ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲಾಸ್ಪತ್ರೆಯಲ್ಲಿ ಎಕೋ ಕಾರ್ಡಿಯಾಕ್ ಹಾಗೂ ಹೆಚ್ಚುವರಿಯಾಗಿ ಅಲ್ಟ್ರಾಸೌಂಡ್ ಯಂತ್ರದ ಅಗತ್ಯವಿದ್ದು, ಅದನ್ನು ಪೂರೈಸಲು ಕ್ರಮ ವಹಿಸುವಂತೆ ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅವರಿಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಸೂಚನೆ ನೀಡಿದರು.ರಾಮನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಅವರು ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪರಿಶೀಲಿಸಿ ವೈದ್ಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಮತ್ತೊಂದು ಅಲ್ಟ್ರಾಸೌಂಡ್ ಯಂತ್ರದ ಅಗತ್ಯವಿದೆ. ಯಾವುದೇ ಶಸ್ತ್ರ ಚಿಕಿತ್ಸೆಗೆ ಮುನ್ನ ಹೃದಯದ ಆರೋಗ್ಯವನ್ನು ತಿಳಿಯಬೇಕಾಗಿದೆ. ಹೀಗಾಗಿ ಎಕೋ ಕಾರ್ಡಿಯಾಕ್ ಯಂತ್ರದ ಅವಶ್ಯಕತೆಯೂ ಇದೆ. ಈ ಕೊರತೆ ನೀಗಿಸಲು ಅಗತ್ಯ ಕ್ರಮವಹಿಸಲು ತಾವು ಸಿಇಒ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.ಹೃದಯಾಘಾತದ ಲಕ್ಷಣಗಳು ಕಂಡು ಬಂದರೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಲಭ್ಯವಿದೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗೆ ಮೆಡಿಕಲ್ ಕಾಲೇಜುಗಳು ಅಥವಾ ಹೃದಯ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಜಾರಿಯಲ್ಲಿದೆ ಎಂದರು.
ಹೃದಯಾಘಾತದ ವೇಳೆ ಪ್ರಾಥಮಿಕ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯ ಜೊತೆಯಲ್ಲಿ ಕನಕಪುರ ಮತ್ತು ಮಾಗಡಿಯ ಜನರಲ್ ಆಸ್ಪತ್ರೆಗಳಲ್ಲೂ ಸೌಲಭ್ಯಗಳು ಲಭ್ಯವಿದೆ. ಪ್ರಾಥಮಿಕ ಚಿಕಿತ್ಸೆಯನ್ನು ಹೃದಯಾಘಾತ ಕಾಣಿಸಿಕೊಂಡ 3 ರಿಂದ 6 ಗಂಟೆಯೊಳಗೆ ನೀಡಬೇಕಾಗಿದೆ. ಹೆಪ್ಪುಗಟ್ಟಿದ ರಕ್ತವನ್ನು ತಿಳಿಗೊಳಿಸಲು ಇಂಜಕ್ಷನ್ ಅಗತ್ಯವಿದ್ದು, ತಲಾ ಇಂಜಕ್ಷನ್‌ನ ಬೆಲೆ ಸುಮಾರು 15 ಸಾವಿರ ರು.ಗಳಿವೆ. ಜಿಲ್ಲಾಸ್ಪತ್ರೆಯಲ್ಲಿ ಈ ಸೌಲಭ್ಯ ಕಳೆದ 6 ತಿಂಗಳುಗಳಿಂದ ಲಭ್ಯವಿದ್ದು, ಈವರೆಗೂ ಮೂರು ಮಂದಿ ಈ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.ಜಿಲ್ಲಾಸ್ಪತ್ರೆಯ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವೈದ್ಯರು, ಸ್ಟಾಫ್ ನರ್ಸ್ ಮುಂತಾದ ಸಿಬ್ಬಂದಿಯ ಕೊರತೆ ಇದೆ. ಈ ವಿಚಾರದಲ್ಲಿ ತಾವು ಜಿಪಂ ಸಿಇಓ ದಿಗ್ವಿಜಯ್ ಬೋಡ್ಕೆಯವರ ಬಳಿ ಚರ್ಚಿಸಿದ್ದಾಗಿ, ಎನ್.ಎಚ್.ಎಂ ಯೋಜನೆಯಡಿಯಲ್ಲಿ ಸ್ಟಾಫ್ ನರ್ಸ್‌ಗಳನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನುಳಿದಂತೆ ಸಿಬ್ಬಂದಿ ಕೊರತೆ ನೀಗಿಸಲು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ರವಾನೆಯಾಗಿದೆ. ಬಹುಶಃ ಆರ್ಥಿಕ ಇಲಾಖೆಯ ಅನುಮತಿ ಬೇಕಾಗಿದೆ. ತಾವು ಸಹ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಹೇಳಿದರು.
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಮೈತ್ರಿ ಅಭ್ಯರ್ಥಿಗೆ ಸಂಬಂಧಿಸಿದಂತೆ ಸಂಸದ ಡಾ.ಸಿ.ಎನ್.ಮಂಜುನಾಥ್ ಪ್ರತಿಕ್ರಿಯಿಸಿ, ಎರಡೂ ಪಕ್ಷಗಳ ವರಿಷ್ಠರು ಅಭ್ಯರ್ಥಿಯನ್ನು ನಿರ್ಧರಿಸುತ್ತಾರೆ. ತಾವು ಸಂಸದರಾಗಿದ್ದು, ತಮ್ಮ ಕರ್ತವ್ಯವನ್ನು ನಿರ್ವಹಿಸುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಜಿಪಂ ಸಿಇಓ ದಿಗ್ವಿಜಯ್ ಬೋಡ್ಕೆ, ಡಿಎಚ್‌ಒ ಡಾ.ನಿರಂಜನ್ ಮತ್ತು ಇತರರು ಹಾಜರಿದ್ದರು.
-----------------------------16ಕೆಆ
ರ್ ಎಂಎನ್ 9,10.ಜೆಪಿಜಿ9.ರಾಮನಗರ ಜಿಲ್ಲಾಸ್ಪತ್ರೆಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚೆ ನಡೆಸಿದರು.
10.ಜಿಲ್ಲಾಸ್ಪತ್ರೆಯಲ್ಲಿ ಡಾ.ಸಿ.ಎನ್.ಮಂಜುನಾಥ್ ರೋಗಿಯ ಆರೋಗ್ಯ ತಪಾಸಣೆ ಮಾಡಿದರು.-------------------------------