ಕನ್ನಡಪ್ರಭ ವಾರ್ತೆ ಬೆಂಗಳೂರು
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈಗಾಗಲೇ ಸಹಾಯವಾಣಿಗೆ ಚಾಲನೆ ನೀಡಲಾಗಿದೆ. ಈವರೆಗೆ 109 ಮಂದಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಮ್ಮ ಅಧಿಕಾರಿಗಳು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ಕನ್ನಡಿಗರನ್ನು ತಲುಪುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ದೆಹಲಿ ನಿವಾಸಿ ಆಯುಕ್ತರು ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ಕದನ ವಿರಾಮದ ತನಕ ವಾಪಸ್ ಕಷ್ಟ:ಸಹಾಯವಾಣಿಗೆ ಕರೆ ಮಾಡಿದವರು ಆತಂಕ ವ್ಯಕ್ತಪಡಿಸಿದ್ದಾರೆ. ಕರ್ನಾಟಕಕ್ಕೆ ವಾಪಸ್ ಬರುವುದಕ್ಕೆ ವಿಶೇಷ ವಿಮಾನ ಅಥವಾ ಬೇರೆ ವ್ಯವಸ್ಥೆ ಬಗ್ಗೆ ಕೇಳುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಏರ್ ಟ್ರಾಫಿಕ್ ನಿಷೇಧಿಸಿರುವುದರಿಂದ ವಿಮಾನಗಳ ಹಾರಾಟ ಸಾಧ್ಯವಾಗುತ್ತಿಲ್ಲ. ಕದನ ವಿರಾಮ ಘೋಷಣೆಯಾಗಿ ವಿಮಾನ ಹಾರಾಟಕ್ಕೆ ಅವಕಾಶ ಸಿಕ್ಕ ಕೂಡಲೇ ಕೇಂದ್ರ ಸರ್ಕಾರ ವಿಶೇಷ ವಿಮಾನ ಅಥವಾ ಸಾಮಾನ್ಯ ವಿಮಾನ ಮೂಲಕ ಕರೆ ತರಲಿದೆ. ವಿಮಾನ ಹಾರಾಟಕ್ಕೆ ಅವಕಾಶ ಸಿಕ್ಕ ಕೂಡಲೇ ಮಾಹಿತಿ ನೀಡಲಾಗುವುದು. ಅಲ್ಲಿಯವರೆಗೂ ಶಾಂತರಾಗಿ ಇರುವಂತೆ ಇದೇ ವೇಳೆ ಸಚಿವರು ಮನವಿ ಮಾಡಿದರು.
ಹೆಲ್ಪ್‌ಲೈನ್‌ಗೆ ಕರೆ ಮಾಡಿ:
ಕೆಲ ಕನ್ನಡಿಗರು ದುಬೈ ಮತ್ತು ಬಹರೇನ್ ವಿಮಾನ ನಿಲ್ದಾಣಗಳಲ್ಲಿ ಸಿಲುಕಿದ್ದಾರೆ. ಅಲ್ಲಿಂದ ಕರ್ನಾಟಕಕ್ಕೆ ಕನೆಕ್ಟಿಂಗ್ ವಿಮಾನ ಇಲ್ಲ, ಸೌಲಭ್ಯವಿಲ್ಲ. ಹೊರ ಹೋಗಲು ವೀಸಾ ಇಲ್ಲ ಎಂದು ಹೇಳುತ್ತಿದ್ದಾರೆ. ಈಗಾಗಲೇ ಸ್ಟೇಟ್ ಎಮರ್ಜೆನ್ಸಿ ಆಪರೇಷನ್ ಸೆಂಟರ್‌ನಿಂದ ಸಹಾಯವಾಣಿ ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ- 08022340676 ಅಥವಾ 22253707ಗೆ ಕರೆ ಮಾಡಿ ಮಾಹಿತಿ ಕೊಡಬೇಕು. ಈ ಮಾಹಿತಿಯನ್ನು ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖಾಂತರ ಅಲ್ಲಿನ ಎಂಬೆಸಿ ಕಚೇರಿಗೆ ನೀಡುತ್ತೇವೆ. ಈ ಮೂಲಕ ಸ್ಥಳೀಯ ವೀಸಾ ಕೊಡಿಸಲು ವ್ಯವಸ್ಥೆ ಮಾಡುವುದಾಗಿ ಕೃಷ್ಣ ಬೈರೇಗೌಡ ಹೇಳಿದರು.ಖರ್ಚು ಭರಿಸಲು ಸರ್ಕಾರ ಸಿದ್ಧ:
ಸ್ಥಳೀಯ ಎಂಬೆಸಿ ಮುಖಾಂತರ ವೀಸಾ ಪಡೆದು ವಿಮಾನ ನಿಲ್ದಾಣದಿಂದ ಹೊರ ಬಂದು ಹೋಟೆಲ್‌ನಲ್ಲಿ ತಂಗಬಹುದು. ನಮಗೆ ನೇರವಾಗಿ ಹೋಟೆಲ್ ಖರ್ಚು ಭರಿಸಲು ಅವಕಾಶವಿಲ್ಲ. ಕೇಂದ್ರ ಸರ್ಕಾರವೇ ಅದಕ್ಕೆ ಅವಕಾಶ ಮಾಡಬೇಕು. ಕೇಂದ್ರ ಸರ್ಕಾರ ಕನ್ನಡಿಗರಿಗೆ ಖರ್ಚು ಮಾಡುವ ಹಣವನ್ನು ನಾವು ಕೇಂದ್ರ ಸರ್ಕಾರಕ್ಕೆ ಭರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಎಂಬೆಸಿಯಲ್ಲಿ ರಿಜಿಸ್ಟರ್ ಮಾಡಿ:
ಮಧ್ಯಪ್ರಾಚ್ಯ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಕೆಲ ಕನ್ನಡಿಗರೊಂದಿಗೆ ಮಾತನಾಡಿದ್ದೇನೆ. ಕೆಲ ಶಾಸಕರು ಮಧ್ಯಪ್ರಾಚ್ಯದಲ್ಲಿ ಸಿಲುಕಿದ್ದಾರೆ. ಈ ಮಧ್ಯಪ್ರಾಚ್ಯದಲ್ಲಿ ತಾತ್ಕಾಲಿಕವಾಗಿ ನೆಲೆಸಿ ಉದ್ಯೋಗ ಮಾಡುತ್ತಿರುವವರು ಸ್ಥಳೀಯ ಸರ್ಕಾರದ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ಥಳೀಯ ಎಂಬೆಸಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆಗ ನಮ್ಮ ಸರ್ಕಾರವು ಎಂಬೆಸಿ ಮುಖಾಂತರ ನಿಮ್ಮನ್ನು ತಲುಪಲು ಸಾಧ್ಯವಾಗುತ್ತದೆ. ಕಾಲಕಾಲಕ್ಕೆ ಸಲಹೆ ನೀಡಲು ಸಹಾಯವಾಗಲಿದೆ ಎಂದು ಹೇಳಿದರು.ಯೂರೋಪ್, ಏಷ್ಯಾ, ಅಮೆರಿಕದಲ್ಲಿ ಇರುವ ಕನ್ನಡಿಗರಿಗೆ ತೊಂದರೆ ಇಲ್ಲ. ಅವರು ಬೇರೆ ಮಾರ್ಗದ ಮುಖಾಂತರ ಭಾರತಕ್ಕೆ ಬರಲು ಅವಕಾಶವಿದೆ. ಓರ್ವ ಭಾರತೀಯನ ಸಾವಿನ ಬಗ್ಗೆ ಮಾಹಿತಿ ಇದೆ. ಗಾಯಾಳುಗಳ ಬಗ್ಗೆ ಮಾಹಿತಿ ಇಲ್ಲ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆ ಬಗ್ಗೆ ಮಾಹಿತಿ ನೀಡಬೇಕು ಎಂದು ಪ್ರಶ್ನೆಯೊಂದಕ್ಕೆ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿದರು.