ಗಿಡಗಳಿಗೆ ಅಡಿಕೆ ಸಿಪ್ಪೆ ಹೊದಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಪರಿಸರಕ್ಕೆ ಪೂರಕ ವಾತಾವರಣ ನಿರ್ಮಿಸುವ ದೃಷ್ಟಿಯಿಂದ ವಿವಿಧ ತಳಿಗಳ ಸಸಿಗಳನ್ನು ಗೋಮಾಳದಲ್ಲಿ ನೆಟ್ಟು ಪೋಷಿಸುವ ಕಾರ್ಯದಲ್ಲಿ ಲಯನ್ಸ್ ಕ್ಲಬ್ ಕಾರ್ಯೋನ್ಮುಖವಾಗಿರುವುದು ಹೆಮ್ಮೆಯ ವಿಷಯ ಎಂದು ಲಯನ್ಸ್ ಜಿಲ್ಲಾ ಗೌರ್‍ನರ್ ಡಾ. ಮೆಲ್ವಿನ್ ಡಿಸೋಜ ಹೇಳಿದರು. ತಾಲೂಕಿನ ಕುರುವಂಗಿ ಗ್ರಾಮದ ಗೋಮಾಳ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಲಯನ್ಸ್ ಕ್ಲಬ್ ನಿಂದ ದಿ. ಬಿ.ಎನ್.ಮಲ್ಲೇಶ್‌ರವರ ಸ್ಮರಣಾರ್ಥ ಲಯನ್ಸ್ ಸುವರ್ಣವನದಲ್ಲಿ ಸುಮಾರು 4200 ಸಸಿಗಳನ್ನು ನೆಡಲಾಗಿದ್ದು ಶನಿವಾರ ಗಿಡಗಳಿಗೆ ಅಡಿಕೆ ಸಿಪ್ಪೆ ಹೊದಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿ ಸೌಂದರ್ಯ ಹೆಚ್ಚಿಸುವ ಹಾಗೂ ಮಾನವನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಸಸಿನೆಡುವ ಕಾರ್ಯಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಸಸಿಗಳನ್ನು ಪೋಷಿಸುವ ಮೂಲಕ ಹೆಮ್ಮರವಾಗಿ ಬೆಳೆಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು. ಜಿಲ್ಲಾ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ರಮೇಶ್ ಮಾತನಾಡಿ, ಕುರುವಂಗಿ ಸಮೀಪದ 50 ಎಕರೆ ಗೋಮಾಳ ಪ್ರದೇಶದಲ್ಲಿ ಹಲಸು, ನೇರಳೆ, ನೆಲ್ಲಿ, ಸೀಮೆ, ಅರಳಿ ಹಾಗೂ ಆಲದ ಸಸಿಗಳನ್ನು ನೆಡಲಾಗಿದೆ. ಇವುಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ಲಿಯೋ ಕ್ಲಬ್‌ಗೆ ವಹಿಸಿ ಕೊಡಲಾಗಿದೆ. ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದಿ. ಬಿ.ಎನ್. ಮಲ್ಲೇಶ್‌ರವರ ಕನಸಿನಂತೆ ಸಸಿ ನೆಡುವ ಕಾರ್ಯಕ್ಕೆ ಲಯನ್ಸ್ ಕ್ಲಬ್ ಮುಂದಾಗಿದೆ ಎಂದು ತಿಳಿಸಿದರು. ಅರಣ್ಯ ಇಲಾಖೆ ಸಹಾಯಕ ವಲಯ ಅರಣ್ಯಾಧಿಕಾರಿ ವೆಂಕಟಪ್ಪ, ದಾನಿ ಸುಹಾಸ್ ಮಲ್ಲೇಶ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಟಿ.ನಾರಾಯಣಸ್ವಾಮಿ, ಖಜಾಂಚಿಗಳಾದ ಸುಧಾಕರ್‌ಶೆಟ್ಟಿ, ಕೆ.ಇ.ಬಾಲಕೃಷ್ಣ, ಸದಸ್ಯರಾದ ಡಾ. ಜೆ.ಪಿ.ಕೃಷ್ಣೇಗೌಡ, ಡಾ. ಕೆ.ಸುಂದರಗೌಡ, ಮಾಜಿ ಅಧ್ಯಕ್ಷರಾದ ವೆಂಕಟೇಶ್, ಹರೀಶ್, ನೇತ್ರ ವೆಂಕಟೇಶ್, ಲಯನ್ಸ್ ಕ್ಲಬ್ ಚಿಕ್ಕಮಗಳೂರು ಪರಿಸರ ವಿಭಾಗದ ಕೋಆರ್ಡಿನೆಟರ್ ಪುಷ್ಪರಾಜ್, ಲಯನ್ಸ್ ಜಿಲ್ಲಾ ಪರಿಸರ ವಿಭಾಗದ ತಾರಾನಾಥ್ ಹಾಜರಿದ್ದರು. 21 ಕೆಸಿಕೆಎಂ 2 ಚಿಕ್ಕಮಗಳೂರು ತಾಲೂಕಿನ ಕುರುವಂಗಿ ಗ್ರಾಮದ ಗೋಮಾಳ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದ್ದು ಶನಿವಾರ ಗಿಡಗಳಿಗೆ ಅಡಿಕೆ ಸಿಪ್ಪೆ ಹೊದಿಸುವ ಕಾರ್ಯಕ್ಕೆ ಡಾ. ಮೆಲ್ವಿನ್ ಡಿಸೋಜ ಚಾಲನೆ ನೀಡಿದರು. ಜಿ. ರಮೇಶ್, ಡಾ. ಜೆ.ಪಿ. ಕೃಷ್ಣೇಗೌಡ, ಜಿ. ನಾರಾಯಣಸ್ವಾಮಿ ಇದ್ದರು.