾಡುಪ್ರಾಣಿಗಳು ಹೊಲಕ್ಕೆ ಬರುತ್ತಿವೆ. ಅದರಿಂದ ಬೆಳೆಯೂ ನಷ್ಟವಾಗುತ್ತಿದೆ. ಪಂಪ್‌ಸೆಟ್‌ಗಳಿಂದ ನೀರೆತ್ತಲು ವಿದ್ಯುತ್ ಕೂಡ ಇತ್ತೀಚೆಗೆ ಸರಿಯಾಗಿ ಸಿಗುತ್ತಿಲ್ಲ. ಐದು ತಾಸು ವಿದ್ಯುತ್‌ ನೀಡಿದರೆ ಬೆಳೆಗಳಿಗೆ ಹೇಗೆ ನೀರು ಹಾಯಿಸಬೇಕು? ಎಂದು ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ರೈತ ಓಬಣ್ಣ ಪ್ರಶ್ನಿಸುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ