ಕನ್ನಡಪ್ರಭ ವಾರ್ತೆ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಗೆ ತಡೆಹಿಡಿದ ಅನುದಾನವನ್ನು ತಕ್ಷಣ ಬಿಡುಗಡೆಗೊಳಿಸಬೇಕು. ನಡೆದಿರುವ ಕಾಮಗಾರಿ ಬಗ್ಗೆ ಅನುಮಾನವಿದ್ದರೆ ತನಿಖೆಗೊಳಪಡಿಸಿ, ಸ್ಥಗಿತಗೊಂಡ ಕಾಮಗಾರಿಯನ್ನು ಆರಂಭಿಸಿ, ಶೀಘ್ರವಾಗಿ ಪ್ರವಾಸಿಗರಿಗೆ ಮುಕ್ತಗೊಳಿಸುವಂತೆ ಹಾಗೂ ಸುಳ್ಳು ಅಪಪ್ರಚಾರ ಮಾಡುವವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಮಾಜಿ ಸಚಿವ, ಶಾಸಕ ಸುನೀಲ್ ಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರು ಶನಿವಾರ ಕಾರ್ಕಳ ವಿಕಾಸ ಕಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಡೆಹಿಡಿದ ಅನುದಾನ ಬಿಡುಗಡೆ ಮಾಡಲು ಸರ್ಕಾರ ತಯಾರಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ನಗರ ನಕ್ಸಲರು, ಕಮ್ಯುನಿಸ್ಟರು ಎಡಪಂಥೀಯರು ಅನ್ಯಧರ್ಮಿಯರು ನಮ್ಮ ವಿಚಾರಗಳಿಗೆ ದಾಳಿ ಮಾಡುತಿದ್ದಾರೆ. ಅದೊಂದು ವ್ಯವಸ್ಥಿತ ಸಂಚಾಗಿದೆ. ಈ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ ಎಂದ ಅವರು, ಸಾಮಾಜಿಕ ಬದ್ಧತೆ ಇಲ್ಲದವರು ಟೀಕೆ ಮಾಡುವಂತಾಗಿದೆ. ನಾನು ಕಾರ್ಕಳವನ್ನು ಪ್ರೀತಿಸುತ್ತೇನೆ. ಆದ್ದರಿಂದ ಕಾರ್ಕಳದಲ್ಲಿ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಮಾಣದ ಪ್ರೋತ್ಸಾಹ ನೀಡುತ್ತಿದ್ದೇನೆ ಎಂದರು. ಪರಶುರಾಮ ಥೀಮ್ ಪಾರ್ಕ್ ಹತ್ತು ವರ್ಷಗಳ ಕನಸಾಗಿದೆ. ಅದಕ್ಕಾಗಿ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ. ಕನಸಿನ ಯೋಜನೆಗೆ ಕಾಂಗ್ರೆಸ್ ಅಪಪ್ರಚಾರ ನಡೆಸಿ ಮುಂದಿನ ಲೋಕಸಭಾ ಚುನಾವಣೆಗೆ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ ಎಂದರು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಉದ್ಘಾಟನೆ: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಥೀಮ್ ಪಾರ್ಕ್ ಉದ್ಘಾಟನೆ ಮಾಡಲಾಗಿದೆ. ಇದು ಎಲ್ಲ ಸರ್ಕಾರಗಳಲ್ಲಿ ಸಹಜ ಪ್ರಕ್ರಿಯೆಯಾಗಿದೆ. 16.50 ಕೋಟಿ ರು. ವೆಚ್ಚದಲ್ಲಿ ಬಿಜೆಪಿ ಸರ್ಕಾರ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಮಂಜೂರಾತಿ ನೀಡಿತ್ತು. ಆದರೆ ಜನವರಿ ತಿಂಗಳ ಬಳಿಕ ಬಿಜೆಪಿ ಸರ್ಕಾರ ಅನಮೋದಿಸಿದ್ದ ಎಲ್ಲ ಅನುದಾನವನ್ನು ಸಿದ್ದರಾಮಯ್ಯ ಸರ್ಕಾರ ತಡೆಹಿಡಿದಿದ್ದು ಅದರಲ್ಲೂ 8 ಕೋಟಿ ಅನುದಾನ ಕೂಡ ಒಂದಾಗಿದೆ. ಆ 8 ಕೋಟಿ ಅನುದಾನ ತರಲು ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಅಸಮರ್ಥ ರಾಗಿದ್ದಾರೆ. ಸರ್ಕಾರ ಹಣ ಬಿಡುಗಡೆ ಮಾಡಲು ತಯಾರಿಲ್ಲವಾದರೆ ಭಿಕ್ಷೆ ಬೇಡಿಯಾದರೂ ಮೂರ್ತಿ ನಿರ್ಮಾಣ ಮಾಡಿಯೇ ಸಿದ್ಧ ಎಂದು ಸುನೀಲ್ ಕುಮಾರ್ ಹೇಳಿದರು. ಬಿಜೆಪಿ ಮುಖಂಡ ಮಣಿರಾಜ ಶೆಟ್ಟಿ ಮಾತನಾಡಿ, ಕಾರ್ಕಳ ಶೈಕ್ಷಣಿಕ, ಔದ್ಯೋಗಿಕ, ಕೈಗಾರಿಕ ಸೇರಿದಂತೆ ಎಲ್ಲ ರಂಗದಲ್ಲಿ ಅಭಿವೃದ್ಧಿ ಮಾಡಿದ ಕೀರ್ತಿ ವಿ. ಸುನೀಲ್ ಕುಮಾರ್ ಅವರಿಗೆ ಸಲ್ಲುತ್ತದೆ. ಪ್ರವಾಸೋದ್ಯಮ ಹಿತದೃಷ್ಟಿಯಿಂದ ಪರಶುರಾಮ ಥೀಮ್ ಪಾರ್ಕ್ ಮಾಡಲಾಗಿತ್ತು, ಆದರೆ ಮೂರ್ತಿಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬಿಜೆಪಿ ಪ್ರಭಾವವನ್ನು ಕಡಿಮೆಗೊಳಿಸುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ ಎಂದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ ಸಂಘಟಿತರಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಬಿಜೆಪಿ ಕಾರ್ಯಕರ್ತರು ಸಿದ್ಧರಾಗಿದ್ದಾರೆ ಎಂದರು. ಸಭೆಯಲ್ಲಿ ಪಕ್ಷದ ಪ್ರಮುಖರಾದ ಸುಧೀರ್ ಹೆಗ್ಡೆ ಬೈಲೂರು, ರೇಶ್ಮಾ ಉದಯ್ ಶೆಟ್ಟಿ , ಬೋಳ ಸದಾಶಿವ ಸಾಲಿಯಾನ್ , ಬಿಜೆಪಿ ಉಪಾಧ್ಯಕ್ಷೆ ಸವಿತಾ ಎಸ್. ಕೋಟ್ಯಾನ್, ರವೀಂದ್ರ ಮಡಿವಾಳ ಉಪಸ್ಥಿತರಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.