ಮಾಗಡಿ: ಗ್ರಾಮ ಸಭೆಗಳಲ್ಲಿ ಬಂದ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದು ಬಾಚೇನಹಟ್ಟಿ ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಧನಂಜಯ ನಾಯ್ಕ್ ಹೇಳಿದರು.
ತಾಲೂಕಿನ ಬಾಚೇನಹಟ್ಟಿ ಗ್ರಾಮ ಪಂಚಾಯ್ತಿಯಲ್ಲಿ ನಡೆದ 2023-24ನೇ ಸಾಲಿನ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಸಭೆಗಳಿಗೆ ಸಾರ್ವಜನಿಕರು ಖುದ್ದು ಹಾಜರಾಗಿ ಕಂದಾಯ, ಕೃಷಿ, ತೋಟಗಾರಿಕೆ, ಶಿಕ್ಷ ಣ, ಆರೋಗ್ಯ, ಪಶು ಸಂಗೋಪನೆ, ಸಮಾಜ ಕಲ್ಯಾಣ ಮುಂತಾದ ಇಲಾಖೆಗಳಿಂದ ದೊರೆಯುವ ಸವಲತ್ತುಗಳ ಮಾಹಿತಿ ಪಡೆದುಕೊಳ್ಳಲು ಸಭೆಗಳಿಗೆ ಹಾಜರಾಗಬೇಕು. ಬಾಚೇನಹಟ್ಟಿ ಗ್ರಾಪಂ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಮತ್ತು ನೀರಿನ ಕಂದಾಯವನ್ನು ಸಕಾಲದಲ್ಲಿ ಪಾವತಿಸುವಂತೆ ಮನವಿ ಮಾಡಿದರು.ಅಧಿಕಾರಿಗಳ ಗೈರು: ಗ್ರಾಮಸಭೆಗೆ ಅಬಕಾರಿ, ಬೆಸ್ಕಾಂ, ಕೃಷಿ ಇಲಾಖೆ ಸೇರಿದಂತೆ ಇನ್ನೂ ಅನೇಕ ಅಧಿಕಾರಿಗಳು ಗೈರಾಗಿರುವುದಕ್ಕೆ ಸಂಬಂಧಿಸಿದಂತೆ ಬಾಚೇನಹಟ್ಟಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.
ಗ್ರಾಮಸ್ಥರು, ರೈತರಿಗೆ ಸಾಕಷ್ಟು ಸಮಸ್ಯೆಗಳಿರುತ್ತದೆ. ಅಧಿಕಾರಿಗಳ ಮುಂದೆ ನಾವು ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬೇಕಾಗುತ್ತದೆ ಎಂಬ ಕೂಗು ಕೇಳುತ್ತಿದಂತೆ ಸಭೆಯ ನೋಡಲ್ ಅಧಿಕಾರಿ ಮಧ್ಯಪ್ರವೇಶಿಸಿ, ಅಧಿಕಾರಿಗಳ ಗೈರು ಹಾಜರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು. ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಸಮಾಧಾನಪಡಿಸಿದರು.ಕಾವೇರಿದ ಚರ್ಚೆ:
ಬಾಚೇನಹಟ್ಟಿ ಗ್ರಾಪಂ ವ್ಯಾಪ್ತಿಯ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಸಂಪನ್ಮೂಲ ಅಧಿಕಾರಿ ನಾಗರತ್ನ ಮಾತನಾಡುವ ವೇಳೆ ಅಧಿಕಾರಿ ನಾಗರತ್ನ ಅವರಿಗೆ ಮಾಹಿತಿ ಕೊರತೆಯಿದ್ದು, ಉದ್ದೇಶಪೂರ್ವಕವಾಗಿ ನಮ್ಮನ್ನು ದೂಷಿಸುತ್ತಿದ್ದಾರೆ ಎಂದು ಗ್ರಾಪಂ ಸದಸ್ಯ ಅಡಕಮಾರನಹಳ್ಳಿ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು. ಪ್ರಕಾಶ್ ಹಾಗೂ ಅಧಿಕಾರಿ ನಾಗರತ್ನ ನಡುವೆ ಮಾತಿನ ಚಕಮಕಿ ನಡೆದು ಚರ್ಚೆ ವಿಕೋಪಕ್ಕೆ ತಿರುಗುವ ವೇಳೆ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಚರ್ಚೆಯನ್ನು ತಿಳಿಗೊಳಿಸಿದರು. ಬಳಿಕ ವಿವಿಧ ಇಲಾಖೆಗಳ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.ಸಭೆಯಲ್ಲಿ ಪಿಡಿಒ ಪುಟ್ಟಹನುಮಂತರಾಜು, ಉಪಾಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ವೆಂಕಟಲಕ್ಷ್ಮಮ್ಮ, ಯೋಗೇಶ್, ಶೋಭರಾಣಿ, ರಂಗಮ್ಮ, ಚಂದ್ರಿಬಾಯಿ, ವಿಜಯ, ಪದ್ಮಾವತಿ, ಕೆ.ರಂಗನಾಥ್, ನಾರಾಯಣಪ್ಪ, ಗಿರಿಜಾಂಬ, ಲಕ್ಷ್ಮಣ, ಮುಖಂಡರಾದ ಶಿವಮೂರ್ತಿ, ಜಯರಾಮ್, ಮಹಂತೇಶ್, ನಾರಾಯಣ್, ವಿ.ಎಸ್.ಎಸ್.ಎನ್ ಅಶ್ವತ್ಥ ನಾರಾಯಣ್ ಇತರರು ಭಾಗವಹಿಸದ್ದರು.
28ಮಾಗಡಿ4: ಮಾಗಡಿ ತಾಲೂಕಿನ ಬಾಚೇನಹಟ್ಟಿ ಗ್ರಾಪಂನಲ್ಲಿ ನಡೆದ ಗ್ರಾಮ ಸಭೆಯನ್ನು ಗಣ್ಯರು ಉದ್ಘಾಟಿಸಿದರು.