ಕನಕಪುರ: ರೈತ ಸಮಸ್ಯೆಗಳನ್ನು ಪರಿಹರಿಸಲಾಗದ ಹಾಗೂ ರೈತರ ಸಂಕಷ್ಟಗಳನ್ನು ಅರಿತು ಕೆಲಸ ಮಾಡದ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು, ತಾಲೂಕು ಕಚೇರಿ ವ್ಯವಸ್ಥೆ ಭ್ರಷ್ಟಾಚಾರದ ಕೂಪವಾಗಿದೆ. ರೈತರು ತಮ್ಮ ಸಮಸ್ಯೆಗಳನ್ನು ಹೊತ್ತು ದಿನನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. ರೈತ ಸಮಸ್ಯೆಗಳನ್ನು ಆಲಿಸಬೇಕಾದ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದ್ದು ದೇಶದಲ್ಲೇ ಅತಿ ಭ್ರಷ್ಟ ಕನಕಪುರ ತಾಲೂಕು ಕಚೇರಿ ಎಂದು ಆರೋಪಿಸಿದರು. ರೈತರ ಸಮಸ್ಯೆ ಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ತಹಸೀಲ್ದಾರ್ ಇದುವರೆಗೂ ಯಾವುದೇ ರೈತ ಸಭೆ ಕರೆದಿಲ್ಲ. ಕೂಡಲೇ ರೈತರ ಸಭೆ ನಡೆಸಿ ಸಮಸ್ಯೆ ಪರಿಹರಿಸದಿದ್ದಲ್ಲಿ ರಾಜ್ಯ ರೈತ ಸಂಘದ ನೇತೃತ್ವ ದಲ್ಲಿ ತಾಲೂಕು ಕಚೇರಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ರೈತ ಸಮಸ್ಯೆಗಳು ಹಾಗೂ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ ಮನವಿಯನ್ನು ಉಪ ತಹಸೀಲ್ದಾರ್ ಮನೋಹರ್ ಅವರಿಗೆ ನೀಡಲಾಯಿತು. ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಕೋಡಿಹಳ್ಳಿ ಕುಮಾರ್‌, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಶಿವರಾಜ್, ತಾಲೂಕು ಉಪಾಧ್ಯಕ್ಷ ಶಿವಕುಮಾರ್, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ರವಿಚಂದ್ರ, ಮುಖಂಡರಾದ ರಂಗಪ್ಪ ರಾಘವೇಂದ್ರ, ನಾಗೇಶ್, ಶ್ರೀಧರ್, ದೀಪು, ಕುಮಾರ್ ಇತರರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರ ತಾಲೂಕು ರೈತ ಸಂಘದ ಪದಾಧಿಕಾರಿಗಳು ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ನೇತೃತ್ವದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಉಪಾಧ್ಯಕ್ಷ ಕೋಡಿಹಳ್ಳಿ ಕುಮಾರ್‌, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಶಿವರಾಜ್ ಇತರರಿದ್ದರು.